ಮಯೂರ್ಭಂಜ್ (ಒಡಿಶಾ): ದಟ್ಟ ಅಡವಿಯಲ್ಲಿ ಆಹಾರಕ್ಕಾಗಿ ತೆರಳಿದ್ದ ದಂಪತಿಯ ಮೇಲೆ ಕರಡಿಗಳ ಗುಂಪು ದಾಳಿ ಮಾಡಿದಾಗ, ತನ್ನ ಪ್ರಾಣದ ಹಂಗು ತೊರೆದು ಕೊಡಲಿಯೊಂದಿಗೆ ಹೋರಾಡಿ ಪತಿಯನ್ನು ಸಾವಿನ ದವಡೆಯಿಂದ ಪಾರು ಮಾಡಿದ ಪತ್ನಿಯ ಸಾಹಸಗಾಥೆ ಈಗ ಒಡಿಶಾದಲ್ಲಿ ಚರ್ಚೆಯಾಗುತ್ತಿದೆ.
ಒಡಿಶಾದ ಕರಂಜಿಯಾ ಅರಣ್ಯ ವ್ಯಾಪ್ತಿಯ ಮಿಲು ಗ್ರಾಮದ ಬಳಿಯಿರುವ ಹಾತಿಸಾಲಬೇಡ ಕಾಡಿನಲ್ಲಿ ಮಂಗಳವಾರ ಈ ಘಟನೆ ನಡೆದಿದೆ. 41 ವರ್ಷದ ಆದಿವಾಸಿ ಮಹಿಳೆ ಲಿಲಿ ಸೋರೆನ್ ಮತ್ತು ಅವರ ಪತಿ ಮಾಲ್ಡೆ ಸೋರೆನ್ (48) ಇಬ್ಬರೂ ಸೊಪ್ಪು ಹಾಗೂ ಎಲೆಗಳನ್ನು ಸಂಗ್ರಹಿಸಲು ಕಾಡಿಗೆ ತೆರಳಿದ್ದರು. ಈ ವೇಳೆ ಆರು ಕಾಡು ಕರಡಿಗಳ ಗುಂಪು ಏಕಾಏಕಿ ಅವರ ಎದುರಾಗಿದೆ.
ಭೀಕರ ದಾಳಿ – ಕೆಚ್ಚೆದೆಯ ಪ್ರತಿರೋಧ:
ಕರಡಿಗಳ ಗುಂಪಿನಲ್ಲಿದ್ದ ಒಂದು ಕರಡಿ ಇದ್ದಕ್ಕಿದ್ದಂತೆ ಮಾಲ್ಡೆ ಅವರ ಮೇಲೆರಗಿ ಕೆಳಕ್ಕೆ ಕೆಡವಿದೆ. ಕರಡಿಯ ಭೀಕರ ದಾಳಿಯಿಂದಾಗಿ ಮಾಲ್ಡೆ ಅವರ ತಲೆಗೆ ಗಂಭೀರ ಗಾಯಗಳಾಗಿ ರಕ್ತ ಸುರಿಯಲಾರಂಭಿಸಿತು. ಈ ಸಂದರ್ಭದಲ್ಲಿ ಗಾಬರಿಗೊಂಡು ಓಡಿಹೋಗುವ ಬದಲು, ಲಿಲಿ ಅವರು ತಮ್ಮ ಕೈಯಲ್ಲಿದ್ದ ಸಾಂಪ್ರದಾಯಿಕ ಕೊಡಲಿಯನ್ನು ಹಿಡಿದು ಕರಡಿಯ ಮೇಲೆ ಸತತವಾಗಿ ಪ್ರಹಾರ ನಡೆಸಿದ್ದಾರೆ. ಲಿಲಿ ಅವರ ಅಪ್ರತಿಮ ಧೈರ್ಯ ಮತ್ತು ಸತತ ದಾಳಿಗೆ ಬೆದರಿದ ಕರಡಿ ಅಂತಿಮವಾಗಿ ಪತಿಯನ್ನು ಬಿಟ್ಟು ಕಾಡಿನೊಳಗೆ ಓಡಿಹೋಗಿದೆ.
ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಮಾಲ್ಡೆ ಅವರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ಆದರೆ ತಲೆಯ ಗಾಯಗಳು ಗಂಭೀರವಾಗಿದ್ದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೇಂದೂಜರ್ ಜಿಲ್ಲೆಯ ದೊಡ್ಡ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ವೈದ್ಯಾಧಿಕಾರಿಗಳ ಪ್ರಕಾರ ಮಾಲ್ಡೆ ಅವರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಹೋರಾಟದ ವೇಳೆ ಸಣ್ಣಪುಟ್ಟ ಗಾಯಗಳಾಗಿರುವ ಲಿಲಿ ಸೋರೆನ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಲಿಲಿ ಸೊರೆನ್ ಅವರ ಶೌರ್ಯವನ್ನು ಅರಣ್ಯ ಇಲಾಖೆ ಮುಕ್ತಕಂಠದಿಂದ ಶ್ಲಾಘಿಸಿದೆ. ಕರಂಜಿಯಾ ವಲಯ ಅರಣ್ಯಾಧಿಕಾರಿ ಪ್ರಶಾಂತ ಕುಮಾರ ಸ್ವೈನ್ ಪ್ರತಿಕ್ರಿಯಿಸಿ, “ಪ್ರಾಣಾಪಾಯದ ಪರಿಸ್ಥಿತಿಯಲ್ಲೂ ಲಿಲಿ ಅವರು ತೋರಿದ ಧೈರ್ಯ ನಿಜಕ್ಕೂ ಅಸಾಧಾರಣವಾದುದು” ಎಂದು ಬಣ್ಣಿಸಿದ್ದಾರೆ.
ಅರಣ್ಯದ ಅಂಚಿನಲ್ಲಿ ವಾಸಿಸುವ ಜನರು ಕಾಡಿಗೆ ತೆರಳುವಾಗ ಹೆಚ್ಚಿನ ಜಾಗರೂಕತೆ ವಹಿಸಬೇಕು ಮತ್ತು ವನ್ಯಜೀವಿಗಳ ದಾಳಿಯಿಂದ ಬಚಾವಾಗಲು ಅಗತ್ಯ ಅರಿವು ಹೊಂದಿರಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ