ನವದೆಹಲಿ : ಭಾರತವು ರಷ್ಯಾದಿಂದ ನಿರಂತರವಾಗಿ ತೈಲ ಖರೀದಿಸುತ್ತಿರುವುದರಿಂದ ಮುಂದಿನ 24 ಗಂಟೆಗಳಲ್ಲಿ ಭಾರತೀಯ ಆಮದುಗಳ ಮೇಲೆ ವಿಧಿಸಲಾಗುವ ಸುಂಕವನ್ನು “ಬಹಳ ಗಣನೀಯವಾಗಿ” ಹೆಚ್ಚಿಸಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಮತ್ತೆ ಬೆದರಿಕೆ ಹಾಕಿದ್ದಾರೆ.
“ಭಾರತವು ಉತ್ತಮ ವ್ಯಾಪಾರ ಪಾಲುದಾರನಲ್ಲ, ಏಕೆಂದರೆ ಅವರು ನಮ್ಮೊಂದಿಗೆ ಬಹಳಷ್ಟು ವ್ಯವಹಾರ ಮಾಡುತ್ತಾರೆ, ಆದರೆ ನಾವು ಅವರೊಂದಿಗೆ ವ್ಯಾಪಾರ ಮಾಡುವುದಿಲ್ಲ. ಆದ್ದರಿಂದ ನಾವು 25 ಪ್ರತಿಶತದಷ್ಟು ಸುಂಕ ವಿಧಿಸಿದ್ದೇವೆ. ಆದರೆ ಮುಂದಿನ 24 ಗಂಟೆಗಳಲ್ಲಿ ನಾನು ಅದನ್ನು ಗಣನೀಯವಾಗಿ ಹೆಚ್ಚಿಸಲಿದ್ದೇನೆ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ಅವರು ರಷ್ಯಾದ ತೈಲವನ್ನು ಖರೀದಿಸುತ್ತಿದ್ದಾರೆ” ಎಂದು ಅವರು ಸಿಎನ್‌ಬಿಸಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಟ್ರಂಪ್ ಭಾರತದ ಮೇಲೆ ಅಮೆರಿಕದ ಸುಂಕವನ್ನು “ಗಣನೀಯವಾಗಿ” ಹೆಚ್ಚಿಸುವುದಾಗಿ ಹೇಳಿದ ಒಂದು ದಿನದ ನಂತರ ಮತ್ತು ಭಾರತವು ರಷ್ಯಾದಿಂದ ತೈಲವನ್ನು ಖರೀದಿಸಿ ಲಾಭಕ್ಕಾಗಿ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದ ನಂತರ ಅವರಿಂದ ಈ ಹೇಳಿಕೆ ಬಂದಿದೆ.
ಭಾರತದಿಂದ ತೀಕ್ಷ್ಣ ಪ್ರತ್ಯುತ್ತರ
ಇದಕ್ಕೂ ಮೊದಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ(MEA)ವು ಸೋಮವಾರ ಟ್ರಂಪ್ ಆರೋಪಕ್ಕೆ ಪ್ರತಿಕ್ರಿಯಿಸಿತ್ತು. ಭಾರತದ ಇಂಧನ ನೀತಿಯು ರಾಷ್ಟ್ರೀಯ ಭದ್ರತೆ ಮತ್ತು ಭಾರತದ ಜನಸಂಖ್ಯೆಗೆ ಕೈಗೆಟುಕುವ ದರದಲ್ಲಿ ಇಂಧನವನ್ನು ನೀಡುವ ಉದ್ದೇಶ ಹೊಂದಿದೆ ಎಂದು ಹೇಳಿದೆ. “ಪಾಶ್ಚಿಮಾತ್ಯ ದೇಶಗಳು ಇಂಧನ ಆಮದುಗಳನ್ನು ಮರುನಿರ್ದೇಶಿಸಿದ ನಂತರವೇ ಭಾರತವು ರಷ್ಯಾದ ಕಚ್ಚಾ ತೈಲವನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲು ಪ್ರಾರಂಭಿಸಿತು” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(MEA) ಹೇಳಿದೆ. “ಆ ಸಮಯದಲ್ಲಿ, ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಸ್ಥಿರಗೊಳಿಸಲು ಅಮೆರಿಕವು ಭಾರತದಿಂದ ಅಂತಹ ಆಮದುಗಳನ್ನು ಸಕ್ರಿಯವಾಗಿ ಪ್ರೋತ್ಸಾಹಿಸಿತು.”
ಪಶ್ಚಿಮ ದೇಶಗಳ “ಬೂಟಾಟಿಕೆ”ಯನ್ನು ಹೈಲೈಟ್ ಮಾಡಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಷ್ಯಾದಿಂದ ಅಮೆರಿಕ ಹಾಗೂ ಯುರೋಪಿಯನ್ ಒಕ್ಕೂಟವು ನಡೆಸುತ್ತಿರುವ ದ್ವಿಪಕ್ಷೀಯ ಬೃಹತ್ ವ್ಯಾಪಾರವನ್ನು ಉಲ್ಲೇಖಿಸಿದೆ, 2024 ರಲ್ಲಿ, ಯುರೋಪಿಯನ್ ಒಕ್ಕೂಟವು (EU) €67.5 ಶತಕೋಟಿ ಸರಕುಗಳ ವ್ಯಾಪಾರ ಮತ್ತು €17.2 ಬಿಲಿಯನ್ ಸರ್ವೀಸ್ ಕ್ಷೇತ್ರದ ವ್ಯವಹಾರವನ್ನು ರಷ್ಯಾದೊಂದಿಗೆ ನಡೆಸಿದೆ ಎಂದು ಹೇಳಿದೆ.
ಅದೇ ವರ್ಷದಲ್ಲಿ ಯುರೋಪಿಯನ್ ಒಕ್ಕೂಟವು ರಷ್ಯಾದಿಂದ ದಾಖಲೆಯ 16.5 ಮಿಲಿಯನ್ ಟನ್ ಎಲ್‌ಎನ್‌ಜಿ (LNG) ಆಮದು ಮಾಡಿಕೊಂಡಿದೆ.
ಅಮೆರಿಕವು ರಷ್ಯಾದಿಂದ ಯುರೇನಿಯಂ ಹೆಕ್ಸಾಫ್ಲೋರೈಡ್, ಪಲ್ಲಾಡಿಯಮ್ ಮತ್ತು ರಸಗೊಬ್ಬರಗಳನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರೆಸಿದೆ. ಈ ಹಿನ್ನೆಲೆಯಲ್ಲಿ, ಭಾರತವನ್ನು ಟಾರ್ಗೆಟ್ ಮಾಡುವುದು ನ್ಯಾಯಸಮ್ಮತವಲ್ಲ ಮತ್ತು ಅಸಮಂಜಸ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
“ಯಾವುದೇ ಪ್ರಮುಖ ಆರ್ಥಿಕತೆಯಂತೆ, ಭಾರತವು ಸಹ ತನ್ನ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಆರ್ಥಿಕ ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ” ಎಂದು ಅದು ಹೇಳಿದೆ.
ಜುಲೈ 31 ರಂದು ಟ್ರಂಪ್ ಅಮೆರಿಕಕ್ಕೆ ಆಮದಾಗುವ ಭಾರತದ ಸರಕುಗಳ ಮೇಲೆ 25% ಸುಂಕವನ್ನು ಘೋಷಿಸಿದಾಗಿನಿಂದ ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರದ ಬಿರುಕು ಉಂಟಾಗಿದೆ. ಮತ್ತು ಅಮೆರಿಕವು ರಷ್ಯಾದಿಂದ ತೈಲವನ್ನು ಖರೀದಿಸಲು ಭಾರತದ ಸರಕುಗಳ ಮೇಲೆ ಅನಿರ್ದಿಷ್ಟ ದಂಡವನ್ನು ವಿಧಿಸುವ ಬೆದರಿಕೆ ಹಾಕಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಈ ವಾರ ನಿಗದಿತ ಭೇಟಿಗಾಗಿ ರಷ್ಯಾಕ್ಕೆ ಪ್ರಯಾಣಿಸುವ ಸಾಧ್ಯತೆಯಿದೆ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ ಮುಂಬರುವ ವಾರಗಳಲ್ಲಿ ಭೇಟಿ ನೀಡುವ ನಿರೀಕ್ಷೆಯಿದೆ.


ನಿಮ್ಮ ಕಾಮೆಂಟ್ ಬರೆಯಿರಿ