ಅಮರಾವತಿ: ಆಂಧ್ರಪ್ರದೇಶದ ಅಣ್ಣಮಯ್ಯ ಜಿಲ್ಲೆಯ ಪುಂಗನೂರು ಪಟ್ಟಣದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಘಟನೆಯೊಂದರಲ್ಲಿ, ಮನೆಯೊಳಗೆ ನಿಲ್ಲಿಸಿದ್ದ ಬೈಕ್ನಿಂದ ಹೊರಬಂದ ಹೊಗೆಯನ್ನು ಸೇವಿಸಿ ಒಂದೇ ಕುಟುಂಬದ ನಾಲ್ವರು ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಸ್ಥಳೀಯವಾಗಿ ಹೇರ್ ಸಲೂನ್ ನಡೆಸುತ್ತಿರುವ ಮುರಳಿ ಎಂಬವರು ತಮ್ಮ ಬೈಕ್ ಅನ್ನು ಶನಿವಾರ ಸರ್ವಿಸ್ ಮಾಡಿಸಿದ್ದರು. ಎಂಜಿನ್ ಸಮಸ್ಯೆಯಿದ್ದ ಕಾರಣ ಮೆಕಾನಿಕ್ ಬೋರ್ ಪಿಸ್ಟನ್ ಬದಲಾಯಿಸಿ, ರಾತ್ರಿಯಿಡೀ ಎಂಜಿನ್ ಚಾಲನೆಯಲ್ಲಿಡುವಂತೆ (On ಇಡುವಂತೆ) ಸಲಹೆ ನೀಡಿದ್ದ ಎನ್ನಲಾಗಿದೆ.
ಮುರಳಿ ಅವರು ಮನೆಯ ಎಲ್ಲಾ ಕಿಟಕಿ-ಬಾಗಿಲುಗಳನ್ನು ಮುಚ್ಚಿ, ಮನೆಯೊಳಗೆ ಬೈಕ್ ಅನ್ನು ಸ್ಟಾರ್ಟ್ ಮಾಡಿ ಇಟ್ಟಿದ್ದರು. ಮುರಳಿ ಮತ್ತು ಅವರ ಪತ್ನಿ ರೇವತಿ ಮನೆಯ ಟೆರೇಸ್ ಮೇಲೆ ಮಲಗಿದ್ದರು. ಆದರೆ ಮನೆಯೊಳಗೆ ಮುರಳಿಯ ತಂದೆ ರಾಮಚಂದ್ರಯ್ಯ (70), ಪುತ್ರ ಕಾರ್ತಿಕ್ (15) ಹಾಗೂ ಎಂಟು ವರ್ಷದ ಅವಳಿ ಹೆಣ್ಣುಮಕ್ಕಳಾದ ಚರಿತಾ ಮತ್ತು ಚಂದನಾ ಮಲಗಿದ್ದರು.
ಬಾಗಿಲು-ಕಿಟಕಿಗಳು ಮುಚ್ಚಿದ್ದರಿಂದ ಬೈಕ್ನಿಂದ ಹೊರಬಂದ ಕಾರ್ಬನ್ ಮಾನಾಕ್ಸೈಡ್ ಅನಿಲ ಇಡೀ ಮನೆಯನ್ನು ಆವರಿಸಿದೆ. ವರದಿಯ ಪ್ರಕಾರ, ಗಾಢ ನಿದ್ರೆಯಲ್ಲಿದ್ದ ನಾಲ್ವರೂ ವಿಷಗಾಳಿಯನ್ನು ಸೇವಿಸಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಟೆರೇಸ್ ಮೇಲೆ ಮಲಗಿದ್ದರಿಂದ ಮುರಳಿ ಹಾಗೂ ಪತ್ನಿ ಪಾರಾಗಿದ್ದಾರೆ. ಭಾನುವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಘಟನೆ ಇಡೀ ಪಟ್ಟಣವನ್ನು ದಿಗ್ಭ್ರಮೆಗೊಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ