ಶಿಕ್ಷಕರ ತಲೆ ಮೇಲೆ ಬಕೆಟ್‌ ಹಾಕಿ ವಿದ್ಯಾರ್ಥಿಗಳ ಪುಂಡಾಟ: ಆಘಾತಕಾರಿ ಘಟನೆಗೆ ಭಾರೀ ಆಕ್ರೋಶ

ಚನ್ನಗಿರಿ: ಶಿಕ್ಷಕರ ಹುದ್ದೆ ಸಮಾಜದಲ್ಲಿ ಅತ್ಯಂತ ಗೌರವದ ಹುದ್ದೆ. ಅಂತಹ ಗೌರಯುತ ಸ್ಥಾನದಲ್ಲಿರುವ ಶಿಕ್ಷಕರೊಬ್ಬರನ್ನು ವಿದ್ಯಾರ್ಥಿಗಳು ಅಪಮಾನ ಗೊಳಿಸಿ, ವಿಕೃತಿ ತೋರಿದ ಘಟನೆ ತಾಲೂಕಿನ ನಲ್ಲೂರು ಪ್ರೌಢಶಾಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕೊಠಡಿಯಲ್ಲಿ ಪಾಠ ಮಾಡಲು ತೆರಳಿದ ಹಿಂದಿ ಶಿಕ್ಷಕ ಪ್ರಕಾಶ್ ಬೋಗಾರ್ ಅವರಿಗೆ ಕುಚೇಷ್ಟೆ ಮಾಡಿದ ವಿದ್ಯಾರ್ಥಿಗಳು ವಿಡಿಯೋ ಮಾಡಿ ವಿಕೃತಿ ಪ್ರದರ್ಶನ ಮಾಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಎಚ್ಚೆತ್ತು ಕೊಂಡ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅಲ್ಲಿನ ಶಿಕ್ಷಕರನ್ನು ಈ ಬಗ್ಗೆ ವಿಚಾರಿಸಿದ್ದಾರೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ನಲ್ಲೂರು ಸರ್ಕಾರಿ ಜೂನಿಯರ್ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ ಹಿಂದಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಕಾಶ್ ಬೋಗಾರ್ ಅವರಿಗೆ ಶಾಲೆಯ ಐದಾರು ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ಅಲ್ಲದೆ, ಜೊತೆಗೆ ಶಿಕ್ಷಕರ ತಲೆ ಮೇಲೆ ಬಕೆಟ್ ಇಟ್ಟು ವಿಕೃತಿ ಪ್ರದರ್ಶಿಸಿದ್ದಾರೆ. ಅಲ್ಲದೆ, ವಿಡಿಯೋ ಮಾಡಿ ಮನಸ್ಸಿಗೆ ಬಂದಂತ ರೀತಿಯಲ್ಲಿ ಮಾತನಾಡಿದ್ದಾರೆ. ಕಳೆದ ನಾಲ್ಕೈದು ದಿನಗಳ ಹಿಂದೆ ಮಾಡಿದ್ದ ವಿಡಿಯೋ ನಿನ್ನೆ ವೈರಲ್ ಆಗಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಪ್ರಕಾಶ್ ಬೋಗಾರ್ ಅವರು ಅತ್ಯಂತ ಸರಳ, ಸೌಮ್ಯ ಸ್ವಭಾವದ ಶಿಕ್ಷಕರು. ಮಾತ್ರವಲ್ಲ, ಹೃದಯ ಸಂಬಂಧಿ ಕಾಯಿಲೆಯಿಂದಲೂ ಬಳಲುತ್ತಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳು ತಮಾಷೆ ಮಾಡಿರಬಹುದು, ಏನಾದರೂ ದೂರು ಕೊಟ್ಟರೆ ಭವಿಷ್ಯ ಹಾಳಾಗುತ್ತದೆ ಎಂದು ಸುಮ್ಮನಾಗಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.
ಕಾಲೇಜಿಗೆ ಶಾಸಕ ಮಾಡಾಳ್ ಭೇಟಿ
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನಲ್ಲೂರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಶಾಲೆಯ ಶಿಕ್ಷಕರು, ಪ್ರಾಂಶುಪಾಲರು, ಗ್ರಾಮಸ್ಥರ ಜೊತೆ ಚರ್ಚೆ ನಡೆಸಿದ್ದಾರೆ. ಶಿಕ್ಷಕ ಪ್ರಕಾಶ್ ಅವರಿಗೆ ಅವಮಾನ ಮಾಡಿರುವ ವಿದ್ಯಾರ್ಥಿಗಳು ಯಾರು ಎಂಬ ಕುರಿತು ಮಾಹಿತಿ ಪಡೆದಿದ್ದಾರೆ. ತಪ್ಪು ಮಾಡಿರುವವರಿಗೆ ಶಿಕ್ಷೆಯಾಗಬೇಕು. ಮುಂಬರುವ ದಿನಗಳಲ್ಲಿ ಇಂಥ ಪ್ರಕರಣ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನಲ್ಲೂರಿನ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಶಿಕ್ಷಕರಿಗೆ ಕುಚೇಷ್ಟೆ ಮಾಡಿ ಅವಮಾನ ವಿಡಿಯೋ ವೈರಲ್ ಆಗಿರುವುದು ಗಮನಕ್ಕೆ ಬಂದಿದೆ. ಯಾರೇ ತಪ್ಪು ಮಾಡಿದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ. ವಿದ್ಯಾರ್ಥಿಗಳು ಈ ರೀತಿಯಾದ ಅವಮಾನ ಮಾಡಿರುವುದಕ್ಕೆ ಕಾರಣವೇನು ಎಂಬ ಬಗ್ಗೆ ವರದಿ ನೀಡುವಂತೆ ಡಿಡಿಪಿಐ ಅವರಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಆದಿತ್ಯ ಎಲ್‌1, ಪ್ರೋಬಾ-3 ಉಪಗ್ರಹಗಳ ನೆರವಿನಿಂದ ಸೌರ ಸ್ಫೋಟಗಳ ರಹಸ್ಯ ಬಯಲು ಮಾಡಿದ ವಿಜ್ಞಾನಿಗಳು

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement