
ನವದೆಹಲಿ: ರೈಲ್ವೆ ಇಲಾಖೆಯು ಡಿಸೆಂಬರ್ 26 ರಿಂದ ಜಾರಿಗೆ ಬರುವಂತೆ ಪ್ರಯಾಣ ದರವನ್ನು ಹೆಚ್ಚಿಸಿದೆ. ಉಪನಗರ (Suburban) ರೈಲು ಪ್ರಯಾಣದ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲವಾದರೂ, ಸುದೀರ್ಘ ಪ್ರಯಾಣದ ದರಗಳು ಏರಿಕೆಯಾಗಲಿವೆ.
ಸಾಮಾನ್ಯ ದರ್ಜೆ (General Class): 215 ಕಿ.ಮೀ ವರೆಗಿನ ಪ್ರಯಾಣಕ್ಕೆ ದರದಲ್ಲಿ ಏರಿಕೆ ಇಲ್ಲ. ಆದರೆ 215 ಕಿ.ಮೀ ಗಿಂತ ಹೆಚ್ಚಿನ ದೂರದ ಪ್ರಯಾಣಕ್ಕೆ ಪ್ರತಿ ಕಿ.ಮೀ ಗೆ 1 ಪೈಸೆ ಹೆಚ್ಚಳವಾಗಲಿದೆ.
ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ, ನಾನ್-ಎಸಿ ಮತ್ತು ಎಸಿ ಎರಡರಲ್ಲೂ, ಪ್ರತಿ ಕಿಲೋಮೀಟರ್‌ಗೆ 2 ಪೈಸೆ ಹೆಚ್ಚಳವಾಗಲಿದೆ. ಇದರರ್ಥ, ನಾನ್-ಎಸಿ ಬೋಗಿಗಳಲ್ಲಿ 500 ಕಿ.ಮೀ ಪ್ರಯಾಣಿಸುವ ಪ್ರಯಾಣಿಕರು ಇನ್ನು ಮುಂದೆ 10 ರೂ. ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ.

ಉಪನಗರ ರೈಲು ಸೇವೆಗಳು ಅಥವಾ ಮಾಸಿಕ ಟಿಕೆಟ್‌ಗಳ ದರದಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದರ ಏರಿಕೆಯಿಂದಾಗಿ ರೈಲ್ವೆ ಇಲಾಖೆಗೆ ವಾರ್ಷಿಕ ಸುಮಾರು 600 ಕೋಟಿ ರೂ. ಹೆಚ್ಚುವರಿ ಆದಾಯ ಬರಲಿದೆ.
ಈ ಬೆಲೆ ಏರಿಕೆ ಏಕೆ ?
ಕಳೆದ ಒಂದು ದಶಕದಲ್ಲಿ ರೈಲ್ವೆ ಜಾಲ ಮತ್ತು ಕಾರ್ಯಾಚರಣೆ ವಿಸ್ತರಿಸಿದ್ದು, ಸಿಬ್ಬಂದಿ ವೆಚ್ಚ ಗಣನೀಯವಾಗಿ ಹೆಚ್ಚಿದೆ ಎಂದು ಇಲಾಖೆ ತಿಳಿಸಿದೆ. 2024-25ರ ಹಣಕಾಸು ವರ್ಷದಲ್ಲಿ ಸಿಬ್ಬಂದಿ ವೆಚ್ಚ 1,15,000 ಕೋಟಿ ರೂ.ಗಳಿಗೆ ಏರಿದ್ದರೆ, ಪಿಂಚಣಿ ವೆಚ್ಚ 60,000 ಕೋಟಿ ರೂ. ತಲುಪಿದೆ. ಒಟ್ಟಾರೆ ಕಾರ್ಯಾಚರಣೆಯ ವೆಚ್ಚ 2,63,000 ಕೋಟಿ ರೂ.ಗೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ