ಕೇರಳ ಸಿಎಂ ಗಾದಿಗೆ ‘ಕೈ’ ಕಚ್ಚಾಟ: ವೇಣುಗೋಪಾಲ vs ಸತೀಶನ್ ನಡುವೆ ಹಗ್ಗಜಗ್ಗಾಟ ; ಹೈಕಮಾಂಡ್‌ಗೆ ಇಕ್ಕಟ್ಟು

ತಿರುವನಂತಪುರಂ/ದೆಹಲಿ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದಿದ್ದರೂ, ಫಲಿತಾಂಶ ಬಂದು ವಾರ ಕಳೆದರೂ ಮುಖ್ಯಮಂತ್ರಿ ಪಟ್ಟಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಾಧ್ಯವಾಗದೆ ಕಾಂಗ್ರೆಸ್‌ ಹೈಕಮಾಂಡ್ ಒದ್ದಾಡುತ್ತಿದೆ.
ಆಡಳಿತರೂಢ ಎಲ್‌ಡಿಎಫ್‌ ಮಣಿಸಿ 102 ಸ್ಥಾನಗಳನ್ನು ಗೆದ್ದಿರುವ ಯುಡಿಎಫ್‌ (UDF) ಮೈತ್ರಿಕೂಟದಲ್ಲಿ ಈಗ ‘ನಾಯಕತ್ವದ ಸಂಘರ್ಷ’ ಮುನ್ನಲೆಗಷ್ಟೇ ಅಲ್ಲದೆ ಬೀದಿಗೂ ಬಂದಿದೆ.
ಮುಖ್ಯಮಂತ್ರಿ ಸ್ಥಾನಕ್ಕಾಗಿ ಸದ್ಯ ನಾಲ್ವರು ಆಕಾಂಕ್ಷಿಗಳು ರೇಸ್‌ನಲ್ಲಿದ್ದಾರೆ. ಪಕ್ಷದ ಸಂಘಟನಾ ಕಾರ್ಯದರ್ಶಿ ಮತ್ತು ರಾಹುಲ್ ಗಾಂಧಿ ಆಪ್ತ ಕೆ.ಸಿ. ವೇಣುಗೋಪಾಲ, ನಿರ್ಗಮಿತ ವಿಧಾನಸಭೆಯ ವಿಪಕ್ಷದ ನಾಯಕ ವಿ.ಡಿ. ಸತೀಶನ್, ಹಿರಿಯ ನಾಯಕ ಮತ್ತು ಅನುಭವಿ ಸಂಸದೀಯ ಪಟು ರಮೇಶ್ ಚೆನ್ನಿತ್ತಲ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಕೆ. ಸುಧಾಕರನ್ ಅವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಕೇಂದ್ರದ ವೀಕ್ಷಕರಾದ ಅಜಯ ಮಾಕೆನ್ ಮತ್ತು ಮುಕುಲ್ ವಾಸ್ನಿಕ್ ಅವರು ತಿರುವಂತಪುರಂಗೆ ತೆರಳಿ ಪಕ್ಷದ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ವರದಿಯ ಪ್ರಕಾರ ಕೆ.ಸಿ.ವೇಣುಗೋಪಾಲ ಕಾಂಗ್ರೆಸ್‌ನ 63 ಶಾಸಕರ ಪೈಕಿ ಹೆಚ್ಚಿನ ಶಾಸಕರು ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.  ರಾಹುಲ್ ಗಾಂಧಿ ಅವರ ಮೊದಲ ಆಯ್ಕೆಯೂ ಇವರೇ ಎನ್ನಲಾಗಿದೆ.
ಆದರೆ, ವಿ.ಡಿ. ಸತೀಶನ್ ಪರವಾಗಿ ಸಾರ್ವಜನಿಕರು ಮತ್ತು ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ತಳಮಟ್ಟದಲ್ಲಿ ಹೋರಾಟ ನಡೆಸಿ ಪಕ್ಷವನ್ನು ಅಧಿಕಾರಕ್ಕೆ ತಂದ ಸತೀಶನ್ ಅವರಿಗೇ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂಬುದು ಇವರ ಹೆಚ್ಚಿನ ಕಾರ್ಯಕರ್ತರ ವಾದ. ಇದು ಹೈಕಮಾಂಡ್ ಕೆಂಗಣ್ಣಿಗೂ ಗುರಿಯಾಗಿದೆ.
ಐಯುಎಂಎಲ್ (IUML) ಅಭಿಪ್ರಾಯವೇ ನಿರ್ಣಾಯಕ 
140 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 63 ಸ್ಥಾನ ಗೆದ್ದಿದ್ದರೆ, ಮಿತ್ರಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) 22 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ಮೈತ್ರಿಕೂಟದ ಸುಗಮ ನಡೆಗೆ ಐಯುಎಂಎಲ್ ಬೆಂಬಲ ಅತ್ಯಗತ್ಯ.
ಐಯುಎಂಎಲ್ ನಾಯಕರು ಸತೀಶನ್ ಪರ ಒಲವು ತೋರುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ ಮೈತ್ರಿಕೂಟದ ಇತರ ಅಂಗಪಕ್ಷಗಳು ಸಹ ಸತೀಶನ್‌ ಪರ ಒಲವು ತೋರುತ್ತಿದ್ದಾರೆ ಎನ್ನಲಾಗಿದ್ದು, ಪಕ್ಷವನ್ನು ಅಧಿಕಾರಕ್ಕೆ ತರಲು ಅವರ ಹೋರಾಟ ಹಾಗೂ ಪ್ರಯತ್ನ ಕಾರಣ ಎಂಬುದು ಅವರ ಪ್ರತಿಪಾದನೆಯಾಗಿದೆ.
ವೇಣುಗೋಪಾಲ ಹಾದಿಗೆ ಅಡ್ಡಿಯೇನು?
ವೇಣುಗೋಪಾಲ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದರೆ ಎರಡುುಪಚುನಾವಣೆಗಳು ಎದುರಾಗಲಿವೆ. ಅವರು ಪ್ರಸ್ತುತ ಆಲಪ್ಪುಳ ಸಂಸದರಾಗಿದ್ದು, ಅವರು ಮುಖ್ಯಮಂತ್ರಿಯಾದರೆ ಅವರು ಪ್ರತಿನಿಧಿಸುತ್ತಿರುವ ಲೋಕಸಭೆ ಮತ್ತು ಅವರು ಆಯ್ಕೆಯಾಗಬೇಕಿರುವ ವಿಧಾನಸಭೆ ಕ್ಷೇತ್ರಕ್ಕೆ ಎರಡಕ್ಕೂ ಉಪಚುನಾವಣೆ ನಡೆಸಬೇಕಾಗುತ್ತದೆ.
ಮುಂದಿನ ವರ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷ ಅವಧಿ ಮುಗಿಯಲಿದ್ದು, ರಾಹುಲ್ ಗಾಂಧಿ ಅವರು ವೇಣುಗೋಪಾಲ ಅವರಿಗೆ ಪಕ್ಷದಲ್ಲಿ ಇನ್ನೂ ದೊಡ್ಡ ಜವಾಬ್ದಾರಿ ನೀಡುವ ಯೋಚನೆಯಲ್ಲಿದ್ದಾರೆ ಎಂದೂ ಹೇಳಲಾಗುತ್ತಿದೆ.
ಅಂತಿಮ ತೀರ್ಮಾನ ಯಾರದು?
ಸದ್ಯದ ಬಿಕ್ಕಟ್ಟು ಬಗೆಹರಿಸಲು ಸೋನಿಯಾ ಗಾಂಧಿ, ಎ.ಕೆ. ಆಂಟನಿ ಮತ್ತು ಯುಡಿಎಫ್ ಮಿತ್ರಪಕ್ಷಗಳ ನಾಯಕರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಕೇರಳ ಶಾಸಕಾಂಗದ ಅವಧಿ ಮೇ 23ರವರೆಗೂ ಇರುವುದರಿಂದ, ಹೈಕಮಾಂಡ್ ತರಾತುರಿಯಲ್ಲಿ ಯಾವುದೇ ತಪ್ಪು ನಿರ್ಧಾರ ತೆಗೆದುಕೊಳ್ಳಲು ಸಿದ್ಧವಿಲ್ಲ.
ಶಾಸಕರ ಬೆಂಬಲವೋ ಅಥವಾ ಮಿತ್ರಪಕ್ಷಗಳ ಅನಿವಾರ್ಯತೆಯೋ? ಹೈಕಮಾಂಡ್ ಯಾರನ್ನು ಆಯ್ಕೆ ಮಾಡಿದರೂ ಪಕ್ಷದಲ್ಲಿ ಭಿನ್ನಮತ ಎದುರಾಗಬಹುದು. ಕೇರಳದ ಈ ‘ಮೌನ ಕದನ’ ಅಂತಿಮವಾಗಿ ಯಾರಿಗೆ ಒಲಿಯಲಿದೆ ಎಂಬುದು ಈಗಿನ ಕುತೂಹಲ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement