ಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ವಿಧೇಯಕ ವಿಧಾನ ಪರಿಷತ್‌ನಲ್ಲಿ ತಿರಸ್ಕೃತ; ಸರ್ಕಾರಕ್ಕೆ ಭಾರೀ ಮುಖಭಂಗ

ಬೆಂಗಳೂರು : ಪ್ರತಿಪಕ್ಷಗಳ ಭಾರೀ ವಿರೋಧದ ನಡುವೆ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ-2024 ಅನ್ನು ವಿಧಾನ ಪರಿಷತ್​ನಲ್ಲಿ ಶುಕ್ರವಾರ ತಿರಸ್ಕರಿಸಲಾಗಿದೆ. ಇದರಿಂದ ಕಾಂಗ್ರೆಸ್ ಸರ್ಕಾರಕ್ಕೆ ಮುಖಭಂಗವಾಗಿದೆ.
ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆಯನ್ನು ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಬೆಳಗ್ಗೆ ಮಂಡಿಸಿದ್ದರು.
ತಿದ್ದುಪಡಿ ವಿಧೇಯಕ ಮಂಡಿಸಿ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, 2003ರಿಂದ ವಿಧೇಯಕ ಜಾರಿಯಲ್ಲಿದೆ. 2003ರ ಮೇ 1 ರಿಂದ ದೇವಸ್ಥಾನಗಳಿಂದ ನಿಧಿ ಸಂಗ್ರಹಿಸಲಾಗುತ್ತಿದೆ. ಈಗಿರುವ ನಿಯಮದಂತೆ ಸರ್ಕಾರಕ್ಕೆ 8 ಕೋಟಿ ರೂ. ಸಲ್ಲಿಕೆ ಆಗುತ್ತಿದೆ. ಈಗಿನ‌ ಸಾಮಾನ್ಯ ಸಂಗ್ರಹಣ ನಿಧಿಯಿಂದ ಧಾರ್ಮಿಕ ಕೆಲಸ ಮಾಡಲು ಆಗುವುದಿಲ್ಲ. ಹೊಸ ನಿಯಮದಿಂದ 60 ಕೋಟಿ ರೂಪಾಯಿ ಹಣ ಸಂಗ್ರಹವಾಗುತ್ತದೆ. ‘ಸಿ’ ದರ್ಜೆಯ ದೇವಾಲಯಗಳ ನಿರ್ವಹಣೆಗೆ ನೆರವಾಗುತ್ತದೆ ಎಂದು ಹೇಳಿದರು.

ವಿಧೇಯಕದಲ್ಲಿದ್ದ ತಿದ್ದುಪಡಿ ಅಂಶಗಳಿಗೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಒಂದು ಕೋಟಿಗಿಂತಲೂ ಹೆಚ್ಚು ಆದಾಯ ಇರುವ ದೇವಸ್ಥಾನಗಳ ಒಟ್ಟು ಆದಾಯದಿಂದ ಶೇಕಡ 10% ರಷ್ಟು ನಿಧಿ ಸಂಗ್ರಹಣೆ ಮಾಡುವ ನಿರ್ಧಾರವನ್ನು ಕೈಬಿಡಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಈ ಮಸೂದೆಯನ್ನ ವಾಪಸ್ ಪಡೆಯಬೇಕು, ಇಲ್ಲವೇ ಮತಕ್ಕೆ ಹಾಕಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದವು. ನಂತರ ಸಚಿವ ರಾಮಲಿಂಗಾರೆಡ್ಡಿ ಅವರು, ಕೆಲ ತಿದ್ದುಪಡಿಗಳೊಂದಿಗೆ ಸೋಮವಾರ ಮತ್ತೆ ಮಂಡಿಸುತ್ತೇವೆ ಎಂದರು. ಇದಕ್ಕೆ ಉಪಸಭಾಪತಿಗಳು ಆಕ್ಷೇಪ ವ್ಯಕ್ತಪಡಿಸಿದರು. ಹಾಗೆ ಮಾಡಲು ಆಗುವುದಿಲ್ಲ ಎಂದು ಸೂಚನೆ ನೀಡಿದರು. ಪರ-ವಿರೋಧದ ಚರ್ಚೆಯ ಬಳಿಕ ಉಪ ಸಭಾಪತಿ ಎಂ ಕೆ ಪ್ರಾಣೇಶ ಅವರು ತಿದ್ದುಪಡಿ ವಿಧೇಯಕವನ್ನು ಧ್ವನಿ ಮತಕ್ಕೆ ಹಾಕಿದರು. ವಿಧೇಯಕದ ಪರವಾಗಿ ಏಳು ಮತಗಳು ಚಲಾವಣೆಯಾದರೆ, ವಿಧೇಯಕದ ವಿರುದ್ಧವಾಗಿ 18 ಮತಗಳು ಚಲಾವಣೆಯಾದವು. ಇದರೊಂದಿಗೆ ಸರ್ಕಾರ ಮಂಡಿಸಿದ್ದ ತಿದ್ದುಪಡಿ ವಿಧೇಯಕ ಪರಿಷತ್‌ನಲ್ಲಿ ತಿರಸ್ಕೃತಗೊಂಡಿತು.

ಪ್ರಮುಖ ಸುದ್ದಿ :-   ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ತಲೆದಂಡ

 

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement