ಮೊಬೈಲ್‌ ರಿಪೇರಿ ಮಾಡಿಸಿಕೊಡು ಎಂದು ಹಠ ಮಾಡಿದ್ದಕ್ಕೆ ಮಗನನ್ನೇ ಕ್ರಿಕೆಟ್‌ ಬ್ಯಾಟಿನಿಂದ ಹೊಡೆದು ಕೊಂದ ತಂದೆ..!

ಬೆಂಗಳೂರು: ಹೊಸ ಮೊಬೈಲ್ ಕೊಡಿಸು ಇಲ್ಲವೇ ಮನೆಯಲ್ಲಿದ್ದ ಹಳೆಯ ಮೊಬೈಲ್ ರಿಪೇರಿ ಮಾಡಿಸಿಕೊಂಡು ಎಂದು ಹಠ ಮಾಡಿದ 14 ವರ್ಷದ ಮಗನನ್ನು ತಂದೆಯೇ ಹತ್ಯೆಗೈದ ಘಟನೆ ಬೆಂಗಳೂರಿನಲ್ಲಿ ಶುಕ್ರವಾರ ನಡೆದಿದೆ ಎಂದು ವರದಿಯಾಗಿದೆ.
ತಂದೆ ರವಿಕುಮಾರ (44) ಎಂಬಾತ ತನ್ನ ಪುತ್ರ ಹಾಗೂ 9 ನೇ ತರಗತಿಯ ವಿದ್ಯಾರ್ಥಿ ತೇಜಸ್‌ನನ್ನು ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದಿದ್ದಾನೆ ಮತ್ತು ಮಗನ ತಲೆಯನ್ನು ಗೋಡೆಗೆ ಗುದ್ದಿದ್ದಾನೆ, ಇದರ ಪರಿಣಾಮವಾಗಿ ತೀವ್ರವಾದ ಆಂತರಿಕ ಗಾಯ ಹಾಗೂ ರಕ್ತಸ್ರಾವದಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿಯ ಪ್ರಕಾರ, ಓದಿನ ಬಗ್ಗೆ ಮಗ ತೋರುತ್ತಿದ್ದ ನಿರಾಸಕ್ತಿ ಮತ್ತು ಆತ ಮೊಬೈಲ್ ಫೋನ್‌ನ ಅತಿಯಾಗಿ ಬಳಸುತ್ತಿದ್ದ ಬಗ್ಗೆ ವೃತ್ತಿಯಲ್ಲಿ ಬಡಗಿಯಾಗಿರುವ ತಂದೆಗೆ ಕೋಪವಿತ್ತು. ಅಪರಾಧ ನಡೆದ ದಿನ ತೇಜಸ್ ನನಗೆ ಹೊಸ ಫೋನ್ ಕೊಡಿಸು ಅಥವಾ ಮನೆಯಲ್ಲಿದ್ದ ಹಳೆಯ ಫೋನ್ ರಿಪೇರಿ ಮಾಡಿಸಿ ಕೊಡು ಎಂದು ಪಟ್ಟು ಹಿಡಿದಿದ್ದಾನೆ. ಆಗ ಜಗಳ ನಡೆದಿದೆ. ಅದು ವಿಕೋಪಕ್ಕೆ ಹೋಗಿ ತಂದೆ ರವಿಕುಮಾರ, ಕ್ರಿಕೆಟ್ ಬ್ಯಾಟ್ ಹಿಡಿದು ತೇಜಸ್‌ನನ್ನು ಹೊಡೆಯಲು ಪ್ರಾರಂಭಿಸಿದ್ದಾನೆ. ನಂತರ ಆತನ ಕುತ್ತಿಗೆ ಹಿಡಿದು ಗೋಡೆಗೆ ಹಲವಾರು ಬಾರಿ ಗುದ್ದಿಸಿದ್ದಾನೆ ಎಂದು ಹೇಳಲಾಗುತ್ತದೆ. ಹಲ್ಲೆ ನಡೆದಾಗ ಬಾಲಕನ ತಾಯಿ ಮನೆಯಲ್ಲಿದ್ದಳು ಎನ್ನಲಾಗಿದೆ.
ಬಾಲಕ ಗಂಭೀರವಾಗಿ ಗಾಯಗೊಂಡಿದ್ದ. ಪರಿಸ್ಥಿತಿಯ ತೀವ್ರತೆಯ ಹೊರತಾಗಿಯೂ, ತಂದೆ ತೇಜಸ್ ನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಿಲ್ಲ. ಆತ ಬೆಳಿಗ್ಗೆಯಿಂದ ಮಧ್ಯಾಹ್ನ 2ರ ಸುಮಾರಿಗೆ ಉಸಿರಾಟ ನಿಲ್ಲಿಸುವವರೆಗೆ ಹಲವಾರು ಗಂಟೆಗಳ ಕಾಲ ನೋವಿನಿಂದ ನರಳುತ್ತಿದ್ದ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಏರ್ ಇಂಡಿಯಾ ವಿಮಾನದಲ್ಲಿ 7 ಮಂದಿ ಅಸ್ವಸ್ಥ

ನಂತರ ಬಾಲಕ ಪ್ರಜ್ಞಾಹೀನನಾಗಿದ್ದಾನೆ. ಆಗ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಸ್ಪತ್ರೆಗೆ ಬರುವಷ್ಟರಲ್ಲಿ ತೇಜಸ್ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ಶಾಲಾ ಬಾಲಕನ ಅನುಮಾನಾಸ್ಪದ ಸಾವಿನ ಕುರಿತು ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಮನೆಗೆ ಆಗಮಿಸಿದಾಗ, ಬಾಲಕನ ದೇಹದ ಅಂತ್ಯಕ್ರಿಯೆಯ ಸಿದ್ಧತೆಗಳಲ್ಲಿ ತೊಡಗಿದ್ದರು ಎಂದು ಹೇಳಲಾಗಿದೆ. ನಂತರ ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಯು ಬಾಲಕನ ತಲೆಗೆ ತೀವ್ರತರವಾದ ಆಂತರಿಕ ಗಾಯಗಳಾಗಿದೆ ಮತ್ತು ದೇಹದ ಮೇಲೆ ಅನೇಕ ಗಾಯಗಳಿವೆ ಎಂಬುದನ್ನುಹೊಂದಿದೆ ಎಂದು ಬಹಿರಂಗಪಡಿಸಿದೆ, ಅಲ್ಲದೆ, ಸಾವಿಗೆ ಮುನ್ನ ಬಾಲಕನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ ಎಂದು ಸೂಚಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement