ವಿಡಿಯೋ | ಫ್ಯಾನ್ ರೆಗ್ಯುಲೇಟರ್‌ನಿಂದ ಟ್ಯೂಬ್‌ಲೈಟ್ ಪ್ರಖರತೆ ನಿಯಂತ್ರಣ : ವೈರಲ್ ಆಯ್ತು ದೇಶಿ ‘ತಂತ್ರಜ್ಞಾನ’…!

ಸಾಮಾನ್ಯವಾಗಿ ಮನೆಯಲ್ಲಿ ಫ್ಯಾನ್ ವೇಗವನ್ನು ಹೆಚ್ಚು ಅಥವಾ ಕಡಿಮೆ ಮಾಡಲು ನಾವು ರೆಗ್ಯುಲೇಟರ್ ಬಳಸುತ್ತೇವೆ. ಆದರೆ, ಇಲ್ಲೊಬ್ಬ ಎಲೆಕ್ಟ್ರಿಷಿಯನ್ ಅದೇ ರೆಗ್ಯುಲೇಟರ್ ಬಳಸಿ ಟ್ಯೂಬ್‌ಲೈಟ್‌ನ ಪ್ರಖರತೆಯನ್ನು (Brightness) ನಿಯಂತ್ರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಕುರಿತ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ವೈರಲ್ ಆಗಿರುವ ಈ ಕಿರು ವಿಡಿಯೋದಲ್ಲಿ ಮಹಿಳೆಯೊಬ್ಬರು ಗೋಡೆಯ ಮೇಲಿರುವ ಫ್ಯಾನ್ ರೆಗ್ಯುಲೇಟರ್ ಅನ್ನು ತಿರುಗಿಸುತ್ತಿರುವುದನ್ನು ಕಾಣಬಹುದು. ಅವರು ರೆಗ್ಯುಲೇಟರ್ ಅನ್ನು ತಿರುಗಿಸಿದಂತೆ ಪಕ್ಕದಲ್ಲೇ ಇರುವ ಟ್ಯೂಬ್‌ಲೈಟ್‌ನ ಬೆಳಕು ಮಂದವಾಗುವುದು ಮತ್ತು ಪ್ರಖರವಾಗುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ವಿಚಿತ್ರ ಪ್ರಯೋಗವನ್ನು ಕಂಡು ಅಲ್ಲಿದ್ದವರು ನಗುತ್ತಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಈ ಬುದ್ಧಿವಂತಿಕೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಈ ಪ್ರಯೋಗಕ್ಕೆ ಟೀಕೆಗಳು ಮತ್ತು ತಾಂತ್ರಿಕ ಎಚ್ಚರಿಕೆಗಳೂ ಕೇಳಿಬಂದಿವೆ. ಇದೇನೂ ಹೊಸ ವಿಷಯವಲ್ಲ, ದಶಕಗಳ ಹಿಂದೆಯೇ ಇದನ್ನು ಮಾಡಲಾಗಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಈ ಜುಗಾಡ್‌ನ ಸಾಧಕ-ಬಾಧಕಗಳ ಬಗ್ಗೆ ಕೆಲವರು ತಾಂತ್ರಿಕ ವಿವರಣೆಗಳನ್ನು ನೀಡಿದ್ದಾರೆ. “ನಾನು ಬಾಲ್ಯದಲ್ಲೇ ಇದನ್ನು ನೋಡಿದ್ದೇನೆ. ಆದರೆ ಕಡಿಮೆ ಪವರ್‌ ಸೆಟ್ಟಿಂಗ್‌ನಲ್ಲಿ ಇಟ್ಟಾಗ ರೆಗ್ಯುಲೇಟರ್ ಅತಿಯಾಗಿ ಕಾಯುತ್ತಿತ್ತು (Heat), ಹೀಗಾಗಿ ಇದು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ” ಎಂದು ಬಳಕೆದಾರರೊಬ್ಬರು ಅನುಭವ ಹಂಚಿಕೊಂಡಿದ್ದಾರೆ.

ರೆಗ್ಯುಲೇಟರ್ ವೋಲ್ಟೇಜ್ ಅನ್ನು ನಿಯಂತ್ರಿಸುತ್ತದೆ. ವೋಲ್ಟೇಜ್ ತೀರ ಕಡಿಮೆಯಾದಾಗ ಟ್ಯೂಬ್‌ಲೈಟ್ ಸ್ಥಿರವಾಗಿ ಉರಿಯುವ ಬದಲು ಮಿಟುಕಿಸಲು (Flickering) ಆರಂಭಿಸುತ್ತದೆ ಎಂದು ಇನ್ನೊಬ್ಬರು ತಿಳಿಸಿದ್ದಾರೆ.
ಇದರ ಪರವಾಗಿ ವಾದಿಸಿದ ವ್ಯಕ್ತಿಯೊಬ್ಬರು, “ತಾಂತ್ರಿಕವಾಗಿ ಇದು ಸರಿಯಾಗಿದೆ. ಫ್ಯಾನ್‌ನಂತೆಯೇ ಟ್ಯೂಬ್‌ಲೈಟ್‌ಗಳು ಕೂಡ ‘ಇಂಡಕ್ಟಿವ್ ಲೋಡ್’ ಆಗಿರುತ್ತವೆ. ಹೀಗಾಗಿ ರೆಗ್ಯುಲೇಟರ್ ಇದನ್ನು ನಿಭಾಯಿಸಬಲ್ಲದು. ಮೂಲ ವಿದ್ಯುತ್ ತತ್ವವನ್ನು ಇಲ್ಲಿ ಜಾಣತನದಿಂದ ಬಳಸಲಾಗಿದೆ” ಎಂದು ವಿವರಿಸಿದ್ದಾರೆ. ಒಟ್ಟಿನಲ್ಲಿ, ಕಡಿಮೆ ಖರ್ಚಿನಲ್ಲಿ ಕೆಲಸ ಮುಗಿಸುವ ಭಾರತೀಯರ ಈ ‘ಜುಗಾಡ್‌’ ಕಲೆ ಮತ್ತೊಮ್ಮೆ ಅಂತರ್ಜಾಲದಲ್ಲಿ ದೊಡ್ಡ ಸುದ್ದಿಯಾಗಿದೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement