ವೀಡಿಯೊ…| ಚಿಕ್ಕಮಗಳೂರು : ಕರ್ತವ್ಯ ನಿರತ ವೈದ್ಯರ ಮೇಲೆ ಚಪ್ಪಲಿ ಎಸೆದ ಮಹಿಳೆ…!

ಚಿಕ್ಕಮಗಳೂರು: ಚಿಕ್ಕಮಗಳೂರಿನ ಆಸ್ಪತ್ರೆಯೊಂದರಲ್ಲಿ ವೈದ್ಯರೊಬ್ಬರ ಮೇಲೆ ಮಹಿಳೆಯೊಬ್ಬರು ಚಪ್ಪಲಿ ಎಸೆದ ಘಟನೆ ನಡೆದಿದ್ದು,  ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕರ್ತವ್ಯದಲ್ಲಿದ್ದ ವೈದ್ಯರೊಬ್ಬರ ಮೇಲೆ ಮಹಿಳೆಯೊಬ್ಬಳು ಮೊದಲು ಚಪ್ಪಲಿ ಎಸೆದಿದ್ದಾಳೆ. ನಂತರ ಮಹಿಳೆಯೊಂದಿಗಿನ ಗುಂಪೊಂದು ವೈದ್ಯರನ್ನು ಕರ್ತವ್ಯ ನಿರ್ವಹಿಸಲು ತೊಂದರೆ ಪಡಿಸಿ ಅವರ ಅಂಗಿಯ ಕಾಲರ್‌ ಅನ್ನು ಹಿಡುದು ಎಳೆದಾಡಿದೆ ಎಂದು ವರದಿಯಾಗಿದೆ.
ಈ ವೀಡಿಯೊ ವೈರಲ್‌ ಆಗಿದ್ದು, ಮಹಿಳೆ ಹಾಗೂ ಗುಂಪಿನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ ರವಿ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ. ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಒಪಿಡಿ (ಹೊರ ರೋಗಿಗಳ ವಿಭಾಗ) ಬಂದ್‌ ಮಾಡಿ ಪ್ರತಿಭಟನೆ ನಡೆಸಿದ್ದಾರೆ.

ಚಿಕ್ಕಮಗಳೂರಿನ ಅರಳುಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಇರ್ಷಾದ್‌ ಎಂಬ ವ್ಯಕ್ತಿ ಬಂದಿದ್ದರು. ಗಲಾಟೆಯೊಂದರಲ್ಲಿ ಗಾಯಗೊಂಡಿದ್ದು, ಚಿಕಿತ್ಸೆಗೆ ಪಡೆದುಕೊಳ್ಳುವುದಕ್ಕೆ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದರು. ಆ ವೇಳೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ವೈದ್ಯ ವೆಂಕಟೇಶ (ಮೂಳೆ ತಜ್ಞ) ಅವರು ತಪಾಸಣೆ ನಡೆಸುತ್ತಿದ್ದರು. ಆದರೆ, ಏಕಾಏಕಿ ಇರ್ಷಾದ್‌ ಅವರ ಸಂಬಂಧಿಕರು ಒಟ್ಟಿಗೆ ಕೋಣೆಯ ಒಳಗೆ ಪ್ರವೇಶಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವೈದ್ಯರು ಹೊರ ಹೋಗುವಂತೆ ವೈದ್ಯರು ತಿಳಿಸಿದಾಗ ಮಾತಿಗೆ ಮಾತು ಬೆಳೆದಿದೆ.
ಈ ವೇಳೆ ತಸ್ಲಿಮಾ ಎಂಬ ಮಹಿಳೆ ಕೋಪಗೊಂಡು ವೈದ್ಯರ ಕೊರಳುಪಟ್ಟಿ ಹಿಡಿದುಕೊಂಡು ಎಳೆದಾಡಿದ್ದಾಳೆ. ಅಲ್ಲದೇ ಚಪ್ಪಲಿಯನ್ನು ತೆಗೆದು ವೈದ್ಯರ ಮೇಲೆ ಎಸೆದಿದ್ದಾಳೆ. ಇದಕ್ಕೆ ವೈದ್ಯರು ಹಾಗೂ ಸಹಾಯಕ ಸಿಬ್ಬಂದಿಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಜಿಲ್ಲಾಸ್ಪತ್ರೆಯ ವೈದ್ಯರು, ನರ್ಸ್‌ ಹಾಗೂ ಸಹಾಯಕ ಸಿಬ್ಬಂದಿ ಹೊರ ರೋಗಿಗಳ ವಿಭಾಗವನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸಿದ್ದಾರೆ.

ಈ ಘಟನೆಯ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ ಅವರು, ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಕರ್ತವ್ಯ ನಿರತ ವೈದ್ಯಾಧಿಕಾರಿ, ವೈದ್ಯ ವೆಂಕಟೇಶ ಅವರ ಮೇಲೆ ಹಲ್ಲೆಯಾದ ಅಮಾನವೀಯ ಘಟನೆ ನಡೆದಿದೆ. ಗೃಹ ಸಚಿವ ಜಿ. ಪರಮೇಶ್ವರ ಅವರೇ ಇಂತಹ ನೀಚ ಕೃತ್ಯ ಎಸಗಿದವರನ್ನು ಈ ಕೂಡಲೇ ಬಂಧಿಸಿ ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಕ್ರಮ ತೆಗೆದುಕೊಳ್ಳಿ. ಡಿಜಿಪಿ ಅಲೋಕ ಮೋಹನ ಅವರೇ ತಾವು ಈ ಕೂಡಲೇ ಆರೋಪಿಗಳನ್ನು ಬಂಧಿಸಿ ವೈದ್ಯಕೀಯ ಸಿಬ್ಬಂದಿ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ವಿಶ್ವಾಸವಿಟ್ಟು ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡಿ ಎಂದು ಆಗ್ರಹಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ನಿಂದ ನಾಲ್ವರಿಗೆ ಟಿಕೆಟ್‌ ಘೋಷಣೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement