ಇಡೀ ವಿಶ್ವದಲ್ಲಿ ಕೋವಿಡ್ ಓಮಿಕ್ರಾನ್ ರೂಪಾಂತರಿ ಈಗ ಸದ್ದು ಮಾಡುತ್ತಿರುವ ಬೆನ್ನಲ್ಲೇ ಈಗ ಮತ್ತೊಂದು ರೂಪಾಂತರ ಪತ್ತೆಯಾಗಿದೆ.
ಫ್ರೆಂಚ್ ಸಂಶೋಧಕರು ಕ್ಯಾಮರೂನಿಯನ್ ಮೂಲದ್ದು ಎಂದು ಶಂಕಿಸಲಾದ ಹೊಸ ಕೋವಿಡ್ ರೂಪಾಂತರಿಯನ್ನು ಪತ್ತೆ ಮಾಡಿದ್ದು, ಈ ಹೊಸ ರೂಪಾಂತರಿಗೆ ತಾತ್ಕಾಲಿಕವಾಗಿ ಐಹೆಚ್ಯು ಎಂದು ಹೆಸರಿಡಲಾಗಿದೆ.
B.1.640.2 ಹೆಸರಿನ ಈ ವಂಶಾವಳಿಯ ಹೊಸ ರೂಪಾಂತರವು ಈಗಾಗಲೇ 12 ಮಂದಿಗೆ ಸೋಂಕನ್ನು ತಗುಲಿಸಿದೆ ಎನ್ನಲಾಗಿದೆ. ಇದು ಓಮಿಕ್ರಾನ್ಗಿಂತ ಹೆಚ್ಚು ಅಂದರೆ 46 ರೂಪಾಂತರಿಗಳು ಹಾಗೂ 37 ಡಿಕ್ಟೇಷನ್ (ವಿಲೋಪನ ಗಳನ್ನು ಹೊಂದಿದೆ. ಆಗ್ನೇಯ ಫ್ರಾನ್ಸ್ನಲ್ಲಿ 12 ಕೊರೊನಾ ಪಾಸಿಟಿವ್ ರೋಗಿಗಳಲ್ಲಿ ಮ್ಯೂಟೆಷನ್ಗಳು ವಿಭಿನ್ನವಾಗಿ ಕಂಡು ಬಂದಿದೆ ಎಂದು ಫಿಲಿಪ್ ಕೋಲ್ಸನ್ ಹೇಳಿದ್ದಾರೆ.
ಹೊಸ ತಳಿ ಹೇಗೆ ವರ್ತಿಸುತ್ತದೆ. ಯಾವ ಪ್ರಮಾಣದ ಸೋಂಕು ಉಂಟು ಮಾಡುತ್ತದೆ ಮತ್ತು ಲಸಿಕೆಗಳು ಈ ಸೋಂಕಿನ ವಿರುದ್ಧ ಹೇಗೆ ಹೋರಾಡುತ್ತವೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದೂ ಸಂಶೋಧಕರು ತಿಳಿಸಿದ್ದಾರೆ.
ಈ 12 ಪ್ರಕರಣಗಳನ್ನು ಆಧಾರವಾಗಿಟ್ಟುಕೊಂಡು ಈ ಹೊಸ ರೂಪಾಂತರಿಯ ವೈರಲಾಜಿಕಲ್, ಎಪಿಡಮಿಯೋಲಾಜಿಕಲ್ ಅಥವಾ ವೈದ್ಯಕೀಯ ವೈಶಿಷ್ಟ್ಯಗಳ ಕುರಿತು ಈಗಲೇ ಏನನ್ನೂ ವಿಶ್ಲೇಷಿಸಲು ಸಾಧ್ಯವಿಲ್ಲ ಎಂದು ಕೋಲ್ಸನ್ ಹೇಳಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಆದ ವಿನಃ ಏನೂ ಹೇಳಲಾಗದು ಎಂದು ಹೇಳಿದ್ದಾರೆ.
ಅಧ್ಯಯನದ ಪ್ರಕಾರ ಈ ಹೊಸ ರೂಪಾಂತರಿಯ ಸೋಂಕಿಗೆ ಒಳಗಾದ ಮೊದಲ ರೋಗಿಯು ಲಸಿಕೆ ತೆಗೆದುಕೊಂಡವರಾಗಿದ್ದು, ಮಧ್ಯ ಆಫ್ರಿಕಾದಿಂದ ಕ್ಯಾಮರೂನ್ಗೆ ಪ್ರವಾಸ ಕೈಗೊಂಡು ಬಳಿಕ ಫ್ರಾನ್ಸ್ಗೆ ಮರಳಿದ್ದರು ಎನ್ನಲಾಗಿದೆ. ಹೀಗಾಗಿ ಓಮಿಕ್ರಾನ್ನಂತೆಯೇ ಈ ಹೊಸ ರೂಪಾಂತರಿ ಕೂಡ ಆಫ್ರಿಕಾದ ಜೊತೆ ಸಂಬಂಧ ಹೊಂದಿರಬಹುದು ಎಂದು ಶಂಕಿಸಲಾಗಿದೆ.
ಕ್ಯಾಮರೂನ್ನಿಂದ ಫ್ರಾನ್ಸ್ಗೆ ಮರಳಿದ ಮೂರು ದಿನಗಳ ಬಳಿಕ ಅವರಿಗೆ ಸೌಮ್ಯವಾದ ಉಸಿರಾಟದ ತೊಂದರೆ ಆರಂಭವಾಯಿತು. ಅಲ್ಲದೇ ಇನ್ನಿತರ ರೋಗ ಲಕ್ಷಣಗಳು ಕ್ರಮೇಣವಾಗಿ ಒಂದೊಂದಾಗಿಯೇ ಆರಂಭವಾದವು. 7 ಮಂದಿ ಕೊರೊನಾ ಸೋಂಕಿತರಿಂದ ಪರೀಕ್ಷಾ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಪರೀಕ್ಷೆಗೆ ರವಾನೆ ಮಾಡಲಾಯಿತು. ಇಲ್ಲಿ ಇದು ಕೊರೊನಾದ ಮತ್ತೊಂದು ಹೊಸ ರೂಪಾಂತರಿ ಎಂಬುದು ಮೊದಲ ಬಾರಿಗೆ ವರದಿಯಾಗಿದೆ ಎನ್ನಲಾಗಿದೆ.
ಫ್ರಾನ್ಸ್ ಸಂಶೋಧಕರು ಹೇಳಿರುವ ಐಎಚ್ಯು ವೈರಸ್ ಜಗತ್ತಿನ ಇನ್ಯಾವುದೇ ದೇಶದಲ್ಲೂ ಕಂಡುಬಂದಿಲ್ಲ. ವಿಶ್ವಸಂಸ್ಥೆಯೂ ಕೂಡ ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಹೊಸ ತಳಿಯೆಂಬ ಲೇಬಲ್ ಕೊಟ್ಟಿಲ್ಲ.ಇನ್ನಷ್ಟು ಸಂಶೋಧನೆಯ ನಂತರವಷ್ಟೇ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ