ಬೆಂಗಳೂರು : ಕರ್ನಾಟಕದ ಗಡಿಭಾಗದ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯವಾಗಿ ಮೊದಲ ಭಾಷೆಯನ್ನಾಗಿ ಮಾಡುವ ಕೇರಳ ಸರ್ಕಾರದ ಕ್ರಮಕ್ಕೆ ಕರ್ನಾಟಕ ಸರ್ಕಾರ ಮತ್ತು ಕನ್ನಡ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತೀವ್ರ ವಿರೋಧ ವ್ಯಕ್ತಪಡಿಸಿವೆ.
ಪ್ರಸ್ತಾವಿತ ಮಲಯಾಳಂ ಭಾಷಾ ವಿಧೇಯಕ-2025ರ ಅನ್ವಯ 1ರಿಂದ 10ನೇ ತರಗತಿಯವರೆಗೆ ಮಲಯಾಳಂ ಅನ್ನು ಮೊದಲ ಭಾಷೆಯನ್ನಾಗಿ ಕಡ್ಡಾಯಗೊಳಿಸಲು ಕೇರಳ ಸರ್ಕಾರ ಮುಂದಾಗಿದೆ. ಇದು ಕಾಸರಗೋಡು ಸೇರಿದಂತೆ ಗಡಿಭಾಗದ ಕನ್ನಡ ಭಾಷಿಕ ವಿದ್ಯಾರ್ಥಿಗಳಿಗೆ ದೊಡ್ಡ ಸಂಕಷ್ಟ ತಂದೊಡ್ಡಲಿದೆ.
ಈ ಕುರಿತು ಎಕ್ಸ್ (ಟ್ವಿಟರ್)ನಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ಭಾಷಾ ಅಲ್ಪಸಂಖ್ಯಾತರಿಗೆ ಭಾಷೆ ಎನ್ನುವುದು ಕೇವಲ ಒಂದು ವಿಷಯವಲ್ಲ, ಅದು ಅವರ ಘನತೆ ಮತ್ತು ಗುರುತಾಗಿದೆ. ಒಂದು ವೇಳೆ ಈ ವಿಧೇಯಕ ಜಾರಿಯಾದಲ್ಲಿ, ಸಂವಿಧಾನ ನೀಡಿರುವ ಹಕ್ಕುಗಳನ್ನು ಬಳಸಿ ಕರ್ನಾಟಕ ಇದನ್ನು ಬಲವಾಗಿ ವಿರೋಧಿಸಲಿದೆ ಎಂದು ಎಚ್ಚರಿಸಿದ್ದಾರೆ.
ಕೇರಳಕ್ಕೆ ತನ್ನ ಭಾಷೆಯನ್ನು ಪ್ರಚಾರ ಮಾಡುವ ಹಕ್ಕಿದೆ, ಆದರೆ ಅದನ್ನು ಇತರರ ಮೇಲೆ ಹೇರುವುದು ಸರಿಯಲ್ಲ. ಈ “ಬಲವಂತದ ನಿಲುವು” ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ:
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಈಗಾಗಲೇ ಕೇರಳ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದು, ಈ ವಿಧೇಯಕವು ಅಸಂವಿಧಾನಿಕ ಎಂದು ಕಿಡಿಕಾರಿದೆ.
ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡವೇ ಮೊದಲ ಭಾಷೆಯಾಗಿದ್ದು, ಮಲಯಾಳಂ ಹೇರಿಕೆಯಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಲಿದೆ. 2017ರಲ್ಲೂ ಇಂತಹದ್ದೇ ವಿಧೇಯಕವನ್ನು ಭಾರತದ ರಾಷ್ಟ್ರಪತಿಗಳು ತಿರಸ್ಕರಿಸಿದ್ದನ್ನು ಪ್ರಾಧಿಕಾರ ನೆನಪಿಸಿದೆ.
ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಶಿಕ್ಷಕರನ್ನು ನೇಮಿಸಬೇಕು. ಸಾರ್ವಜನಿಕ ಸ್ಥಳಗಳು ಮತ್ತು ಸಾರಿಗೆ ಕೇಂದ್ರಗಳಲ್ಲಿ ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು. ಕಾಸರಗೋಡು ಜಿಲ್ಲೆಯ ಸರ್ಕಾರಿ ಪತ್ರವ್ಯವಹಾರಗಳಲ್ಲಿ ಕನ್ನಡ ಬಳಸಬೇಕು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಒತ್ತಾಯಿಸಿದೆ.
ಭಾಷಾ ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳನ್ನು ಗಮನದಲ್ಲಿಟ್ಟುಕೊಂಡು ವಿಧೇಯಕವನ್ನು ಮರುಪರಿಶೀಲಿಸುವುದಾಗಿ ಕೇರಳ ರಾಜ್ಯಪಾಲರು ಭರವಸೆ ನೀಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ