ಪೆರೋಲ್ ಮೇಲೆ ಆಸ್ಪತ್ರೆ ಐಸಿಯುಗೆ ದಾಖಲಾಗಿದ್ದ ಕುಖ್ಯಾತ ಆರೋಪಿಗೆ ಗುಂಡಿಕ್ಕಿ ಹತ್ಯೆ ಮಾಡಿ ಪರಾರಿ : ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಪಾಟ್ನಾ: ಐವರು ಶಸ್ತ್ರಸಜ್ಜಿತ ವ್ಯಕ್ತಿಗಳು ಆಸ್ಪತ್ರೆಗೆ ನುಗ್ಗಿ, ರೋಗಿಯೊಬ್ಬರ ಕೋಣೆಗೆ ನಡೆದುಕೊಂಡು ಹೋಗಿ ಕುಖ್ಯಾತ ಆರೋಪಿಯ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಇದು ಸಿನಿಮಾ ಅಲ್ಲ. ಇದು ಬಿಹಾರದ ಭಯಾನಕ ವಾಸ್ತವ. ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಐವರು ಶೂಟರ್‌ಗಳು ಆಸ್ಪತ್ರೆಯ ಕಾರಿಡಾರ್‌ನಲ್ಲಿ ತಮ್ಮ ಬಂದೂಕುಗಳನ್ನು ಹೊರತೆಗೆದು, ಕ್ಯಾಬಿನ್‌ನ ಬಾಗಿಲು ತೆರೆದು ಒಳಹೊಕ್ಕಿರುವುದು ಹಾಗೂ ನಂತರ ಪರಾರಿಯಾಗಿರುವುದು ಸೆರೆಯಾಗಿದೆ. ಗುರಿಯಾದ ಚಂದನ್ ಮಿಶ್ರಾ ಚಿಕಿತ್ಸೆಯ ಸಮಯದಲ್ಲಿ ಸಾವಿಗೀಡಾಗಿದ್ದಾನೆ.
ಹಲವು ಕೊಲೆ ಪ್ರಕರಣಗಳ ಆರೋಪ ಹೊತ್ತಿರುವ ಚಂದನ್‌ ಮಿಶ್ರಾ ವೈದ್ಯಕೀಯ ಆಧಾರದ ಮೇಲೆ ಪೆರೋಲ್ ಮೇಲೆ ಹೊರಬಂದಿದ್ದ. ಈತನನ್ನು ಇಂದು ಗುರುವಾರ (ಜುಲೈ ೧೭) ಬೆಳಿಗ್ಗೆ ಪಾಟ್ನಾದ ಪರಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಭೀಕರ ದಾಳಿಯ ಹಿಂದೆ ವಿರೋಧಿ ಗ್ಯಾಂಗ್‌ ಕೈವಾಡವಿದೆ ಎಂದು ಪೊಲೀಸರು ನಂಬಿದ್ದಾರೆ.

“ಬಕ್ಸರ್ ಜಿಲ್ಲೆಯ ನಿವಾಸಿ ಚಂದನ್ ಮಿಶ್ರಾ ಎಂಬ ಅಪರಾಧಿಯನ್ನು ಬಕ್ಸರ್ ನಿಂದ ಭಾಗಲ್ಪುರ ಜೈಲಿಗೆ ವರ್ಗಾಯಿಸಲಾಯಿತು, ಈತನ ವಿರುದ್ಧ ಡಜನ್ಗಟ್ಟಲೆ ಕೊಲೆ ಪ್ರಕರಣಗಳು ದಾಖಲಾಗಿವೆ. ಚಂದನ್ ಪೆರೋಲ್ ನಲ್ಲಿ ಹೊರಗೆ ಬಂದಿದ್ದ ಮತ್ತು ಚಿಕಿತ್ಸೆಗಾಗಿ ಪರಾಸ್ ಆಸ್ಪತ್ರೆಗೆ ದಾಖಲಾಗಿದ್ದ. ಈತನ ವಿರೋಧಿ ಗ್ಯಾಂಗ್ ಆತನ ಮೇಲೆ ಗುಂಡು ಹಾರಿಸಿತು. ಈತ ಚಿಕಿತ್ಸೆ ಪಡೆಯುತ್ತಿದ್ದಾನೆ, ಮತ್ತು ಬಕ್ಸರ್ ಪೊಲೀಸರ ಸಹಾಯದಿಂದ, ನಾವು ಈತನ ವಿರೋಧಿ ಗ್ಯಾಂಗ್ ಚಂದನ್ ಶೇರು ಗ್ಯಾಂಗ್ ತಂಡದವರನ್ನು ಗುರುತಿಸುತ್ತಿದ್ದೇವೆ” ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕೇಯ ಶರ್ಮಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಚಂದನ್‌ ಮಿಶ್ರಾ ನಂತರ ತೀವ್ರ ಗಾಯಗಳಿಂದಾಗಿ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ. ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಈ ಘಟನೆಯಲ್ಲಿ ಭಾಗಿಯಾಗಿದ್ದಾರೆಯೇ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಯೊಳಗೆ ನಡೆದ ಗುಂಡಿನ ದಾಳಿಯು ಬಿಹಾರ ರಾಜಧಾನಿ ಪಾಟ್ನಾದಲ್ಲಿ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ, ಪಾಟ್ನಾ ಕಳೆದ ಕೆಲವು ವಾರಗಳಲ್ಲಿ ಹಲವಾರು ಕೊಲೆ ಪ್ರಕರಣಗಳಿಂದಾಗಿ ಸುದ್ದಿಯಾಗಿದೆ. ಕೊಲ್ಲಲ್ಪಟ್ಟವರಲ್ಲಿ ಉದ್ಯಮಿ ಗೋಪಾಲಖೇಮ್ಕಾ, ಬಿಜೆಪಿ ನಾಯಕ ಸುರೇಂದ್ರ ಕೆವಾಟ್ ಮತ್ತು ವಕೀಲ ಜಿತೇಂದ್ರ ಮಹಾತೋ ಸೇರಿದ್ದಾರೆ.
ಆಸ್ಪತ್ರೆಯ ಗುಂಡಿನ ದಾಳಿಯ ನಂತರ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ನಿತೀಶಕುಮಾರ ಸರ್ಕಾರದಡಿ ರಾಜ್ಯದಲ್ಲಿ “ಎಲ್ಲಿಯಾದರೂ ಯಾರಾದರೂ ಸುರಕ್ಷಿತವಾಗಿದ್ದಾರೆಯೇ” ಎಂದು ಪ್ರಶ್ನಿಸಿದ್ದಾರೆ. “ಸರ್ಕಾರಿ ಬೆಂಬಲಿತ ಅಪರಾಧಿಗಳು ಐಸಿಯುಗೆ ನುಗ್ಗಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಮೇಲೆ ಗುಂಡು ಹಾರಿಸಿದ್ದಾರೆ. ಬಿಹಾರದಲ್ಲಿ ಎಲ್ಲಿಯಾದರೂ ಯಾರಾದರೂ ಸುರಕ್ಷಿತವಾಗಿದ್ದಾರೆಯೇ? ಇದು 2005 ಕ್ಕಿಂತ ಮೊದಲು ಸಂಭವಿಸಿದೆಯೇ?” ಎಂದು ಪ್ರಶ್ನಿಸಿದ್ದಾರೆ.
ಅಪರಾಧಿಗಳನ್ನು ಹಿಡಿಯಲಾಗುವುದು ಎಂದು ಉಪಮುಖ್ಯಮಂತ್ರಿ ವಿಜಯ ಸಿನ್ಹಾ ಭರವಸೆ ನೀಡಿದ್ದಾರೆ. “ಇಂತಹ ಘಟನೆ ದುರದೃಷ್ಟಕರ. ಇದನ್ನು ಸಂಪೂರ್ಣವಾಗಿ ತನಿಖೆ ಮಾಡಲಾಗುತ್ತದೆ ಮತ್ತು ಅಪರಾಧಿಯನ್ನು ಬಿಡುವುದಿಲ್ಲ ಎಂದು ಬಿಹಾರದ ಮುಖ್ಯಮಂತ್ರಿ ಹೇಳಿದ್ದಾರೆ” ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement