ಜೈಲಿನಲ್ಲಿರುವ ಹಿಂದೂ ಸನ್ಯಾಸಿ ಚಿನ್ಮಯ ಕೃಷ್ಣ ದಾಸರಿಗೆ ಜಾಮೀನು ನಿರಾಕರಿಸಿದ ಬಾಂಗ್ಲಾದೇಶ ಕೋರ್ಟ್‌

ಢಾಕಾ: ಕಳೆದ ವರ್ಷದ ನವೆಂಬರ್ 25ರಂದು ಬಾಂಗ್ಲಾದೇಶದಲ್ಲಿದ್ದ ಬಂಧಿಸಲ್ಪಟ್ಟಿದ್ದ ಮಾಜಿ ಇಸ್ಕಾನ್ ಸನ್ಯಾಸಿ ಚಿನ್ಮಯ ಕೃಷ್ಣ ದಾಸ್ ಅವರಿಗೆ ಬಾಂಗ್ಲಾದೇಶದ ನ್ಯಾಯಾಲಯವು ಗುರುವಾರ ಜಾಮೀನನ್ನು ತಿರಸ್ಕರಿಸಿದೆ.
ಢಾಕಾದಿಂದ ಚಟ್ಟೋಗ್ರಾಮ್‌ಗೆ ತೆರಳಿದ್ದ ಸುಪ್ರೀಂ ಕೋರ್ಟ್‌ನ 11 ವಕೀಲರ ತಂಡವು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶ ಎಂ.ಡಿ. ಸೈಫುಲ್ ಇಸ್ಲಾಂ ಸುಮಾರು 30 ನಿಮಿಷಗಳ ಕಾಲ ವಾದ-ಪ್ರತಿವಾದಗಳನ್ನು ಆಲಿಸಿದ ನಂತರ ತಿರಸ್ಕರಿಸಿದ್ದಾರೆ ಎಂದು ಢಾಕಾ ಮೂಲದ ದಿ ಡೈಲಿ ಸ್ಟಾರ್ ವರದಿ ಮಾಡಿದೆ. ಈ ಬೆಳವಣಿಗೆಯ ನಂತರ, ಚಿನ್ಮಯ ಕೃಷ್ಣ ದಾಸ ಅವರು ಈಗ ಹೈಕೋರ್ಟ್ ಅನ್ನು ಸಂಪರ್ಕಿಸಲು ಯೋಜಿಸಿದ್ದಾರೆ ಎಂದು ವರದಿಯಾಗಿದೆ.

ಕೋಲ್ಕತ್ತಾ ಇಸ್ಕಾನ್ ಉಪಾಧ್ಯಕ್ಷ ರಾಧಾ ರಮಣ ದಾಸ್ ಅವರು, “ಇದು ತುಂಬಾ ದುಃಖದ ಸುದ್ದಿ. ಇಡೀ ಜಗತ್ತು ಇದರ ಮೇಲೆ ಕಣ್ಣಿಟ್ಟಿತ್ತು ಎಂದು ನಮಗೆ ತಿಳಿದಿದೆ. ಹೊಸ ವರ್ಷದಲ್ಲಿ ಚಿನ್ಮಯ ದಾಸ್‌ ಅವರು ಬಿಡುಗಡೆಯಾಗುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ 42 ದಿನಗಳ ನಂತರವೂ ವಿಚಾರಣೆಯಲ್ಲಿ ಅವರ ಜಾಮೀನು ತಿರಸ್ಕರಿಸಲಾಗಿದೆ. ಬಾಂಗ್ಲಾದೇಶ ಸರ್ಕಾರ ಅವರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಬಾಂಗ್ಲಾದೇಶದ ರಾಷ್ಟ್ರಧ್ವಜವನ್ನು ಅಗೌರವಿಸಿದ ಆರೋಪದ ಮೇಲೆ ದಾಖಲಾಗಿರುವ ದೇಶದ್ರೋಹದ ಪ್ರಕರಣದಲ್ಲಿ ವಕೀಲ ಅಪುರ್ಬಾಕುಮಾರ ಭಟ್ಟಾಚಾರ್ಜಿ ನೇತೃತ್ವದ ಕಾನೂನು ತಂಡವು ಚಿನ್ಮಯ ಕೃಷ್ಣ ದಾಸ ಅವರ ಪರವಾಗಿ ವಾದಿಸಿದೆ ಎಂದು ವರದಿಯಾಗಿದೆ.

ಇದಕ್ಕೂ ಮೊದಲು ಡಿಸೆಂಬರ್ 3, 2024 ರಂದು, ಪ್ರಾಸಿಕ್ಯೂಷನ್ ಸಮಯಾವಕಾಶ ಕೋರಿ ಅರ್ಜಿಯನ್ನು ಸಲ್ಲಿಸಿದ ಕಾರಣ ಮತ್ತು ಚಿನ್ಮಯ ಅವರನ್ನು ಪ್ರತಿನಿಧಿಸಲು ವಕೀಲರು ಇಲ್ಲದ ಕಾರಣ ಬಾಂಗ್ಲಾದೇಶದ ಚಿತ್ತಗಾಂಗ್‌ನ ನ್ಯಾಯಾಲಯವು ಜನವರಿ 2 ರಂದು ಜಾಮೀನು ವಿಚಾರಣೆಗೆ ನಿಗದಿಪಡಿಸಿತ್ತು.
ಇಸ್ಲಾಮಿಸ್ಟ್‌ಗಳು ‘ಸಾರ್ವಜನಿಕವಾಗಿ ಥಳಿಸುವ’ ಬೆದರಿಕೆ ಹಾಕಿದ್ದರಿಂದ ಚಟ್ಟೋಗ್ರಾಮ ನ್ಯಾಯಾಲಯದಲ್ಲಿ ಚಿನ್ಮಯ ದಾಸ್‌ ಅವರನ್ನು ಪ್ರತಿನಿಧಿಸಲು ಯಾವುದೇ ವಕೀಲರು ಮುಂದಾಗಿರಲಿಲ್ಲ, ಒಂದು ತಿಂಗಳ ನಂತರ ಗುರುವಾರ ವಿಚಾರಣೆಯನ್ನು ಬಿಗಿ ಭದ್ರತೆಯಲ್ಲಿ ನಡೆಸಲಾಯಿತು.

ಚಿನ್ಮಯ ಕೃಷ್ಣ ದಾಸ್ ಅವರ ಹಿಂದಿನ ವಕೀಲ ರವೀಂದ್ರನಾಥ್ ಘೋಷ್ ಅವರು ಡಿಸೆಂಬರ್‌ನಲ್ಲಿ ಅವರಿಗೆ ಕಾನೂನು ನೆರವು ನೀಡಲು ಪ್ರಯತ್ನಿಸಿದರು, ಹಠಾತ್ ಎದೆ ನೋವು ಅನುಭವಿಸಿದ ನಂತರ ಕೋಲ್ಕತ್ತಾದ ಸೇಠ್ ಸುಖಲಾಲ್ ಕರ್ನಾನಿ ಸ್ಮಾರಕ (SSKM) ಆಸ್ಪತ್ರೆಗೆ ದಾಖಲಿಸಲಾಯಿತು. ಡಿಸೆಂಬರ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಹೋದಾಗ ಅವರಿಗೆ ನ್ಯಾಯಾಲಯದ ಹೊರಗೆ ಕಿರುಕುಳ ನೀಡಲಾಯಿತು ಮತ್ತು ಹಲ್ಲೆ ನಡೆಸಲಾಯಿತು ಎಂದು 75 ವರ್ಷದ ಹಿರಿಯ ವಕೀಲ ಘೋಷ್ ಹೇಳಿದ್ದಾರೆ. ವಿಚಾರಣೆ ವೇಳೆ ನೂರಾರು ವಕೀಲರು ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿ ಗೊಂದಲ ಸೃಷ್ಟಿಸಿದರು.
ಸುಪ್ರಿಂ ಕೋರ್ಟ್ ವಕೀಲರೂ ಆಗಿರುವ ಘೋಷ್ ಅವರು ಚಿನ್ಮಯ ಅವರನ್ನು ಬಂಧಿಸಿದ ಒಂದು ವಾರದ ನಂತರ ಅವರಿಗೆ ಕಾನೂನು ನೆರವು ನೀಡಲು ಪ್ರಯತ್ನಿಸಿದರು.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ವ್ಯಾಪಕ ದಾಳಿಗೆ ಕಾರಣವಾದ ಶೇಖ್ ಹಸೀನಾ ಅವರ ಆಡಳಿತದ ಪತನದ ನಂತರ ಚಿನ್ಮಯ ದಾಸ್‌ ಅವರು ಅಲ್ಪಸಂಖ್ಯಾತರಿಗೆ, ವಿಶೇಷವಾಗಿ ಹಿಂದೂಗಳ ಪ್ರಮುಖ ಧ್ವನಿಯಾಗಿ ಹೊರಹೊಮ್ಮಿದರು. ದಾಸ್ ಅವರನ್ನು ಢಾಕಾ ಪೊಲೀಸ್ ಡಿಟೆಕ್ಟಿವ್ ಬ್ರಾಂಚ್ ನವೆಂಬರ್ 25 ರಂದು ದೇಶದ್ರೋಹದ ಆರೋಪದಡಿ ಬಂಧಿಸಿತ್ತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement