‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಕಾಯ್ದೆ ತಿದ್ದುಪಡಿಗೆ ಮುಂದಾದ ಗುಜರಾತ್‌ ಸರ್ಕಾರ ; ವಾಟ್ಸಾಪ್‌ನಲ್ಲಿ ಪೋಷಕರಿಗೆ ಮಾಹಿತಿ..!

ಗಾಂಧಿನಗರ: ಗುಜರಾತ್ ರಾಜ್ಯದಲ್ಲಿ ವಿವಾಹ ನೋಂದಣಿ ಪ್ರಕ್ರಿಯೆಯು ಶೀಘ್ರದಲ್ಲೇ ದೊಡ್ಡ ಬದಲಾವಣೆಗೆ ಮುಂದಾಗಿದೆ. ವಿವಿಧ ಸಮುದಾಯಗಳ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರವು, ವಿವಾಹದ ಕಾನೂನು ಪ್ರಕ್ರಿಯೆಯಲ್ಲಿ ‘ಕುಟುಂಬದ ಘಟಕ’ಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ವಿವಾಹ ನೋಂದಣಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಅಲ್ಲದೆ, ಅದು ಪ್ರೇಮ ವಿವಾಹಗಳ ಬಗ್ಗೆ ಪೋಷಕರಿಗೆ ವಾಟ್ಸಾಪ್ ಮೂಲಕ  ಮಾಹಿತಿ ನೀಡಲು ಯೋಜಿಸಿದೆ.
ಗುಜರಾತ್ ಉಪಮುಖ್ಯಮಂತ್ರಿ ಹರ್ಷ್ ಸಂಘವಿ ಅವರು ಈ ಬಗ್ಗೆ ಪ್ರಕಟಿಸಿದ್ದು, ‘ಗುಜರಾತ್ ವಿವಾಹಗಳ ನೋಂದಣಿ ಕಾಯ್ದೆ’ಗೆ ತಿದ್ದುಪಡಿ ತರುವ ಮೂಲಕ ಪ್ರಸ್ತುತ ಇರುವ ಸರಳ ಪ್ರಕ್ರಿಯೆಯ ಬದಲಿಗೆ ಅತ್ಯಂತ ಕಟ್ಟುನಿಟ್ಟಾದ ಮತ್ತು ಬಹುಹಂತದ ಪರಿಶೀಲನಾ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ಈ ಪ್ರಸ್ತಾವನೆಯ ಅತ್ಯಂತ ಗಮನಾರ್ಹ ಅಂಶವೆಂದರೆ ವಧು-ವರರು ನೀಡಬೇಕಾದ ‘ಪೋಷಕರ ಘೋಷಣೆ’. ವಿವಾಹವಾಗಲಿರುವ ಜೋಡಿಗಳು ತಮ್ಮ ಮದುವೆಯ ವಿಷಯ ಪೋಷಕರಿಗೆ ತಿಳಿದಿದೆಯೇ ಅಥವಾ ಇಲ್ಲವೇ ಎಂಬುದನ್ನು ಅಧಿಕೃತವಾಗಿ ದಾಖಲಿಸಬೇಕಾಗುತ್ತದೆ.

ಪ್ರಸ್ತಾವಿತ ಪರಿಷ್ಕರಣೆಯ ಪ್ರಮುಖ ಅಂಶವೆಂದರೆ ಪ್ರೇಮ ವಿವಾಹ ನೋಂದಣಿಗೆ ದಂಪತಿ ಅರ್ಜಿ ಸಲ್ಲಿಸಿದ ನಂತರ, ಹುಡುಗಿಯ ಪೋಷಕರು ಸಲ್ಲಿಸಿದ ವಿವರಗಳನ್ನು ವಾಟ್ಸಾಪ್ ಮೂಲಕ ಸ್ವಯಂಚಾಲಿತವಾಗಿ ಸ್ವೀಕರಿಸುತ್ತಾರೆ, ಆದರೆ ಅರ್ಜಿ ಸಲ್ಲಿಸಿದ 40 ನೇ ದಿನದಂದು ವಿವಾಹ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
ಇದು ಕೇವಲ ಔಪಚಾರಿಕ ಪ್ರಕ್ರಿಯೆಯಾಗಿ ಉಳಿಯುವುದಿಲ್ಲ. ಅರ್ಜಿ ಸಲ್ಲಿಕೆಯಾದ 10 ಕೆಲಸದ ದಿನಗಳ (working days) ಒಳಗಾಗಿ, ಅರ್ಜಿಯಲ್ಲಿ ನೀಡಲಾದ ಸಂಪರ್ಕ ವಿವರಗಳನ್ನು ಬಳಸಿ ವಧು-ವರರ ಪೋಷಕರಿಗೆ ತಿಳಿಸುವ ಜವಾಬ್ದಾರಿಯನ್ನು ‘ಸಹಾಯಕ ನೋಂದಣಾಧಿಕಾರಿ’ಗೆ (Assistant Registrar) ವಹಿಸಲಾಗುತ್ತದೆ. ಅಷ್ಟೇ ಅಲ್ಲದೆ, ಪೋಷಕರ ಆಧಾರ್ ಕಾರ್ಡ್‌ಗಳಿಂದ ಹಿಡಿದು ಮದುವೆಯ ಆಮಂತ್ರಣ ಪತ್ರಿಕೆಯವರೆಗೆ (ಕಂಕೋತ್ರಿ) ಸಮಗ್ರ ದಾಖಲೆಗಳನ್ನು ಒದಗಿಸುವುದು ಇನ್ನು ಮುಂದೆ ಕಡ್ಡಾಯವಾಗಲಿದೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಪ್ರಸ್ತಾವಿತ ಹೊಸ ನಿಯಮದ ಪ್ರಕಾರ, ಮದುವೆಯಾದ ತಕ್ಷಣ ಅಥವಾ ಅಲ್ಪಾವಧಿಯಲ್ಲಿ ನೋಂದಣಿ ಪ್ರಮಾಣಪತ್ರ ಪಡೆಯಲು ಇನ್ನು ಮುಂದೆ ಸಾಧ್ಯವಾಗುವುದಿಲ್ಲ. ಅರ್ಜಿ ಸಲ್ಲಿಸಿದ ನಂತರ ಕನಿಷ್ಠ 30 ದಿನಗಳ ಕಾಲಾವಕಾಶವನ್ನು ಕಡ್ಡಾಯಗೊಳಿಸಲಾಗಿದೆ. ಈ ಅವಧಿಯಲ್ಲಿ ಮದುವೆಯ ಫೋಟೋಗಳು ಮತ್ತು ಸಾಕ್ಷಿಗಳ ವಿವರಗಳು ಸೇರಿದಂತೆ ಎಲ್ಲಾ ದತ್ತಾಂಶಗಳನ್ನು ರಾಜ್ಯ ಸರ್ಕಾರದ ಆನ್‌ಲೈನ್ ಪೋರ್ಟಲ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಇದು ರಾಜ್ಯದಾದ್ಯಂತ ಮದುವೆಯ ದಾಖಲೆಗಳ ಪಾರದರ್ಶಕ ಡಿಜಿಟಲ್ ಆಡಿಟ್ ನಡೆಸಲು ನೆರವಾಗಲಿದೆ.
ಈ ಕುರಿತು ಮಾತನಾಡಿದ ಉಪಮುಖ್ಯಮಂತ್ರಿ ಹರ್ಷ್ ಸಂಘವಿ, “ಭವಿಷ್ಯದಲ್ಲಿ ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಿದ ತಕ್ಷಣ ಪೋಷಕರಿಗೆ ವ್ಯಾಟ್ಸಾಪ್ ಮತ್ತು ಸಂದೇಶಗಳ ಮೂಲಕ ಮಾಹಿತಿ ತಲುಪುವ ವ್ಯವಸ್ಥೆ ಜಾರಿಗೆ ಬರಲಿದೆ. ಇದು ಪೋಷಕರ ಭಾವನೆಗಳನ್ನು ಗೌರವಿಸುವುದರ ಜೊತೆಗೆ ಎಲ್ಲರ ಹಕ್ಕುಗಳನ್ನು ರಕ್ಷಿಸುತ್ತದೆ,” ಎಂದು ತಿಳಿಸಿದ್ದಾರೆ.
ವಿವಿಧ ಸಮುದಾಯಗಳ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು ಈ ‘ಸಮಾಲೋಚನಾ ವಿಧಾನ’ವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆಯಾದರೂ, ಈ ಹಾದಿ ಅಷ್ಟು ಸುಗಮವಾಗಿರುವಂತೆ ಕಾಣುತ್ತಿಲ್ಲ. ಪೋಷಕರಿಗೆ ಕಡ್ಡಾಯವಾಗಿ ಮಾಹಿತಿ ನೀಡುವ ಈ ಕ್ರಮವು ಮದುವೆಯಾಗುವವರ ವೈಯಕ್ತಿಕ ನಿರ್ಧಾರ ಮತ್ತು ಸ್ವಾತಂತ್ರ್ಯಕ್ಕೆ ಅಡ್ಡಿಯಾಗಬಹುದು ಎಂಬ ಆತಂಕವೂ ಇದೆ.
ಪ್ರಸ್ತುತ ಈ ಪ್ರಸ್ತಾವನೆಯನ್ನು ಸಾರ್ವಜನಿಕರ ಅವಗಾಹನೆಗೆ ಇಡಲಾಗಿದ್ದು, 30 ದಿನಗಳ ಕಾಲ ಪ್ರತಿಕ್ರಿಯೆ ನೀಡಲು ಅವಕಾಶ ನೀಡಲಾಗಿದೆ. ಸಾರ್ವಜನಿಕರಿಂದ ಬರುವ ‘ಸಮಂಜಸ ಆಕ್ಷೇಪಣೆಗಳು’ ಈ ಕಾನೂನಿನ ಅಂತಿಮ ರೂಪವನ್ನು ನಿರ್ಧರಿಸಲಿವೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement