ಮಾಲಿನ್ಯ ನಿಯಂತ್ರಣ ಚರ್ಚೆ ವೇಳೆ ದೆಹಲಿ ಮಹಾನಗರ ಪಾಲಿಕೆಯಲ್ಲಿ ಗದ್ದಲ: ಮೈಕ್‌ ಧ್ವಂಸ, ಕಡತಗಳ ಎಸೆತ !

ನವದೆಹಲಿ: ದೆಹಲಿಯ ವಾಯುಮಾಲಿನ್ಯವನ್ನು ನಿಯಂತ್ರಿಸುವ ಕುರಿತು ಚರ್ಚೆ ನಡೆಸಬೇಕಿದ್ದ ದೆಹಲಿ ಮಹಾನಗರ ಪಾಲಿಕೆಯ (ಎಂಸಿಡಿ) ಸಭೆಯಲ್ಲಿ ಗುರುವಾರ ಭಾರಿ ಗದ್ದಲ, ತಳ್ಳಾಟ-ನೂಕಾಟ ಹಾಗೂ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡಿದ ಘಟನೆ ನಡೆದಿದೆ.
ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಆಮ್ ಆದ್ಮಿ ಪಕ್ಷದ (ಎಎಪಿ) ಸದಸ್ಯರು ಪರಸ್ಪರ ಘೋಷಣೆಗಳನ್ನು ಕೂಗುತ್ತಾ ನೀರಿನ ಬಾಟಲಿಗಳು ಮತ್ತು ಕಡತಗಳನ್ನು ಎಸೆದಿದ್ದಾರೆ. ಕಾಂಗ್ರೆಸ್ ಸದಸ್ಯರೂ ಈ ಗದ್ದಲದಲ್ಲಿ ಪಾಲ್ಗೊಂಡಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಮಾರ್ಷಲ್‌ಗಳು ಮಧ್ಯಪ್ರವೇಶಿಸಿ ಮೇಯರ್ ಪ್ರವೇಶ ವಹಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಸಭೆಯಲ್ಲಿ ಗದ್ದಲ ಆರಂಭವಾಗಿದ್ದು, ತಮ್ಮ ತಮ್ಮ ವಾರ್ಡ್‌ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿಟ್ಟಿರುವ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಎಎಪಿ ಸದಸ್ಯರು ಆಗ್ರಹಿಸಿದಾಗ. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಪ್ರವೇಶ ವಹಿ, ವಾರ್ಡ್‌ಗಳ ಅಭಿವೃದ್ಧಿಗಾಗಿ ತಲಾ 25 ಲಕ್ಷ ರೂ. ಬಿಡುಗಡೆ ಮಾಡುವುದಾಗಿ ಪ್ರಕಟಿಸಿದರು. ಅಲ್ಲದೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಪಾಲಿಕೆಯ ಸದಸ್ಯರಿಗೆ ಒಟ್ಟು 2 ಕೋಟಿ ರೂ. ಅನುದಾನ ಲಭ್ಯವಾಗುವಂತೆ ಮಾಡಲಾಗುವುದು ಎಂದರು.
ಆದರೆ, ಮೇಯರ್ ಅವರ ಈ ಘೋಷಣೆಯಿಂದ ಪ್ರತಿಪಕ್ಷ ಸದಸ್ಯರು ಸಮಾಧಾನಗೊಳ್ಳಲಿಲ್ಲ. ತಕ್ಷಣವೇ ನೀಡುವ ಅನುದಾನದ ಮೊತ್ತವನ್ನು 1 ಕೋಟಿ ರೂ.ಗಳಿಗೆ ಹೆಚ್ಚಿಸಬೇಕೆಂದು ಎಎಪಿ ಸದಸ್ಯರು ಪಟ್ಟು ಹಿಡಿದರು. ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ಸದಸ್ಯರು ಜೋರಾಗಿ ಘೋಷಣೆಗಳನ್ನು ಕೂಗತೊಡಗಿದರು. ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡು, ಎಎಪಿ ಸದಸ್ಯರು ಮೇಯರ್ ಆಸನದತ್ತ ಮುನ್ನಡೆದರು. ಇದರಿಂದಾಗಿ ಸಭೆಯನ್ನು ಐದು ನಿಮಿಷಗಳ ಕಾಲ ಮುಂದೂಡಬೇಕಾಯಿತು.

ಪ್ರಮುಖ ಸುದ್ದಿ :-   ದಸರಾ ಆಯುಧ ಪೂಜೆ ವೇಳೆ ಸೀರೆ ಉಟ್ಟು ಎಕೆ-47ನಿಂದ ಗುಂಡು ಹಾರಿಸಿದ ಮಹಿಳಾ ಐಪಿಎಸ್ ಅಧಿಕಾರಿ; ವಿಡಿಯೋ ವೈರಲ್‌

ಐದು ನಿಮಿಷಗಳ ಬಳಿಕ ಸಭೆ ಪುನರಾರಂಭಗೊಂಡಾಗ, ದೆಹಲಿಯಲ್ಲಿ ಹದಗೆಡುತ್ತಿರುವ ವಾಯುಮಾಲಿನ್ಯದ ಸಮಸ್ಯೆಯ ಕುರಿತು ಚರ್ಚೆ ನಡೆಯಿತು. ಈ ಬಿಕ್ಕಟ್ಟನ್ನು ನಿಯಂತ್ರಿಸಲು ಮಹಾನಗರ ಪಾಲಿಕೆ ಮತ್ತು ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂದು ಪ್ರತಿಪಕ್ಷದ ಸದಸ್ಯರು ಪ್ರಶ್ನಿಸಿದರು. ಆದರೆ, ಮಾಲಿನ್ಯ ನಿಯಂತ್ರಣದ ಕುರಿತ ಚರ್ಚೆ ಕೆಲವೇ ಕ್ಷಣಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ತೀವ್ರ ವಾಗ್ವಾದಕ್ಕೆ ತಿರುಗಿತು. ಬಿಜೆಪಿ ಮತ್ತು ಎಎಪಿ ಸದಸ್ಯರು ಪರಸ್ಪರ ಹೊಡೆದಾಡುವ ಹಂತದವರೆಗೂ ಪರಿಸ್ಥಿತಿ ತಲುಪಿತು.
ಈ ವೇಳೆ ಎಎಪಿ ಸದಸ್ಯೆ ಶಗುಫ್ತಾ ಜುಬೈರ್ ಅವರು ಮೇಯರ್ ಆಸನದ ಬಳಿಗೆ ತೆರಳಿ, ಅಲ್ಲಿ ಅಳವಡಿಸಲಾಗಿದ್ದ ಮೈಕ್ರೊಫೋನ್‌ ಅನ್ನು ಮುರಿಯಲು ಯತ್ನಿಸಿದ್ದಾರೆ ಎಂದು ವಿಡಿಯೊಗಳು ತೋರಿಸಿವೆ. ಪ್ರತಿಪಕ್ಷದ ನಾಯಕ ಅಂಕುಶ ನಾರಂಗ್ ಅವರೂ ಮೈಕ್ರೊಫೋನ್‌ಗೆ ಹಾನಿ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯಿಂದ ಸಭಾಂಗಣದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಯಿತು.
ಸದಸ್ಯರ ನಡುವಿನ ವಾಗ್ವಾದ ತಾರಕಕ್ಕೇರಿದಂತೆ ಪರಸ್ಪರ ನೀರು ಮತ್ತು ಕಡತಗಳನ್ನು ಎಸೆಯಲಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮಾರ್ಷಲ್‌ಗಳು ಮಧ್ಯಪ್ರವೇಶಿಸಿ, ಮೇಯರ್ ಪ್ರವೇಶ್ ವಹಿ ಅವರನ್ನು ಸಭಾಂಗಣದಿಂದ ಸುರಕ್ಷಿತವಾಗಿ ಕರೆದೊಯ್ದರು.

ಕಾಂಗ್ರೆಸ್ ನಾಯಕಿಯ ಹೇಳಿಕೆಯಿಂದ ಮತ್ತಷ್ಟು ಹೆಚ್ಚಿದ ಗದ್ದಲ
ಸಭೆಯಲ್ಲಿನ ಗೊಂದಲಕ್ಕೆ ಕಾಂಗ್ರೆಸ್ ನಾಯಕಿ ನಾಜಿಯಾ ಡ್ಯಾನಿಶ್ ಮತ್ತು ಎಎಪಿಯ ಅಂಕುಶ್ ನಾರಂಗ್ ನಡುವಿನ ತೀಕ್ಷ್ಣ ಮಾತಿನ ಚಕಮಕಿಯೂ ಮತ್ತಷ್ಟು ಕಿಡಿ ಹೊತ್ತಿಸಿತು.
ನಾಜಿಯಾ ಡ್ಯಾನಿಶ್ ಅವರು ಸಭೆಯಲ್ಲಿ ಮಾತನಾಡುವಾಗ ಎಎಪಿಯನ್ನು ಟೀಕಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಂಕುಶ್ ನಾರಂಗ್, ಅವರು ಬಿಜೆಪಿಗೆ ಹತ್ತಿರವಾಗಿದ್ದಾರೆ ಎಂದು ಆರೋಪಿಸಿದರು. ಇದರಿಂದ ಕೆರಳಿದ ನಾಜಿಯಾ ಡ್ಯಾನಿಶ್ ತಿರುಗೇಟು ನೀಡುತ್ತಾ, ಮುಂದೆ ಬಿಜೆಪಿಗೆ ಸೇರ್ಪಡೆಯಾಗಲಿದ್ದ ಶಗುಫ್ತಾ ಚೌಧರಿ ಅವರಂತೆ ತಾನಿಲ್ಲ ಎಂದು ಹೇಳಿದರು.
ಈ ಹೇಳಿಕೆ ಸಭಾಂಗಣದಲ್ಲಿ ಮತ್ತೊಂದು ಸುತ್ತಿನ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಈಗಾಗಲೇ ಉದ್ವಿಗ್ನಗೊಂಡಿದ್ದ ವಾತಾವರಣ ಮತ್ತಷ್ಟು ಹದಗೆಟ್ಟಿತು.
ಸಭೆಯಲ್ಲಿ ನಡೆದ ಗದ್ದಲ ಮತ್ತು ಸದಸ್ಯರ ವರ್ತನೆಯ ಪ್ರಕರಣವನ್ನು ಇದೀಗ ಮಹಾನಗರ ಪಾಲಿಕೆಯ ಶಿಸ್ತು ಸಮಿತಿಗೆ ಒಪ್ಪಿಸಲಾಗಿದೆ. ಗದ್ದಲದಲ್ಲಿ ಭಾಗಿಯಾದ ಸದಸ್ಯರ ನಡೆನುಡಿಗಳನ್ನು ಸಮಿತಿ ಪರಿಶೀಲಿಸಿ, ಮುಂದಿನ ಕ್ರಮದ ಕುರಿತು ನಿರ್ಧಾರ ಕೈಗೊಳ್ಳಲಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮೇಯರ್ ಪ್ರವೇಶ್ ವಹಿ, “ಸದಸ್ಯರನ್ನು ಅಮಾನತುಗೊಳಿಸುವಂತೆ ಸಮಿತಿ ಶಿಫಾರಸು ಮಾಡಿದರೆ, ಆ ಕ್ರಮವನ್ನೂ ಜಾರಿಗೊಳಿಸುತ್ತೇವೆ” ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ತ್ರಿಪುರ ಯುವಕನಿಗೆ ಜನಾಂಗೀಯ ನಿಂದನೆ ಮಾಡಿದ ಆರೋಪ: ಕಂಟೆಂಟ್ ಕ್ರಿಯೇಟರ್ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement