ಶಿರಸಿ : ಮಂಗನ ಕಾಯಿಲೆ ಸೋಂಕು ಉತ್ತರ ಕನ್ನಡದಲ್ಲಿಯೂ ಈಗ ಪತ್ತೆಯಾಗಿದ್ದು, ಜಿಲ್ಲೆಯ ಶಿರಸಿ ತಾಲೂಕಿನ 51 ವರ್ಷದ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.
ಈ ವರ್ಷದಲ್ಲಿ ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕರೆಯಲ್ಪಡುವ ಕ್ಯಾಸನೂರು ಫಾರೆಸ್ಟ್ ಡಿಸೀಸ್ (KFD) ಸೋಂಕಿನ ಮೊದಲ ಪ್ರಕರಣವಾಗಿದೆ. 15 ದಿನಗಳ ಹಿಂದೆ ಈ ವ್ಯಕ್ತಿ ಶಿರಸಿ ತಾಲೂಕಿನ ರೇವಣಕಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜ್ವರದ ಔಷಧ ಪಡೆಯಲು ಬಂದಿದ್ದರು.
ಆಗ ಮಂಗನ ಕಾಯಿಲೆ ಲಕ್ಷಣದ ಅನುಮಾನದಿಂದ ಆರೋಗ್ಯ ಕೇಂದ್ರದವರು ಆ ವ್ಯಕ್ತಿಯ ರಕ್ತದ ಸ್ಯಾಂಪಲ್ ಪಡೆದು ಪರೀಕ್ಷೆಗೆಂದು ಶಿವಮೊಗ್ಗದ ಸಂಶೋಧನಾ ಕೇಂದ್ರಕ್ಕೆ ಕಳುಹಿಸಿದ್ದರು. ಅಲ್ಲಿಂದ ಬಂದ ವರದಿಯಲ್ಲಿ ಈ ವ್ಯಕ್ತಿಗೆ ಮಂಗನ ಕಾಯಿಲೆ ಸೋಂಕು ಇರುವುದು ದೃಢಪಟ್ಟಿದೆ. ನಂತರ ಅವರನ್ನು ಶಿರಸಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ರೇವಣಕಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರ ಮೂಲಕ ಮಂಗನ ಕಾಯಿಲೆ ಬಗ್ಗೆ ಆರೋಗ್ಯ ಜಾಗೃತಿ ಕೈಗೊಳ್ಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ