ಕೆರಗೋಡು ಹನುಮ ಧ್ವಜ ತೆರವಿಗೆ ಬೃಹತ್‌ ಪ್ರತಿಭಟನೆ : ಮಂಡ್ಯದಲ್ಲಿ ಕಲ್ಲು ತೂರಾಟ, ಲಾಠಿ ಪ್ರಹಾರ

ಮಂಡ್ಯ: ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ತೆರವು ವಿವಾದ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಬೀದಿಗಿಳಿದು ಪ್ರತಿಭಟನೆ ನಡೆಸಿದೆ. ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಜಂಟಿ ಹೋರಾಟದ ತೀವ್ರತೆ ಜೋರಾಗಿತ್ತು.
ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿರುವುದನ್ನು ಖಂಡಿಸಿ ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರು, ಹಿಂದೂ ಪರ ಸಂಘಟನೆಗಳ ಸಾವಿರಾರು ಸದಸ್ಯರು ಗ್ರಾಮದಿಂದ ಮಂಡ್ಯದ ಜಿಲ್ಲಾಧಿಕಾರಿ ಕಚೇರಿವರೆಗೆ ಸೋಮವಾರ ಬೃಹತ್‌ ಪಾದಯಾತ್ರೆ ನಡೆಸಿದರು.
ಬೆಳಿಗ್ಗೆ 8 ಗಂಟೆಗೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಸಿಟಿ ರವಿ ನೇತೃತ್ವದಲ್ಲಿ ಕೆರಗೋಡಿನಿಂದ ಮಂಡ್ಯದ ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಸಾವಿರಾರು ಮಂದಿ 15 ಕಿ.ಮೀ ದಾರಿಯುದ್ದಕ್ಕೂ ಕೇಸರಿ ಮಯವನ್ನೇ ಮಾಡಿದ್ದರು.

ಡಿ.ಜೆ, ಬ್ಯಾಂಡ್‌ ಸೆಟ್‌ ಸದ್ದಿನೊಂದಿಗೆ ಮೆರವಣಿಗೆ ಸಾಗಿತು. ಕೆಲವರು ಬೈಕ್‌, ಆಟೊ, ಕಾರುಗಳ ರ‍್ಯಾಲಿ ಸಹ ನಡೆಸಿದರು. ಮೆರವಣಿಗೆಯಲ್ಲಿದ್ದ ಶ್ರೀರಾಮನ ಬೃಹತ್‌ ಭಾವಚಿತ್ರಕ್ಕೆ ಗ್ರಾಮೀಣ ಮಹಿಳೆಯರು, ಮಕ್ಕಳು ಪೂಜೆ ಸಲ್ಲಿಸಿದರು.
ಸಿಟಿ ರವಿ (CT Ravi) ನೇತೃತ್ವದಲ್ಲಿ ಕೆರಗೋಡಿನಿಂದ ಮಂಡ್ಯವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಸಾವಿರಾರು ಮಂದಿ ರಾಜ್ಯ ಸರ್ಕಾರದ ಮಾರ್ಗಮಧ್ಯೆ ಕಾಂಗ್ರೆಸ್ ಪಕ್ಷದ ಫ್ಲೆಕ್ಸ್, ಬ್ಯಾನರ್ ಗಳು ಹರಿದರು. ಕಲ್ಲು ತೂರಿ ಆಕ್ರೋಶ ಹೊರಹಾಕಿದರು. ಶಾಸಕ ಗಣಿಗ ರವಿಕುಮಾರ ಅವರ ಭಾವಚಿತ್ರಗಳನ್ನು ಹರಿದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಮಹಾವೀರ ವೃತ್ತ, ಜೆಸಿ ವೃತ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ, ಗಣಿಗ ರವಿಕುಮಾರ ಭಾವಚಿತ್ರವುಳ್ಳ ಫ್ಲೆಕ್ಸ್‌ಗೆ ಬೆಂಕಿ ಹಚ್ಚಲಾಯಿತು. ಮಹಾವೀರ ವೃತ್ತದಲ್ಲಿ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರಿಂದ ಕೆಲ ಪ್ರತಿಭಟನಾಕಾರರು ಗಾಯಗೊಂಡರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಪ್ರಕರಣದ ಹಿಂದೆ ಡಿಕೆ ಶಿವಕುಮಾರ ಕೈವಾಡ : ವಕೀಲ ದೇವರಾಜೇಗೌಡ ಗಂಭೀರ ಆರೋಪ

ಮಹಾವೀರ ವೃತ್ತದಿಂದ ಜೆ.ಸಿ.ವೃತ್ತದವರೆಗೂ ಪ್ರತಿಭಟನಾಕಾರರು ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ಘೋಷಣೆ ಕೂಗಿದರು. ಅರ್ಧಗಂಟೆಗೂ ಹೆಚ್ಚು ಕಾಲ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪೊಲೀಸರು ಮಾರ್ಗ ಬದಲಾಯಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಪಾದಯಾತ್ರೆಯಲ್ಲಿ ಬಿಜೆಪಿ ಮುಖಂಡರಾದ ಸಿ.ಟಿ.ರವಿ, ಕೆ.ಸಿ.ನಾರಾಯಣಗೌಡ, ಪ್ರೀತಂಗೌಡ, ಕಲ್ಯಾಣ ರಾಜ್ಯದ ಪ್ರಗತಿ ಪಕ್ಷದ ಸ್ಥಾಪಕ, ಶಾಸಕ ಗಾಲಿ ಜನಾರ್ಧನ ರೆಡ್ಡಿ, ಜೆಡಿಎಸ್‌ ಶಾಸಕ ಎಚ್‌.ಟಿ.ಮಂಜು ಮೊದಲಾದವರು ಇದ್ದರು.
ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ರಸ್ತೆ ಪ್ರವೇಶಿಸಿದಾಗ ಕಾರ್ಯಕರ್ತರು ಕಚೇರಿ ಪ್ರವೇಶಿಸದಂತೆ ಎರಡೂ ಗೇಟ್‌ಗಳನ್ನು ಮುಚ್ಚಿ 200ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement