ಹಾರ್ಮುಜ್ ಜಲಸಂಧಿ ಮತ್ತೆ ಬಂದ್ : ವಾಣಿಜ್ಯ ಹಡಗಿನ ಮೇಲೆ ಇರಾನ್ ದಾಳಿ, ಅಮೆರಿಕದಿಂದ ಇರಾನ್‌ ಮೇಲೆ ಭಾರಿ ವಾಯುದಾಳಿ

ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯನ್ನು (Strait of Hormuz) “ಮುಂದಿನ ಆದೇಶದವರೆಗೆ” ಮುಚ್ಚುವುದಾಗಿ ಇರಾನ್ ಘೋಷಿಸಿದ ಬೆನ್ನಲ್ಲೇ, ಹಾಗೂ ಆ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಸೈಪ್ರಸ್ ಧ್ವಜದ ಎಂ/ವಿ ಜಿಎಫ್‌ಎಸ್ ಗ್ಯಾಲಕ್ಸಿ (M/V GFS Galaxy) ಕಂಟೇನರ್ ಹಡಗಿನ ಮೇಲೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪಡೆಗಳು ದಾಳಿ ನಡೆಸಿದ ನಂತರ, ಅಮೆರಿಕ ಇರಾನ್ ವಿರುದ್ಧ ಮತ್ತೊಂದು ಸುತ್ತಿನ ಪ್ರತಿದಾಳಿ ನಡೆಸಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಪ್ರಕಟಿಸಿದ ಅಧಿಕೃತ ಮಾಹಿತಿಯ ಪ್ರಕಾರ, ದಾಳಿಯ ಪರಿಣಾಮ ಹಡಗಿನ ಒಬ್ಬ ನಾಪತ್ತೆಯಾಗಿದ್ದು, ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಎಂಜಿನ್ ಕೊಠಡಿಗೆ (Engine Room) ತೀವ್ರ ಹಾನಿಯಾಗಿರುವ ಕಾರಣ ಹಡಗು ತನ್ನ ಪ್ರಯಾಣವನ್ನು ಮುಂದುವರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಸೆಂಟ್‌ಕಾಮ್‌ (CENTCOM) ತನ್ನ ಪ್ರಕಟಣೆಯಲ್ಲಿ, “ಇಂದು ಸಂಜೆ 7:15 (ET)ಕ್ಕೆ, ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಸೈಪ್ರಸ್ ಧ್ವಜದ ಎಂ/ವಿ ಜಿಎಫ್‌ಎಸ್ ಗ್ಯಾಲಕ್ಸಿ ಕಂಟೇನರ್ ಹಡಗಿನ ಮೇಲೆ ಐಆರ್‌ಜಿಸಿ ಪಡೆಗಳು ಬಹಿರಂಗವಾಗಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಈ ವಾರದಲ್ಲಿ ಮೂರನೇ ಬಾರಿಗೆ ಇರಾನ್ ವಿರುದ್ಧ ಅಮೆರಿಕದ ಸೆಂಟ್ರಲ್ ಕಮಾಂಡ್ ಪಡೆಗಳು ದಾಳಿ ಆರಂಭಿಸಿವೆ” ಎಂದು ತಿಳಿಸಿದೆ.
‘ಒಪ್ಪಂದ ಪಾಲಿಸಲು ಅವಕಾಶ ನೀಡಿದ್ದರೂ ಇರಾನ್ ವಿಫಲ’
ಇದಕ್ಕೂ ಮುನ್ನ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳಿಗೆ ಇರಾನ್ ಅನ್ನು ಹೊಣೆಗಾರನನ್ನಾಗಿ ಮಾಡಿದ ಬಳಿಕ, ತಿಳುವಳಿಕೆ ಒಪ್ಪಂದ (Memorandum of Understanding – MoU) ಪಾಲಿಸುವ ಅವಕಾಶವನ್ನು ಅಮೆರಿಕ ನೀಡಿತ್ತು. ಆದರೆ, ಆ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಇರಾನ್ ಮತ್ತೊಮ್ಮೆ ವಿಫಲವಾಗಿದೆ ಎಂದು ಸೆಂಟ್‌ಕಾಮ್‌ (CENTCOM) ಆರೋಪಿಸಿದೆ.
“ಇದಕ್ಕೆ ಪ್ರತಿಯಾಗಿ, ಹಾರ್ಮುಜ್ ಜಲಸಂಧಿಯಲ್ಲಿ ಮುಕ್ತವಾಗಿ ಸಂಚರಿಸುವ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸುವ ಇರಾನ್‌ನ ಸಾಮರ್ಥ್ಯವನ್ನು ಕುಗ್ಗಿಸುವ ಈ ದಾಳಿಗಳನ್ನು ಅಮೆರಿಕದ ಸರ್ವೋಚ್ಚ ಸೇನಾ ಮುಖ್ಯಸ್ಥರ (Commander in Chief) ನಿರ್ದೇಶನದ ಮೇರೆಗೆ ನಡೆಸಲಾಗುತ್ತಿದೆ” ಎಂದು ಸೆಂಟ್‌ಕಾಮ್‌ (CENTCOM) ಹೇಳಿದೆ.
‘ಇರಾನ್ ತಪ್ಪು ನಿರ್ಧಾರ ತೆಗೆದುಕೊಂಡಿದೆ’: ಪೀಟ್ ಹೆಗ್ಸೆತ್
ಸೆಂಟ್‌ಕಾಮ್‌ (CENTCOM) ಪ್ರಕಟಣೆಗೆ ಪ್ರತಿಕ್ರಿಯಿಸಿದ ಅಮೆರಿಕದ ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ (Pete Hegseth), “ಇರಾನ್ ತಪ್ಪು ನಿರ್ಧಾರ ತೆಗೆದುಕೊಂಡಿದೆ. ಈಗ ಅದರ ಬೆಲೆ ತೆರಬೇಕಾಗಿದೆ” ಎಂದು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ದಕ್ಷಿಣ ಇರಾನ್‌ನಲ್ಲಿ ಸ್ಫೋಟಗಳ ಸರಣಿ
ಇರಾನ್‌ನ ಮೆಹರ್ ನ್ಯೂಸ್ ಏಜೆನ್ಸಿ ವರದಿ ಪ್ರಕಾರ, ಖೆಶ್ಮ್ (Qeshm) ದ್ವೀಪದಲ್ಲಿ ಸ್ಫೋಟಗಳ ಶಬ್ದ ಕೇಳಿಬಂದಿದೆ. ಇದೇ ವೇಳೆ, ಇರಾನ್‌ನ ಸರ್ಕಾರಿ ಪ್ರಸಾರ ಸಂಸ್ಥೆ ಐಆರ್‌ಐಬಿ (IRIB) ವರದಿ ಪ್ರಕಾರ, ಬಂದರ್ ಅಬ್ಬಾಸ್ (Bandar Abbas) ನಗರದಲ್ಲಿ ಮೂರು ಸ್ಫೋಟಗಳು ಸಂಭವಿಸಿದ್ದರೆ, ಸಿರಿಕ್ (Sirik) ಪ್ರದೇಶದಲ್ಲಿ ಇನ್ನೂ ಎರಡು ಸ್ಫೋಟಗಳು ಸಂಭವಿಸಿವೆ. ಇದರಿಂದ ದಕ್ಷಿಣ ಇರಾನ್‌ನಲ್ಲಿ ಮತ್ತೊಂದು ಸುತ್ತಿನ ಸರಣಿ ಸ್ಫೋಟಗಳು ವರದಿಯಾಗಿದೆ.
‘ಹಾರ್ಮುಜ್ ಜಲಸಂಧಿ ಬಂದ್’
ಇದಕ್ಕೂ ಮುನ್ನ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) “ಮುಂದಿನ ಆದೇಶದವರೆಗೆ” ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚುವುದಾಗಿ ಘೋಷಿಸಿತ್ತು. ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ ಅಮೆರಿಕದ “ಹಸ್ತಕ್ಷೇಪ” ಅಂತ್ಯಗೊಳ್ಳುವವರೆಗೆ ಈ ನಿರ್ಬಂಧ ಮುಂದುವರಿಯಲಿದೆ ಎಂದು ಪ್ರೆಸ್ ಟಿವಿ (Press TV) ವರದಿ ಮಾಡಿದೆ.
ಐಆರ್‌ಜಿಸಿ ಪ್ರಕಟಣೆಯ ಪ್ರಕಾರ, “ವಿದೇಶಿ ಶಕ್ತಿಗಳ ಕಾನೂನುಬಾಹಿರ ಹಸ್ತಕ್ಷೇಪದಿಂದ ಉಂಟಾದ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಅಮೆರಿಕ ತನ್ನ ಹಸ್ತಕ್ಷೇಪವನ್ನು ನಿಲ್ಲಿಸುವವರೆಗೆ ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿರುತ್ತದೆ. ಯಾವುದೇ ಹಡಗಿಗೂ ಈ ಜಲಸಂಧಿಯಲ್ಲಿ ಸಂಚರಿಸಲು ಅನುಮತಿ ನೀಡುವುದಿಲ್ಲ” ಎಂದು ತಿಳಿಸಲಾಗಿದೆ.
‘ತಕ್ಕ ಪ್ರತ್ಯುತ್ತರ’
ಹಾರ್ಮುಜ್ ಜಲಸಂಧಿ ಮುಚ್ಚಿರುವುದನ್ನು ನೆಪವನ್ನಾಗಿ ಮಾಡಿಕೊಂಡು ಇರಾನ್ ವಿರುದ್ಧ ಯಾವುದೇ ಹೊಸ ಸೇನಾ ಕ್ರಮ ಕೈಗೊಂಡರೆ ಅದಕ್ಕೆ ತೀವ್ರ ಪ್ರತಿಕ್ರಿಯೆ ನೀಡಲಾಗುವುದು ಎಂದು ಐಆರ್‌ಜಿಸಿ ನೌಕಾಪಡೆ ಎಚ್ಚರಿಕೆ ನೀಡಿದೆ.
“ಈ ಪರಿಸ್ಥಿತಿಯನ್ನು ಶತ್ರು ರಾಷ್ಟ್ರಗಳು ಇದನ್ನೇ ನೆಪವನ್ನಾಗಿ ಮಾಡಿಕೊಂಡು ಮತ್ತೆ ನಮ್ಮ ವಿರುದ್ಧ ದಾಳಿ ನಡೆಸಿದರೆ, ಅದಕ್ಕೆ ಪ್ರಬಲ ಪ್ರತಿರೋಧ ನೀಡಲಾಗುವುದು. ಜೊತೆಗೆ, ಪ್ರದೇಶದಲ್ಲಿರುವ ಇನ್ನಷ್ಟು ಶತ್ರು ಸೇನಾ ನೆಲೆಗಳನ್ನು ಗುರಿಯಾಗಿಸಲಾಗುವುದು” ಎಂದು ಪ್ರಕಟಣೆ ತಿಳಿಸಿದೆ.
ಇದಲ್ಲದೆ, ಈ ಬೆಳವಣಿಗೆಯಿಂದ ಉಂಟಾಗುವ ಎಲ್ಲ ಪರಿಣಾಮಗಳಿಗೆ ಅಮೆರಿಕ, ಇಸ್ರೇಲ್ ಹಾಗೂ ಇರಾನ್ ವಿರುದ್ಧ ಕಾರ್ಯಾಚರಣೆ ನಡೆಸಲು ತಮ್ಮ ಸೇನಾ ನೆಲೆಗಳನ್ನು ಬಳಸಲು ಅವಕಾಶ ನೀಡಿರುವ ದೇಶಗಳೇ ಸಂಪೂರ್ಣ ಹೊಣೆಗಾರರಾಗಿರುತ್ತಾರೆ ಎಂದು ಐಆರ್‌ಜಿಸಿ ಹೇಳಿರುವುದಾಗಿ ಪ್ರೆಸ್ ಟಿವಿ ವರದಿ ಮಾಡಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement