ದೇವಸ್ಥಾನದ ಸಭಾಮಂಟಪದ ಮೇಲ್ಛಾವಣಿ ಕುಸಿತ; ನಾಲ್ವರು ಸಾವು, 23 ಮಂದಿಗೆ ಗಾಯ

ಪರ್ಭಾನಿ : ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯ ಪ್ರಸಿದ್ಧ ಯಶವಾಡಿ ದೇವಸ್ಥಾನದಲ್ಲಿ ನಿರ್ಮಾಣ ಹಂತದಲ್ಲಿದ್ದ ಸಭಾಮಂಟಪದ ಮೇಲ್ಛಾವಣಿ ಹಠಾತ್ತನೆ ಕುಸಿದು ಬಿದ್ದು  ನಾಲ್ವರು ಸಾವಿಗೀಡಾಗಿದ್ದು, 23 ಜನರು ಗಾಯಗೊಂಡ ಭೀಕರ ಘಟನೆ ಶನಿವಾರ ಸಂಭವಿಸಿದೆ.
ಛತ್ರಪತಿ ಸಂಭಾಜಿನಗರದಿಂದ ಸುಮಾರು 190 ಕಿ.ಮೀ ದೂರದಲ್ಲಿರುವ ಯಶವಾಡಿ ಗ್ರಾಮದಲ್ಲಿ ಈ ದೇವಸ್ಥಾನವಿದ್ದು, ಘಟನೆ ನಡೆದಾಗ ಸುಮಾರು 27 ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು ಎಂದು ಶಾಸಕ ರಾಜೇಶ ವಿಟೇಕರ್ ತಿಳಿಸಿದ್ದಾರೆ.
“ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಎಲ್ಲರನ್ನೂ ಯಶಸ್ವಿಯಾಗಿ ಹೊರತೆಗೆಯಲಾಗಿದೆ. ದುರದೃಷ್ಟವಶಾತ್ ನಾಲ್ವರು ಮೃತಪಟ್ಟಿದ್ದು, ಗಾಯಗೊಂಡವರಲ್ಲಿ ಮೂವರು ಜಿಲ್ಲಾ ಸಾರ್ವತ್ರಿಕ ಆಸ್ಪತ್ರೆಯಲ್ಲಿ ಹಾಗೂ ಉಳಿದ 20 ಜನರು ಆರ್‌ಪಿ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ವಿಟೇಕರ್ ಮಾಹಿತಿ ನೀಡಿದ್ದಾರೆ.
ರಾಜಸ್ಥಾನದ ಕಲ್ಲು, ಹೊರರಾಜ್ಯದ ಕಾರ್ಮಿಕರು:
“ದೇವಸ್ಥಾನದ ಜಿರ್ಣೋದ್ಧಾರ ಕಾರ್ಯಕ್ಕಾಗಿ ರಾಜಸ್ಥಾನದಿಂದ ವಿಶೇಷ ಕಲ್ಲುಗಳನ್ನು ತರಿಸಲಾಗಿತ್ತು ಮತ್ತು ಹೊರರಾಜ್ಯದ ಕುಶಲಕರ್ಮಿಗಳು ಈ ಕೆಲಸದಲ್ಲಿ ತೊಡಗಿದ್ದರು. ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿತ್ತು. ಆದರೆ, ಗರ್ಭಗುಡಿಯ ಮುಂಭಾಗದ ಪಿಲ್ಲರ್ (ಕಂಬ) ಅಳವಡಿಸುವಾಗ ಆದ ತಾಂತ್ರಿಕ ಲೋಪದಿಂದಾಗಿ ಸಭಾಮಂಟಪದ ಮೇಲ್ಛಾವಣಿ ಏಕಾಏಕಿ ಕುಸಿದಿದೆ ಎಂದು ದೇವಸ್ಥಾನದ ಟ್ರಸ್ಟಿಗಳು ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಘಟನೆಗೆ ನಿಖರ ಕಾರಣ ಏನೆಂಬುದು ತನಿಖೆಯಿಂದ ತಿಳಿಯಬೇಕಿದೆ” ಎಂದು ಶಾಸಕರು ತಿಳಿಸಿದ್ದಾರೆ.
https://x.com/itsurbunny7/status/2068296859035246969
ಶನಿವಾರ ಮಧ್ಯಾಹ್ನ ಸುಮಾರು 3:30 ರ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ಹಾಗೂ ಜಿಲ್ಲಾಡಳಿತದ ತಂಡಗಳು ಸ್ಥಳೀಯರ ನೆರವಿನೊಂದಿಗೆ ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದವು. ಈ ಯಶವಾಡಿ ದೇವಸ್ಥಾನವು ಪರಭಣಿ ಜಿಲ್ಲೆಯ ಅತ್ಯಂತ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದ್ದು, ಪ್ರತಿ ಶನಿವಾರ ಇಲ್ಲಿಗೆ 25,000 ದಿಂದ 50,000 ಭಕ್ತರು ಭೇಟಿ ನೀಡುತ್ತಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement