ಶಾಲಾ ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಬದಲಿಗೆ ‘ಭಾರತ ‘: ಎನ್‌ಸಿಇಆರ್‌ಟಿ ಸಮಿತಿ ಶಿಫಾರಸು

ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಸಮಿತಿಯು ಮುಂದಿನ ಪುಸ್ತಕಗಳನ್ನು ʼಇಂಡಿಯಾʼ ಬದಲಿಗೆ ‘ಭಾರತ’ ಎಂದು ಬದಲಿಸುವ ಪ್ರಸ್ತಾವನೆಗೆ ಅದರ ಸದಸ್ಯರು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ.
ಶಾಲಾ ಪಠ್ಯಕ್ರಮವನ್ನು ಪರಿಷ್ಕರಿಸಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ರಚಿಸಿರುವ ಸಾಮಾಜಿಕ ವಿಜ್ಞಾನಗಳ ಉನ್ನತ ಮಟ್ಟದ ಸಮಿತಿಯು ಎಲ್ಲಾ ತರಗತಿಗಳ ಶಾಲಾ ಪಠ್ಯಪುಸ್ತಕಗಳಲ್ಲಿ ಇಂಡಿಯಾ ಬದಲಿಗೆ “ಭಾರತ” ಎಂದು ಬದಲಿಸಬೇಕು ಎಂದು ಶಿಫಾರಸು ಮಾಡಿದೆ.
ಆದರೆ ಸಮಿತಿಯ ಶಿಫಾರಸುಗಳ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಎನ್‌ಸಿಇಆರ್‌ಟಿ ಅಧ್ಯಕ್ಷ ದಿನೇಶ್ ಸಕ್ಲಾನಿ ಹೇಳಿದ್ದಾರೆ.
ಎನ್‌ಸಿಇಆರ್‌ಟಿ (NCERT) ಪುಸ್ತಕಗಳ ವಿಷಯವನ್ನು ಬದಲಾಯಿಸುವ ಅಥವಾ ಮಾರ್ಪಡಿಸುವ ಕೆಲಸ ಮಾಡುವ 25 ಪ್ಯಾನೆಲ್‌ಗಳಲ್ಲಿ ಇದು ಒಂದಾಗಿದೆ. ಆದರೆ, ಪ್ರಸ್ತಾವನೆಯನ್ನು ಸಣ್ಣ ಸಮಿತಿ ಮಾತ್ರ ಅಂಗೀಕರಿಸಿದೆ ಮತ್ತು ಇನ್ನೂ ಅಂತಿಮ ಒಪ್ಪಿಗೆ ಪಡೆಯಬೇಕಾಗಿದೆ. ಪ್ರಸ್ತಾವನೆಯನ್ನು ಈಗ ಹೆಚ್ಚಿನ ಪರಿಶೀಲನೆಗಾಗಿ ದೆಹಲಿಯ ಎನ್‌ಸಿಇಆರ್‌ಟಿಗೆ ಕಳುಹಿಸಲಾಗಿದೆ.
ಸಮಿತಿಯ ಅಧ್ಯಕ್ಷ ಐಸಿ ಇಸಾಕ್ ಪ್ರಕಾರ, ಕೆಲವು ತಿಂಗಳ ಹಿಂದೆ ಪ್ರಸ್ತಾವನೆಯನ್ನು ಮುಂದಿಡಲಾಗಿತ್ತು ಮತ್ತು ಈಗ ಅದನ್ನು ಅಂಗೀಕರಿಸಲಾಗಿದೆ.

ದೇಶವನ್ನು ‘ಭಾರತ’ ಎಂದು ಮರುನಾಮಕರಣ ಮಾಡಲಾಗುತ್ತದೆಯೇ ಎಂಬ ಚರ್ಚೆಯ ಹಿನ್ನೆಲೆಯಲ್ಲಿ ಎನ್‌ಸಿಇಆರ್‌ಟಿ ಸಮಿತಿಯ ಶಿಫಾರಸು ಬಂದಿದೆ. ಈ ವರ್ಷದ ಆರಂಭದಲ್ಲಿ ಕೇಂದ್ರವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿಸಿದ್ದ G20 ಔತಣಕೂಟದ ಆಹ್ವಾನಗಳನ್ನು “ಪ್ರೆಸಿಡೆಂಟ್‌ ಆಫ್‌ ಇಂಡಿಯಾʼ ಬದಲಿಗೆ “ಭಾರತದ ರಾಷ್ಟ್ರಪತಿ” ಎಂಬ ಮುದ್ರಿಸಿದ್ದು ರಾಜಕೀಯ ಚರ್ಚೆಗೆ ಕಾರಣವಾಗಿತ್ತು.
ಸಂವಿಧಾನದ 1(1)ನೇ ವಿಧಿಯು ನಮ್ಮ ದೇಶದ ಹೆಸರನ್ನು “ಇಂಡಿಯಾ, ಅಂದರೆ ಭಾರತವು ರಾಜ್ಯಗಳ ಒಕ್ಕೂಟವಾಗಿರುತ್ತದೆ” ಎಂದು ವ್ಯಾಖ್ಯಾನಿಸುತ್ತದೆ.
ಸೆಪ್ಟೆಂಬರ್‌ನಲ್ಲಿ ದೆಹಲಿಯ ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪದಲ್ಲಿ ಜಿ20 ನಾಯಕರ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ನಾಮಫಲಕದಲ್ಲಿ “ಇಂಡಿಯಾʼ ಬದಲಿಗೆ ‘ಭಾರತ’ ನಾಮಫಲಕವನ್ನು ಮೇಜಿನ ಮೇಲೆ ಪ್ರದರ್ಶಿಸಲಾಯಿತು.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ : ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆಪ್ತ ಸಹಾಯಕನ ಬಂಧನ

ಎನ್‌ಸಿಇಆರ್‌ಟಿ ಪ್ಯಾನೆಲ್‌ನಿಂದ ಇತರ ಶಿಫಾರಸುಗಳು
ಏತನ್ಮಧ್ಯೆ, ಎನ್‌ಸಿಇಆರ್‌ಟಿ ಸಮಿತಿಯು ಪಠ್ಯಪುಸ್ತಕಗಳಲ್ಲಿ ‘ಪ್ರಾಚೀನ ಇತಿಹಾಸ’ದ ಬದಲು ‘ಶಾಸ್ತ್ರೀಯ ಇತಿಹಾಸ’ ಪರಿಚಯಿಸುವಂತೆಯೂ ಶಿಫಾರಸು ಮಾಡಿದೆ.
ವೈಜ್ಞಾನಿಕ ಪ್ರಗತಿ ಮತ್ತು ಜ್ಞಾನದ ಅರಿವಿಲ್ಲದೆ ಭಾರತವನ್ನು ಕತ್ತಲೆಯಲ್ಲಿ ತೋರಿಸಿದ ಬ್ರಿಟಿಷರು ಮಾಡಿದಂತೆ ಇತಿಹಾಸವನ್ನು ಇನ್ನು ಮುಂದೆ ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಎಂದು ವಿಂಗಡಿಸಲಾಗುವುದಿಲ್ಲ ಎಂದು ಐಸಾಕ್ ಹೇಳಿದ್ದಾರೆ.
ಅಲ್ಲದೆ, ಸಮಿತಿಯು ಎಲ್ಲಾ ವಿಷಯಗಳ ಪಠ್ಯಕ್ರಮದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಯನ್ನು (ಐಕೆಎಸ್) ಪರಿಚಯಿಸಲು ಶಿಫಾರಸು ಮಾಡಿದೆ.
ಬ್ರಿಟಿಷರು ಭಾರತೀಯ ಇತಿಹಾಸವನ್ನು ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಎಂದು ಮೂರು ಹಂತಗಳಾಗಿ ವಿಂಗಡಿಸಿದ್ದಾರೆ. ಹಾಗೂ ವೈಜ್ಞಾನಿಕ ಜ್ಞಾನ ಮತ್ತು ಪ್ರಗತಿಯ ಬಗ್ಗೆ ತಿಳಿದಿಲ್ಲ ಎಂದು ಭಾರತವನ್ನು ಕತ್ತಲೆಯಲ್ಲಿ ತೋರಿಸಿದರು. ಆದ್ದರಿಂದ, ಮಧ್ಯಕಾಲೀನ ಮತ್ತು ಆಧುನಿಕ ಅವಧಿಗಳ ಜೊತೆಗೆ ಭಾರತೀಯ ಇತಿಹಾಸದ ಶಾಸ್ತ್ರೀಯ ಅವಧಿಯನ್ನು ಶಾಲೆಗಳಲ್ಲಿ ಕಲಿಸಲು ನಾವು ಸೂಚಿಸಿದ್ದೇವೆ ಎಂದು ಐಸಾಕ್‌ ಹೇಳಿದರು.

ಎನ್‌ಸಿಇಆರ್‌ಟಿಯು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ಕ್ಕೆ ಅನುಗುಣವಾಗಿ ಶಾಲಾ ಪಠ್ಯಪುಸ್ತಕಗಳ ಪಠ್ಯಕ್ರಮವನ್ನು ಪರಿಷ್ಕರಿಸುತ್ತಿದೆ. ಕೌನ್ಸಿಲ್ ಇತ್ತೀಚೆಗೆ 19 ಸದಸ್ಯರ ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಕಲಿಕಾ ಸಾಮಗ್ರಿ ಸಮಿತಿ (ಎನ್‌ಎಸ್‌ಟಿಸಿ)ಯನ್ನು ಈ ತರಗತಿಗಳಿಗೆ ಪಠ್ಯಕ್ರಮ, ಪಠ್ಯಪುಸ್ತಕಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ಅಂತಿಮಗೊಳಿಸಲು ರಚಿಸಿದೆ.
ಎಲ್ಲಾ ವಿಷಯಗಳ ಪಠ್ಯಕ್ರಮದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆ (ಐಕೆಎಸ್) ಅನ್ನು ಪರಿಚಯಿಸಲು ಸಮಿತಿಯು ಶಿಫಾರಸು ಮಾಡಿದೆ” ಎಂದು ಐಸಾಕ್ ಹೇಳಿದರು.
ಸಮಿತಿಯ ಇತರ ಸದಸ್ಯರಲ್ಲಿ ಐಸಿಎಚ್‌ಆರ್ ಅಧ್ಯಕ್ಷ ರಘುವೇಂದ್ರ ತನ್ವರ್, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಪ್ರಾಧ್ಯಾಪಕಿ ವಂದನಾ ಮಿಶ್ರಾ, ಡೆಕ್ಕನ್ ಕಾಲೇಜ್ ಡೀಮ್ಡ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ವಸಂತ ಶಿಂಧೆ ಮತ್ತು ಹರಿಯಾಣ ಸರ್ಕಾರಿ ಶಾಲೆಯಲ್ಲಿ ಸಮಾಜಶಾಸ್ತ್ರ ಬೋಧಿಸುವ ಮಮತಾ ಯಾದವ್ ಸೇರಿದ್ದಾರೆ.

ಪ್ರಮುಖ ಸುದ್ದಿ :-   ಪವಿತ್ರಾ ಜಯರಾಮ ಸಾವಿನ ಬೆನ್ನಲ್ಲೇ ಗೆಳೆಯ-ಕಿರುತೆರೆ ನಟ ಚಂದು ಆತ್ಮಹತ್ಯೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement