ಹಿಜಾಬ್ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಇರಾನ್ ಫುಟ್ಬಾಲ್ ಆಟಗಾರನಿಗೆ ಮರಣದಂಡನೆ ಶಿಕ್ಷೆಯ ಭೀತಿ

ಟೆಹ್ರಾನ್‌: ಇರಾನ್‌ನಲ್ಲಿ ರಾಷ್ಟ್ರವ್ಯಾಪಿ ನಡೆದ ಹಿಜಾಬ್‌ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಇರಾನ್ ವೃತ್ತಿಪರ ಫುಟ್ಬಾಲ್‌ ಆಟಗಾರ ಮರಣದಂಡನೆ ಭೀತಿ  ಎದುರಿಸುತ್ತಿದ್ದಾರೆ. ನವೆಂಬರ್‌ನಲ್ಲಿ, ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ 26 ವರ್ಷದ ಅಮೀರ್ ನಸ್ರ್-ಅಜಾದಾನಿ ಅವರನ್ನು ಬಂಧಿಸಲಾಯಿತು ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕಮಾಂಡರ್‌ನ ಸಾವಿಗೆ ಸಂಬಂಧಿಸಿದಂತೆ ಅವರ ಮೇಲೆ ಆರೋಪ ಹೊರಿಸಲಾಯಿತು ಎಂದು ನ್ಯೂಸ್‌ವೀಕ್ ವರದಿ ಮಾಡಿದೆ.
ಅಮೀರ್ ನಸ್ರ್-ಅಜಾದಾನಿ ಕೇವಲ ಸಂಕ್ಷಿಪ್ತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದರು ಮತ್ತು ಇತರರೊಂದಿಗೆ ಸರ್ಕಾರದ ವಿರೋಧಿ ಘೋಷಣೆಗಳನ್ನು ಕೂಗಿದರು ಎಂದು ವರದಿಯಾಗಿದೆ. ನಂತರ ನಸ್ರ್-ಅಜಾದಾನಿಯ ಮೇಲೆ ಮೊಹರೆಬೆಹ್- “ದೇವರ ವಿರುದ್ಧ ದ್ವೇಷ” ಎಂದು ಕರೆಯಲ್ಪಡುವ ಅಪರಾಧ ಮಾಡಿದ ಆರೋಪ ಹೊರಿಸಲಾಯಿತು, ಇದು ಮರಣದಂಡನೆ ಶಿಕ್ಷೆಯನ್ನೂ ಹೊಂದಿರುತ್ತದೆ.
ವೃತ್ತಿಪರ ಫುಟ್ಬಾಲ್‌ ಆಟಗಾರರಿಗಾಗಿ ನೆದರ್ಲ್ಯಾಂಡ್ಸ್ ಮೂಲದ ಅಂತರರಾಷ್ಟ್ರೀಯ ಒಕ್ಕೂಟವಾದ ಎಫ್‌ಐಎಫ್‌ಪಿಆರ್‌ಒ (FIFPRO), ಅಮೀರ್ ನಸ್ರ್-ಅಜಾದಾನಿ ಅವರ ಮರಣದಂಡನೆಯ ವಿರುದ್ಧ ಮಾತನಾಡಿದೆ.

ತನ್ನ ದೇಶದಲ್ಲಿ ಮಹಿಳಾ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯಕ್ಕಾಗಿ ಪ್ರಚಾರ ಮಾಡಿದ ನಂತರ ವೃತ್ತಿಪರ ಫುಟ್ಬಾಲ್ ಆಟಗಾರ ಅಮೀರ್ ನಾಸ್ರ್-ಅಜಾದಾನಿ ಇರಾನ್‌ನಲ್ಲಿ ಮರಣದಂಡನೆಯನ್ನು ಎದುರಿಸುತ್ತಿದ್ದಾರೆ ಎಂಬ ವರದಿಗಳಿಂದ ಆಘಾತಕ್ಕೊಳಗಾಗಿರುವುದಾಗಿ ಎಫ್‌ಐಎಫ್‌ಪಿಆರ್‌ಒ ಹೇಳಿದೆ.
“ನಾವು ಅಮೀರ್ ಅವರೊಂದಿಗೆ ಒಗ್ಗಟ್ಟಾಗಿ ನಿಲ್ಲುತ್ತೇವೆ ಮತ್ತು ಅವರ ಶಿಕ್ಷೆಯನ್ನು ತಕ್ಷಣವೇರದ್ದು ಮಾಡಲು ಕರೆ ನೀಡುತ್ತೇವೆ” ಎಂದು ಸಂಘಟನೆಯು ಟ್ವೀಟ್‌ನಲ್ಲಿ ತಿಳಿಸಿದೆ.
ಇರಾನ್‌ನ “ನೈತಿಕತೆಯ ಪೋಲೀಸರ” ವಶದಲ್ಲಿದ್ದಾಗ ಅನುಭವಿಸಿದ ಗಾಯಗಳಿಂದ 22 ವರ್ಷದ ಮಹ್ಸಾ ಅಮಿನಿ ಸೆಪ್ಟೆಂಬರ್‌ನಲ್ಲಿ ಸಾವಿಗೀಡಾದ ನಂತರ ಇರಾನ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಹಿಜಾಬ್ ಅನ್ನು ಸರಿಯಾಗಿ ಧರಿಸದ ಕಾರಣಕ್ಕಾಗಿ ರಾಜಧಾನಿ ಟೆಹ್ರಾನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಹ್ಸಾ ಅಮಿನಿ ಅವರನ್ನು ಬಂಧಿಸಲಾಯಿತು ಎಂದು ವರದಿಯಾಗಿದೆ.
ದೇಶದ ನಿರಂತರ ಪ್ರತಿಭಟನೆಗಳ ಮಧ್ಯೆ ಅಶಾಂತಿಯ ಸಮಯದಲ್ಲಿ ಹಲವಾರು ಭದ್ರತಾ ಅಧಿಕಾರಿಗಳ ಸಾವಿಗೆ ಸಂಬಂಧಿಸಿದಂತೆ 26 ವರ್ಷದ ಇರಾನಿನ ಲೀಗ್ ಫುಟ್ಬಾಲ್ ಆಟಗಾರನು ಮರಣದಂಡನೆಗೆ ಗುರಿಯಾಗಬಹುದು ಎಂದು ವಿದೇಶಿ ಮೂಲದ ಸುದ್ದಿವಾಹಿನಿಗಳ ವರದಿಗಳ ನಂತರ ಕರೆ ಬಂದಿದೆ.
ಆದರೆ ನ್ಯಾಯಾಂಗದ ಹಿರಿಯ ಅಧಿಕಾರಿಯೊಬ್ಬರು ನಾಸರ್ ಆಜಾದಾನಿಗೆ ಮರಣದಂಡನೆ ಶಿಕ್ಷೆ ವಿಧಿಸಿರುವುದನ್ನು ನಿರಾಕರಿಸಿದ್ದಾರೆ. ಫುಟ್ಬಾಲ್ ಆಟಗಾರನನ್ನು ಬಂಧಿಸಿದ ಇಸ್ಫಹಾನ್‌ನ ನ್ಯಾಯಾಂಗ ಮುಖ್ಯಸ್ಥ ಅಸದೊಲ್ಲಾ ಜಾಫಾರಿ “ಮೊಹರೆಬೆಗೆ ಪೂರಕ” ಆರೋಪವನ್ನು ಹೊಂದಿರುವ ದೋಷಾರೋಪಣೆಯನ್ನು ಅವರಿಗೆ ತಿಳಿಸಲಾಗಿದೆ, ಆದರೆ ಶಿಕ್ಷೆಯು ರೆವಲ್ಯೂಶನರಿ ನ್ಯಾಯಾಲಯದಿಂದ ಮುಂದಿನ ತನಿಖೆಗೆ ಬಾಕಿ ಇದೆ ಎಂದು ಹೇಳಿದ್ದಾರೆ ಎಂದು ಅಲ್‌ ಜಜೀರಾ ವರದಿ ಮಾಡಿದೆ. ಮೊಹರೆಬೆಹ್, ಅಥವಾ “ದೇವರ ವಿರುದ್ಧ ಯುದ್ಧ ಮಾಡುವುದು” ಎಂಬ ಪ್ರಕರಣ ಮರಣದಂಡನೆಯನ್ನು ಹೊಂದಿರುವ ಆರೋಪವಾಗಿದೆ.

ಪ್ರಮುಖ ಸುದ್ದಿ :-   ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಸಾವು

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement