ಮಂಗಳೂರು ಆಟೊ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಮಂಗಳೂರು ಆಟೋ ಸ್ಫೋಟ ಉಗ್ರರ ಕೃತ್ಯ ಎಂದ ಡಿಜಿಪಿ ಪ್ರವೀಣ್ ಸೂದ್

ಮಂಗಳೂರು: ಮಂಗಳೂರಿನ ನಾಗುರಿ ಬಳಿ ಶನಿವಾರ ಸಂಜೆ ಆಟೋರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ ತಿರುವು ಪಡೆದುಕೊಂಡಿದ್ದು, ಇದೊಂದು ಭಯೋತ್ಪಾದನೆಯ ಕೃತ್ಯವಾಗಿದೆ ಎಂದು ಡಿಜಿಪಿ ಪ್ರವೀಣ ಸೂದ್‌ ಭಾನುವಾರ ಟ್ವೀಟ್‌ ಮಾಡಿದ್ದಾರೆ.
ದಾಳಿಯ ಸಂಚು ದೃಢಪಟ್ಟಿದೆ. ಸ್ಫೋಟವು ಆಕಸ್ಮಿಕವಾಗಿ ಸಂಭವಿಸಿದ್ದಲ್ಲ. ಗಂಭೀರ ಹಾನಿಯನ್ನು ಉಂಟುಮಾಡುವ ಉದ್ದೇಶದಿಂದ ನಡೆದ ಭಯೋತ್ಪಾದನೆಯ ಕೃತ್ಯವಾಗಿದೆ. ರಾಜ್ಯ ಪೊಲೀಸರು ಕೇಂದ್ರ ಏಜೆನ್ಸಿಗಳೊಂದಿಗೆ ಇದರ ಬಗ್ಗೆ ಆಳವಾದ ತನಿಖೆ ನಡೆಸುತ್ತಿದ್ದಾರೆ” ಎಂದು ಡಿಜಿಪಿ ಸೂದ್‌ ಅವರು ಭಾನುವಾರ ಮಾಡಿದ ಟ್ವಿಟರ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ವರದಿಗಳ ಪ್ರಕಾರ, ವಾಹನದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಆಟೋರಿಕ್ಷಾ ಚಾಲಕ ಮತ್ತು ಪ್ರಯಾಣಿಕರಿಗೆ ಗಾಯಗಳಾಗಿವೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ, ಫೋರೆನ್ಸಿಕ್ ಸೈನ್ಸ್ ಲ್ಯಾಬ್ (ಎಫ್‌ಎಸ್‌ಎಲ್) ತಂಡವು ಈ ವಿಷಯವನ್ನು ಮತ್ತಷ್ಟು ತನಿಖೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಕರ್ನಾಟಕದ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಇದೊಂದು ಭಯೋತ್ಪಾದನೆ ಸಂಬಂಧಿತ ಘಟನೆ ಎಂದು ಶಂಕಿಸಿದ್ದಾರೆ. ಘಟನೆಯ ಕುರಿತು ರಾಜ್ಯ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ ಎಂದು ಹೇಳಿದರು. ರಾಜ್ಯ ಪೊಲೀಸರೊಂದಿಗೆ ಕೇಂದ್ರ ತನಿಖಾ ತಂಡಗಳು ಸಹ ಕೈಜೋಡಿಸಲಿವೆ. ತನಿಖೆಯು ಕ್ಷಿಪ್ರವಾಗಿ ಮುಂದುವರಿಯುತ್ತದೆ. ಕೃತ್ಯದಲ್ಲಿ ಗಾಯಗೊಂಡ ಇಬ್ಬರಿಗೂ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಅವರು ಹೇಳಿದರು.
ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಮುಖ್ಯಸ್ಥ ಎನ್ ಶಶಿಕುಮಾರ್, ಆಟೋರಿಕ್ಷಾದಲ್ಲಿ ಪ್ರಯಾಣಿಕರು ಹೊತ್ತೊಯ್ಯುತ್ತಿದ್ದ ಬ್ಯಾಗ್‌ಗೆ ಬೆಂಕಿ ಹೊತ್ತಿಕೊಂಡಿರುವುದೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ : ಅಪಹರಣ ಪ್ರಕರಣ ದಾಖಲು

ಅನುಮಾನಾಸ್ಪದ ವಸ್ತುಗಳು ಪತ್ತೆ…
ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ನಿಗೂಢ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ವೇಳೆ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಎಲ್ಲ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದಾರೆ. ಆಟೋದಲ್ಲಿ ಎರಡು ಬ್ಯಾಟರಿ, ನಟ್‌, ಬೋಲ್ಟ್​​, ಸರ್ಕ್ಯೂಟ್​​ ರೀತಿಯ ವೈರಿಂಗ್ ಇರುವ ವಸ್ತು ಪತ್ತೆಯಾಗಿದೆ. ಲಘು ತೀವ್ರತೆ ಇರುವ ಸ್ಪೋಟಕ ಬಳಸಿರುವ ಶಂಕೆ ವ್ಯಕ್ತವಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯ(FSL), ಬಾಂಬ್ ನಿಷ್ಕ್ರೀಯ ದಳದಿಂದ(Bomb Disposal Squad) ತೀವ್ರ ಪರಿಶೀಲನೆ ನಡೆಯುತ್ತಿದೆ.

ಸ್ಪೋಟದ ತೀವ್ರತೆಗೆ ಪ್ರಯಾಣಿಕನ ದೇಹದ ಅರ್ಧದಷ್ಟು ಭಾಗ ಸುಟ್ಟು ಹೋಗಿದ್ದು ಚಿಕಿತ್ಸೆ ಮುಂದುವರಿದಿದೆ. ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಬರುತ್ತಿದ್ದ ಆಟೋವವನ್ನು ನಾಗುರಿ ಬಳಿ ಪ್ರಯಾಣಿಕ ಹತ್ತಿದ್ದ. ಆಟೋ ಒಂದು ಕಿ.ಮೀ ಕ್ರಮಿಸುವಷ್ಟರಲ್ಲಿ ನಿಗೂಢ ಸ್ಫೋಟ ಸಂಭವಿಸಿತ್ತು. ಪ್ರಯಾಣಿಕ ಕುಕ್ಕರ್‌ ಒಯ್ಯುತ್ತಿದ್ದಾಗ ಅದು ಸ್ಫೋಟಗೊಂಡಿತ್ತು ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಶಿರಸಿ: ಕೆಪಿಸಿಸಿ ಸದಸ್ಯ ದೀಪಕ ದೊಡ್ಡೂರು, ಇತರರ ನಿವಾಸದ ಮೇಲೆ ಐಟಿ ದಾಳಿ

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement