ದಾವಣಗೆರೆ : ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಆಮ್ಲಜನಕ ಸಿಲಿಂಡರ್ ಸ್ಫೋಟ

ದಾವಣಗೆರೆ : ದಾವಣಗೆರೆ ಜಿಲ್ಲೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ (ಆಪರೇಷನ್ ಥಿಯೇಟರ್) ಮಂಗಳವಾರ ಬೆಳಿಗ್ಗೆ ಆಮ್ಲಜನಕ (ಆಕ್ಸಿಜನ್) ಸಿಲಿಂಡರ್ ಸ್ಫೋಟಗೊಂಡ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಸ್ಫೋಟದ ಪರಿಣಾಮ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿದ್ದ ಕೆಲವು ವೈದ್ಯಕೀಯ ಉಪಕರಣಗಳು ಬೆಂಕಿಗಾಹುತಿಯಾಗಿದ್ದು, ಸುತ್ತಮುತ್ತಲಿನ ಇತರೆ ಕೊಠಡಿಗಳಿಗೂ ಹಾನಿಯಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಯ ಆರೋಗ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ಹೊರಬಂದಿದ್ದಾರೆ.
 ಬೆಳಿಗ್ಗೆ 8:30ರ ಸುಮಾರಿಗೆ ಈ ಘಟನೆ ನಡೆದಿದ್ದು, ವೈದ್ಯರು, ದಾದಿಯರು ಮತ್ತು ಇತರ ಆಸ್ಪತ್ರೆ ಸಿಬ್ಬಂದಿ ಆಪರೇಷನ್ ಥಿಯೇಟರ್ 5 ಮತ್ತು 6 ರಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ಅಮ್ಲಜನಕ ಸಿಲಿಂಡರ್‌ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ನಂತರ ಸಿಲಿಂಡರ್ ದೊಡ್ಡ ಸ್ಫೋಟದೊಂದಿಗೆ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಶಸ್ತ್ರಚಿಕಿತ್ಸಾ ಕೊಠಡಿ ಹಾಗೂ ಯಂತ್ರೋಪಕರಣಗಳಿಗೆ ಹಾನಿಯಾಗಿದೆ ಎಂದು ಹೇಳಲಾಗಿದೆ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು. ಇದೇ ವೇಳೆ ಸಂಬಂಧಿತ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಘಟನೆಯ ಕುರಿತು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಪ್ರತಿಕ್ರಿಯಿಸಿ, “ಘಟನೆ ನಡೆದ ವೇಳೆ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಕೇವಲ ಏಳು ಅಥವಾ ಎಂಟು ಸಿಬ್ಬಂದಿ ಮಾತ್ರ ಇದ್ದರು. ಏಕಾಏಕಿ ಕಿಡಿ ಕಾಣಿಸಿಕೊಂಡಿತು. ತಕ್ಷಣವೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡೆವು. ಕೂಡಲೇ ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಲಾಯಿತು. ಅದೃಷ್ಟವಶಾತ್ ಆ ಸಮಯದಲ್ಲಿ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಯಾವುದೇ ರೋಗಿ ಇರಲಿಲ್ಲ” ಎಂದು ತಿಳಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement