ಪಣಜಿ (ಗೋವಾ): ಡಿಜಿಟಲ್ ನಕ್ಷೆಗಳ (Navigation App) ಮೇಲಿನ ಅತಿಯಾದ ಅವಲಂಬನೆ ಅನೇಕರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಇತ್ತೀಚೆಗೆ ಗೋವಾದಲ್ಲಿ ಇಂತಹದ್ದೇ ಘಟನೆ ನಡೆದಿದ್ದು, ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿ ಕಂಗಾಲಾಗಿದ್ದ ವಿದೇಶಿ ಪ್ರವಾಸಿ ಮಹಿಳೆಗೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕಿಯೊಬ್ಬರು ಮಾನವೀಯತೆ ಮೆರೆದು ಸುರಕ್ಷಿತವಾಗಿ ತಲುಪಿಸಿದ ಘಟನೆ ವರದಿಯಾಗಿದೆ.
ರಾತ್ರಿ ವೇಳೆ ದಾರಿ ತಪ್ಪಿ ಭಯಭೀತಳಾಗಿ ಅಳುತ್ತಿದ್ದ ವಿದೇಶಿ ಮಹಿಳೆಗೆ ರಾಪಿಡೊ (Rapido) ಬೈಕ್ ಚಾಲಕಿ ದೇವದೂತನಂತೆ ಬಂದು ನೆರವಾಗುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಜನವರಿ 13ರಂದು ರಾತ್ರಿ ಸುಮಾರು 10 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ. ಗೋವಾ ಪ್ರವಾಸಕ್ಕೆ ಬಂದಿದ್ದ ವಿದೇಶಿ ಮಹಿಳೆಯೊಬ್ಬರು ರಾತ್ರಿ ವೇಳೆ ಒಂಟಿಯಾಗಿ ಸಂಚರಿಸುತ್ತಿದ್ದರು. ಈ ವೇಳೆ ಮೊಬೈಲ್‌ನಲ್ಲಿ ಗೂಗಲ್ ಮ್ಯಾಪ್ (Google Maps) ಕೆಲಸ ಮಾಡದ ಕಾರಣ ಅವರು ದಾರಿ ತಿಳಿಯದೆ, ಕತ್ತಲಲ್ಲಿ ಕಂಗಾಲಾಗಿದ್ದರು. ನಿರ್ಜನ ಪ್ರದೇಶದಲ್ಲಿ ಸಹಾಯಕ್ಕೆ ಯಾರೂ ಇಲ್ಲದ ಕಾರಣ ಆಕೆ ತೀವ್ರ ಆತಂಕಕ್ಕೆ ಒಳಗಾಗಿದ್ದರು.
ರಕ್ಷಕಿಯಾಗಿ ಬಂದ ರಾಪಿಡೊ ಚಾಲಕಿ
ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ರಾಪಿಡೊ ಚಾಲಕಿ ಸಿಂಧು ಕುಮಾರಿ ಅವರು, ಭಯದಿಂದ ನಡುಗುತ್ತಿದ್ದ ಪ್ರವಾಸಿ ಮಹಿಳೆಯನ್ನು ಗಮನಿಸಿ ಕೂಡಲೇ ಬೈಕ್ ನಿಲ್ಲಿಸಿದ್ದಾರೆ. ಮಹಿಳೆಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಸಿಂಧು, “ನೀವು ಸುರಕ್ಷಿತವಾಗಿದ್ದೀರಿ, ಹೆದರಬೇಡಿ” ಎಂದು ಸಮಾಧಾನಪಡಿಸಿದ್ದಾರೆ. ನಂತರ ಆಕೆಯನ್ನು ಸುರಕ್ಷಿತವಾಗಿ ಆಕೆ ತಂಗಿದ್ದ ‘ಹೋಟೆಲ್ ಕೋಕನಟ್’ಗೆ ತಲುಪಿಸಿದ್ದಾರೆ. ಅಷ್ಟೇ ಅಲ್ಲದೆ, “ಇನ್ನೇನಾದರೂ ತೊಂದರೆಯಾದರೆ ಕರೆ ಮಾಡಿ” ಎಂದು ಧೈರ್ಯ ತುಂಬಿ ಅಲ್ಲಿಂದ ನಿರ್ಗಮಿಸಿದ್ದಾರೆ.
ಈ ಮಾನವೀಯ ಕಾರ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನರು ಸಿಂಧು ಕುಮಾರಿ ಅವರ ಧೈರ್ಯ ಮತ್ತು ಕಾಳಜಿಯನ್ನು ಕೊಂಡಾಡಿದ್ದಾರೆ. “ಆಪ್‌ಗಳು ಕೈಕೊಟ್ಟಾಗ ಮಾನವೀಯತೆ ಎದ್ದು ನಿಲ್ಲುತ್ತದೆ” ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ಮತ್ತೊಬ್ಬರು “ಇದುವೇ ನಿಜವಾದ ಭಾರತದ ಸಂಸ್ಕೃತಿ. ಕಷ್ಟದಲ್ಲಿದ್ದವರಿಗೆ ನೆರವಾಗುವ ಗುಣವೇ ನಮ್ಮ ಹೆಮ್ಮೆ” ಎಂದು ಶ್ಲಾಘಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ