ಭಾರತ-ಯುರೋಪಿಯನ್ ಒಕ್ಕೂಟದ ನಡುವೆ ʼಮುಕ್ತ ವ್ಯಾಪಾರ ಒಪ್ಪಂದʼಕ್ಕೆ ಸಹಿ: ಗ್ರಾಹಕರಿಗೆ ಸಿಗುವ ಲಾಭಗಳೇನು?

ನವದೆಹಲಿ: ಭಾರತ ಮತ್ತು ಯುರೋಪಿಯನ್ ಒಕ್ಕೂಟ (EU) ದಶಕಗಳಿಂದ ಬಾಕಿ ಉಳಿದಿದ್ದ ಐತಿಹಾಸಿಕ ‘ಮುಕ್ತ ವ್ಯಾಪಾರ ಒಪ್ಪಂದ’ಕ್ಕೆ (FTA) ಅಧಿಕೃತವಾಗಿ ಸಹಿ ಹಾಕಿವೆ. ಪ್ರಧಾನಿ ನರೇಂದ್ರ ಮೋದಿ ಇದನ್ನು “ಎಲ್ಲಾ ವ್ಯಾಪಾರಗಳ ತಾಯಿ” (Mother of all trades) ಎಂದು ಬಣ್ಣಿಸಿದ್ದು, ದ್ವಿಪಕ್ಷೀಯ ಆರ್ಥಿಕ ಸಂಬಂಧದಲ್ಲಿ ಇದೊಂದು ಮಹತ್ವದ ಮೈಲಿಗಲ್ಲು ಎಂದು ಘೋಷಿಸಿದ್ದಾರೆ.
ಇದರಿಂದಾಗಿ ಐರೋಪ್ಯ ಒಕ್ಕೂಟದ 27 ರಾಷ್ಟ್ರಗಳ ಮಾರುಕಟ್ಟೆ ಪ್ರವೇಶ ಈ ಒಪ್ಪಂದದ ಅಡಿಯಲ್ಲಿ ಭಾರತಕ್ಕೆ ಸಿಗಲಿದೆ. ಯೂರೋಪಿಯನ್ ಕೌನ್ಸಿಲ್ ಮುಖ್ಯಸ್ಥ ಆಂಟೋನಿಯೋ ಕೋಸ್ಟಾ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಯುರೋಪಿಯನ್ ಒಕ್ಕೂಟದ ಮುಖ್ಯಸ್ಥೆ ಉರ್ಸುಲಾ ವಾನ್ ಡೆರ್ ಲೇನ್ ಮಂಗಳವಾರ ಭಾರತದೊಂದಿಗಿನ ಐತಿಹಾಸಿಕ ವ್ಯಾಪಾರ ಒಪ್ಪಂದವನ್ನು ಶ್ಲಾಘಿಸಿದ್ದಾರೆ. 77 ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾರತದಲ್ಲಿದ್ದ ಯುರೋಪಿಯನ್‌ ಒಕ್ಕೂಟದ ಮುಖ್ಯಸ್ಥರು, ಈ ಒಪ್ಪಂದವು ಎರಡೂ ಕಡೆಯ ಪಾಲುದಾರಿಕೆಯಲ್ಲಿ ಹೊಸ ಅಧ್ಯಾಯವನ್ನು ಗುರುತಿಸುತ್ತದೆ ಎಂದು ಹೇಳಿದ್ದಾರೆ.

ಭಾರತ ಹಾಗೂ ಯುರೋಪಿಯನ್‌ ಒಕ್ಕೂಟ ಸೇರಿ 200 ಕೋಟಿ ಗ್ರಾಹಕರಿರುವ ಬೃಹತ್ ಮಾರುಕಟ್ಟೆ ಸೃಷ್ಟಿಯಾಗುತ್ತದೆ. 2024-25ರ ಹಣಕಾಸು ವರ್ಷದಲ್ಲಿ ಈ ಎರಡು ಮಹಾನ್ ಆರ್ಥಿಕ ಶಕ್ತಿಗಳ ನಡುವೆ ನಡೆದ ದ್ವಿಪಕ್ಷೀಯ ವ್ಯಾಪಾರ ಗಣನೀಯವಾಗಿದೆ. ಸರಕುಗಳ ವಹಿವಾಟು 136.5 ಬಿಲಿಯನ್ ಡಾಲರ್ ಇದ್ದರೆ, ಸರ್ವಿಸಸ್ ಟ್ರೇಡ್ 80 ಬಿಲಿಯನ್ ಡಾಲರ್​ನಷ್ಟು ಇತ್ತು. ಒಟ್ಟೂ ಮಾರುಕಟ್ಟೆ ಗಾತ್ರ ಗಮನಿಸಿದಾಗ ಈ ದ್ವಿಪಕ್ಷೀಯ ವ್ಯಾಪಾರ ಪ್ರಮಾಣ ಇನ್ನೂ ಬೃಹತ್ ಆಗುವ ಎಲ್ಲಾ ಸಾಧ್ಯತೆ ಇದೆ.
ಯುರೋಪಿನಿಂದ ಭಾರತಕ್ಕೆ ರಫ್ತಾಗುವ ಶೇ. 90ಕ್ಕೂ ಹೆಚ್ಚು ಸರಕುಗಳ ಮೇಲಿನ ಆಮದು ಸುಂಕದಲ್ಲಿ ಭಾರಿ ಕಡಿತವಾಗಲಿದೆ. ಈ ಒಪ್ಪಂದದಿಂದ ಯುರೋಪಿಯನ್ ರಾಷ್ಟ್ರಗಳಿಗೆ ಸುಮಾರು 4 ಶತಕೋಟಿ ಯುರೋಗಳಷ್ಟು ಸುಂಕ ಉಳಿತಾಯವಾಗಲಿದೆ. ಈ ವ್ಯಾಪಾರ ಒಪ್ಪಂದವು ಜಾಗತಿಕ ಜಿಡಿಪಿಯ ಶೇ. 25 ರಷ್ಟು ಮತ್ತು ಜಾಗತಿಕ ವ್ಯಾಪಾರದ ಮೂರನೇ ಒಂದು ಭಾಗವನ್ನು ಪ್ರತಿನಿಧಿಸುತ್ತದೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಗ್ರಾಹಕರಿಗೆ ಸಿಗುವ ಲಾಭಗಳೇನು?
ಈ ಒಪ್ಪಂದದ ಅನ್ವಯ ಯುರೋಪಿನಿಂದ ಆಮದು ಮಾಡಿಕೊಳ್ಳುವ ಹಲವಾರು ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ.
ಕಾರುಗಳು ಮತ್ತು ವಾಹನಗಳು: ಪ್ರಸ್ತುತ ಶೇ. 110 ರಷ್ಟಿರುವ ಕಾರುಗಳ ಮೇಲಿನ ಆಮದು ಸುಂಕವನ್ನು ಹಂತ ಹಂತವಾಗಿ ಶೇ. 10 ಕ್ಕೆ ಇಳಿಸಲಾಗುತ್ತದೆ. ಇದರಿಂದ ಐಷಾರಾಮಿ ವಿದೇಶಿ ಕಾರುಗಳ ಬೆಲೆ ಗಣನೀಯವಾಗಿ ತಗ್ಗಲಿದೆ.
ವೈನ್ ಮತ್ತು ಪಾನೀಯಗಳು: ವೈನ್ ಮೇಲಿನ ಸುಂಕ ಶೇ. 150 ರಿಂದ ಶೇ. 20 ಕ್ಕೆ ಇಳಿಯಲಿದೆ. ಹಣ್ಣಿನ ರಸಗಳು ಮತ್ತು ಆಲ್ಕೋಹಾಲ್ ರಹಿತ ಬಿಯರ್ ಮೇಲಿನ ಸುಂಕ ಶೂನ್ಯವಾಗಲಿದೆ.
ಆಹಾರ ಪದಾರ್ಥಗಳು: ಪಾಸ್ತಾ, ಬಿಸ್ಕತ್ತು, ಚಾಕೊಲೇಟ್ ಮತ್ತು ಬ್ರೆಡ್ ಮೇಲಿನ ಶೇ. 50 ರಷ್ಟು ಸುಂಕವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಆಲಿವ್ ಆಯಿಲ್ ಮತ್ತು ಇತರ ಸಸ್ಯಜನ್ಯ ಎಣ್ಣೆಗಳ ಮೇಲಿನ ಸುಂಕವೂ ರದ್ದಾಗಲಿದೆ.
ಯಂತ್ರೋಪಕರಣಗಳು: ಕೈಗಾರಿಕಾ ಯಂತ್ರಗಳು, ಎಲೆಕ್ಟ್ರಿಕಲ್ ಉಪಕರಣಗಳು, ಔಷಧೀಯ ಉತ್ಪನ್ನಗಳು ಮತ್ತು ವೈದ್ಯಕೀಯ ಉಪಕರಣಗಳ ಬೆಲೆ ಇಳಿಕೆಯಾಗಲಿದೆ.
ಭಾರತಕ್ಕೆ ಸಿಗುವ ಪ್ರಯೋಜನಗಳೇನು?
ರಫ್ತು ಉತ್ತೇಜನ: ಭಾರತದ ಜವಳಿ (Textiles), ರತ್ನ ಮತ್ತು ಆಭರಣ, ಚರ್ಮದ ಉತ್ಪನ್ನಗಳ ರಫ್ತಿಗೆ ದೊಡ್ಡ ಮಾರುಕಟ್ಟೆ ಸಿಗಲಿದೆ.
ಸೇವಾ ವಲಯ: ಭಾರತೀಯ ಐಟಿ (IT) ಕಂಪನಿಗಳು ಮತ್ತು ವೃತ್ತಿಪರರಿಗೆ ಯುರೋಪಿಯನ್ ಮಾರುಕಟ್ಟೆಯಲ್ಲಿ ಸುಲಭ ಪ್ರವೇಶ ಸಿಗಲಿದ್ದು, ಉದ್ಯೋಗಾವಕಾಶಗಳು ಹೆಚ್ಚಲಿವೆ.
ಕಡಿಮೆ ಉತ್ಪಾದನಾ ವೆಚ್ಚ: ಯುರೋಪಿನಿಂದ ಅಗ್ಗದ ದರದಲ್ಲಿ ಸಿಗುವ ಯಂತ್ರೋಪಕರಣಗಳು ಮತ್ತು ಕೆಮಿಕಲ್‌ಗಳಿಂದಾಗಿ ಭಾರತೀಯ ಕಂಪನಿಗಳ ಉತ್ಪಾದನಾ ವೆಚ್ಚ ಕಡಿಮೆಯಾಗಲಿದೆ.
ಗಮನಾರ್ಹ ಅಂಶ: ಭಾರತದ ರೈತರ ಹಿತದೃಷ್ಟಿಯಿಂದ ಕೃಷಿ ಮತ್ತು ಡೈರಿ (ಹೈನುಗಾರಿಕೆ) ವಲಯವನ್ನು ಈ ಒಪ್ಪಂದದಿಂದ ಹೊರಗಿಡಲಾಗಿದ್ದು, ಸ್ಥಳೀಯ ಮಾರುಕಟ್ಟೆಗೆ ರಕ್ಷಣೆ ನೀಡಲಾಗಿದೆ.
ಮುಂದಿನ ಹಂತವೇನು?
ಈ ಒಪ್ಪಂದದ ಕಾನೂನು ಪ್ರಕ್ರಿಯೆಗಳು ಮುಕ್ತಾಯಗೊಳ್ಳಲು ಸುಮಾರು 6 ತಿಂಗಳು ಬೇಕಾಗಬಹುದು. ನಂತರ ಯುರೋಪಿಯನ್ ಪಾರ್ಲಿಮೆಂಟ್‌ನಲ್ಲಿ ಇದು ಅನುಮೋದನೆಗೊಳ್ಳಬೇಕಿದೆ. “ನಾವು 200 ಕೋಟಿ ಜನರ ಮುಕ್ತ ವ್ಯಾಪಾರ ವಲಯವನ್ನು ನಿರ್ಮಿಸಿದ್ದೇವೆ,” ಎಂದು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement