ಮೈ ಜುಂ ಎನಿಸುವ ವಿಡಿಯೋ | ದೇವಸ್ಥಾನದಿಂದ ಬರುವಾಗ 200 ಅಡಿ ಆಳದ ಪ್ರಪಾತಕ್ಕೆ ಬಿದ್ದ ಕಾರು, ಇಬ್ಬರು ಸಜೀವ ದಹನ

ಉನಾ : ದೇವಿಯ ದರ್ಶನ ಮುಗಿಸಿ ಮನೆಗೆ ಮರಳುತ್ತಿದ್ದಾಗ ಚಲಿಸುತ್ತಿದ್ದ ಕಾರಿನಲ್ಲೇ ಬೆಂಕಿ ಕಾಣಿಸಿಕೊಂಡು, ನಿಯಂತ್ರಣ ತಪ್ಪಿದ ವಾಹನ ಕಾರು 200 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದು ಇಬ್ಬರು ಭಕ್ತರು ಭೀಕರವಾಗಿ ಸಾವಿಗೀಡಾದ ಘಟನೆ ಪಂಜಾಬ್-ಹಿಮಾಚಲ ಗಡಿಯ ಭರ್ವೈನ್-ಹೋಷಿಯಾರ್‌ಪುರ ರಸ್ತೆಯಲ್ಲಿ ನಡೆದಿದೆ.
ಬುಧವಾರ ಮಧ್ಯಾಹ್ನ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಪವಿತ್ರ ಚಿಂತಪೂರ್ಣಿ ದೇವಸ್ಥಾನದಿಂದ ಪಂಜಾಬ್‌ನ ಲೂಧಿಯಾನಕ್ಕೆ ಮರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಮೃತರನ್ನು ಮಾರುತಿ ಸ್ವಿಫ್ಟ್ ಡಿಸೈರ್ (PB-10-K-7531) ಕಾರಿನಲ್ಲಿದ್ದ ಪ್ರಯಾಣಿಕರು ಎಂದು ಗುರುತಿಸಲಾಗಿದ್ದು, ಅವರ ಪೂರ್ಣ ಗುರುತು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.
ಮೈ ಜುಂ ಎನಿಸುವ ಅಪಘಾತದ ಸಿಸಿಟಿವಿ ದೃಶ್ಯಗಳು ವೈರಲ್‌ ಆಗಿದ್ದು, ಇದು ಘಟನೆಯ ಭೀಕರತೆಯನ್ನು ಕಣ್ಣಿಗೆ ಕಟ್ಟುತ್ತಿವೆ. ಕಾರು ತಿರುವಿನಲ್ಲಿ ತಿರುಗುವ ಬದಲು ನೇರವಾಗಿ ಚಲಿಸಿ ಪ್ರಪಾತಕ್ಕೆ ಬಿದ್ದಿದೆ. ಪ್ರಪಾತಕ್ಕೆ ಬೀಳುವ ಮುನ್ನವೇ ಕಾರಿನ ಹಿಂಭಾಗದಲ್ಲಿ ಬೆಂಕಿ ಹೊತ್ತಿಕೊಂಡಿರುವುದು ದೃಶ್ಯದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.

ಟೈರ್ ಸ್ಫೋಟವೇ ದುರಂತಕ್ಕೆ ಕಾರಣ?
ಸ್ಥಳೀಯರ ಮಾಹಿತಿ ಮತ್ತು ಪ್ರಾಥಮಿಕ ತನಿಖೆಯ ಪ್ರಕಾರ, ಕಾರು ಪ್ರಪಾತಕ್ಕೆ ಬೀಳುವ ಮುನ್ನ ಭಾರಿ ಸ್ಫೋಟದ ಶಬ್ದ ಕೇಳಿಸಿದೆ. “ಚಲಿಸುತ್ತಿದ್ದ ವಾಹನದ ಟೈರ್ ಸ್ಫೋಟಗೊಂಡಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿರಬಹುದು, ಅದೇ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು” ಎಂದು ಶಂಕಿಸಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದರು. ಆದರೆ ಅಷ್ಟರಲ್ಲಾಗಲೇ ಬೆಂಕಿ ಇಡೀ ಕಾರನ್ನು ಆಪೋಶನ ಪಡೆದಿತ್ತು. ಪ್ರಪಾತದ ಕೆಳಗೆ ಕಾರು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಒಬ್ಬರ ದೇಹ ಕಾರಿನಿಂದ ಹೊರಗೆ ಎಸೆಯಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾದರೆ, ಮತ್ತೊಬ್ಬರು ಕಾರಿನ ಒಳಗೇ ಸುಟ್ಟು ಕರಲಾಗಿರುವುದು ಕಂಡುಬಂದಿದೆ. ಘಟನಾ ಸ್ಥಳದಲ್ಲಿ ದೊರೆತ ಒಂದು ಆಧಾರ್ ಕಾರ್ಡ್ ಮೂಲಕ ಮೃತರ ವಿಳಾಸ ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.

ಅಪಘಾತ ನಡೆದ ಭರ್ವೈನ್-ಹೋಷಿಯಾರ್‌ಪುರ ರಸ್ತೆಯು ಅತ್ಯಂತ ಅಪಾಯಕಾರಿ ತಿರುವುಗಳಿಂದ ಕೂಡಿದೆ. ರಸ್ತೆಯ ಒಂದು ಭಾಗವು ಕುಸಿದು ನೇರವಾಗಿ ಪ್ರಪಾತಕ್ಕೆ ತೆರೆದುಕೊಂಡಿದ್ದರೂ ಅಲ್ಲಿ ಯಾವುದೇ ಸುರಕ್ಷತಾ ತಡೆಗೋಡೆಗಳಿರಲಿಲ್ಲ. ಈ ಹಿಂದೆಯೇ ಈ ಜಾಗವನ್ನು ‘ಬ್ಲ್ಯಾಕ್ ಸ್ಪಾಟ್’ ಎಂದು ಗುರುತಿಸಲಾಗಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಇಬ್ಬರು ಭಕ್ತರ ಬಲಿಗೆ ಕಾರಣವಾಯಿತೇ ಎಂಬ ಪ್ರಶ್ನೆ ಎದ್ದಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಾಹನದಲ್ಲಿ ತಾಂತ್ರಿಕ ದೋಷವಿತ್ತೇ ಅಥವಾ ರಸ್ತೆಯ ಅವ್ಯವಸ್ಥೆಯೇ ಈ ಸಾವಿಗೆ ನೇರ ಕಾರಣವೇ ಎಂಬುದರ ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement