“ಎಲ್ಲರನ್ನೂ ಕ್ಷಮಿಸಿಬಿಡು…ಈಗ ಹೊರಡುವ ಸಮಯ ಬಂದಿದೆ, ಹೋಗಿ ಬಾ..”: ಹರೀಶ ರಾಣಾಗೆ ಕುಟುಂಬದ ಭಾವನಾತ್ಮಕ ವಿದಾಯ

ನವದೆಹಲಿ: “ಇನ್ನು ಹೊರಡುವ ಸಮಯ ಬಂದಿದೆ, ಸರಿನಾ?..” – ಗಾಜಿಯಾಬಾದ್‌ನ ಆ ನಿಶ್ಯಬ್ದ ಗಲ್ಲಿಯ ಒಂದು ಮನೆಯಲ್ಲಿ, ಚಲನೆಯಿಲ್ಲದೆ ಮಲಗಿದ್ದ ಹರೀಶ ರಾಣಾ ಸುತ್ತ ಅವರ ಕುಟುಂಬಸ್ಥರು ಜಮಾಯಿಸಿದ್ದರು. ಅದು ಹರೀಶ ರಾಣಾ ಅವರಿಗೆ ಮನಯವರು ಹಾಗೂ ಪ್ರೀತಿ ಪಾತ್ರರ ಅಂತಿಮ ವಿದಾಯದ ಕ್ಷಣಗಳು. ದೆಹಲಿಯ ಏಮ್ಸ್ (AIIMS) ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಅವರು ಅಂತಿಮ ವಿದಾಯ ಹೇಳಿದರು.  ಏಮ್ಸ್‌ನಲ್ಲಿ ವೈದ್ಯರು ಹಂತ ಹಂತವಾಗಿ ಅವರ ಜೀವ ಬೆಂಬಲ(Life Support)ದ ಯಂತ್ರಗಳನ್ನು ತೆಗೆಯಲಿದ್ದಾರೆ. ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ರಾಣಾ ಅವರಿಗೆ, ಸುಪ್ರೀಂ ಕೋರ್ಟ್ ಕಳೆದ ವಾರ ದಯಾಮರಣಕ್ಕೆ (Passive Euthanasia) ಅನುಮತಿ ನೀಡಿದೆ.
ಕಣ್ಣೀರು ತರಿಸುವ 22 ಸೆಕೆಂಡುಗಳ ವಿಡಿಯೋ
ರಾಣಾ ಅವರ ಕುಟುಂಬಸ್ಥರು ಕಳೆದ ಕೊನೆಯ ಕ್ಷಣಗಳ 22 ಸೆಕೆಂಡುಗಳ ವಿಡಿಯೋವೊಂದು ಹೊರಬಂದಿದ್ದು, ಅದು ಎಂತಹವರ ಕಣ್ಣಲ್ಲೂ ನೀರು ತರಿಸುವಂತಿದೆ. ಮಗನ ಮಗ್ಗುಲಲ್ಲೇ ಕುಳಿತಿದ್ದ ತಾಯಿಯ ಮುಖದಲ್ಲಿ ಹೇಳತೀರದ ವೇದನೆ ಎದ್ದು ಕಾಣುತ್ತಿತ್ತು. ಬ್ರಹ್ಮಕುಮಾರಿ ಸಂಸ್ಥೆಯ ಸೋದರಿಯೊಬ್ಬರು ಹರೀಶ ರಾಣಾ ಅವರ ಹಣೆಗೊಂದು ತಿಲಕವನ್ನಿಟ್ಟು, ತಲೆ ಸವರುತ್ತಾ, “ಎಲ್ಲರನ್ನೂ ಕ್ಷಮಿಸಿ, ಎಲ್ಲರಿಗೂ ಕ್ಷಮೆಯಾಚಿಸಿ ಈಗ ಹೊರಡುವ ಸಮಯ ಬಂದಿದೆ, ಹೋಗಿ ಬಾ…” ಎಂದು ಪಿಸುಗುಟ್ಟುತ್ತಿದ್ದರು. ಬ್ರಹ್ಮಕುಮಾರಿ ಸಂಸ್ಥೆಯು ಹರೀಶ ರಾಣಾ ಪರವಾಗಿ ಕಾನೂನು ಹೋರಾಟ ನಡೆಸಲು ವಕೀಲರನ್ನು ಒದಗಿಸುವ ಮೂಲಕ ರಾಣಾ ಕುಟುಂಬದ ಬೆನ್ನಿಗೆ ನಿಂತಿತ್ತು.
ರಾಣಾ ಕುಟುಂಬವು ಬ್ರಹ್ಮ ಕುಮಾರಿ ಆಧ್ಯಾತ್ಮಿಕ ಸಂಸ್ಥೆ ಬಹಳ ಹಿಂದಿನಿಂದಲೂ ಬಾಂಧವ್ಯ ಹೊಂದಿದೆ.

13 ವರ್ಷಗಳ ಸುದೀರ್ಘ ಸಂಕಟ
2013 ರಲ್ಲಿ ನಾಲ್ಕನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದ ಹರೀಶ ಅವರ ಮೆದುಳಿಗೆ ತೀವ್ರ ಪೆಟ್ಟಾಗಿತ್ತು. ಅಂದಿನಿಂದ ಸುಮಾರು 13 ವರ್ಷಗಳ ಕಾಲ ಅವರು ಜೀವರಕ್ಷಕ ವ್ಯವಸ್ಥೆಯಲ್ಲಿದ್ದಾರೆ ಮತ್ತು ಹಾಸಿಗೆಗೆ ಸೀಮಿತರಾಗಿದ್ದಾರೆ. ಉಸಿರಾಟಕ್ಕಾಗಿ ‘ಟ್ರಾಕಿಯೊಸ್ಟೊಮಿ’ ಮತ್ತು ಆಹಾರಕ್ಕಾಗಿ ‘ಗ್ಯಾಸ್ಟ್ರೋಜೆಜುನೊಸ್ಟೊಮಿ’ ಕೊಳವೆಗಳ ಸಹಾಯದಿಂದ ಪ್ರಾಣ ಹಿಡಿದಿಟ್ಟುಕೊಂಡಿದ್ದರು. ವೈದ್ಯಕೀಯ ಲೋಕದ ಎಲ್ಲಾ ಸಾಧ್ಯತೆಗಳು ಮುಗಿದುಹೋದ ಮೇಲೆ, ಮಗನ ಯಾತನೆಯನ್ನು ನೋಡಲಾರದೆ ಪೋಷಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಅರುಣಾ ಶಾನಭಾಗ ಮತ್ತು ಹರೀಶ ರಾಣಾ
ಭಾರತದಲ್ಲಿ ಪರೋಕ್ಷ ಇಚ್ಛಾಮರಣಕ್ಕೆ (Passive Euthanasia) ಅನುಮತಿ ಸಿಕ್ಕಿರುವುದು ಇದೇ ಮೊದಲು. ಈ ಹಿಂದೆ 1973 ರಲ್ಲಿ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಭೀಕರ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ, 40 ವರ್ಷಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನರ್ಸ್‌ ಆಗಿದ್ದ ಅರುಣಾ ಶಾನಭಾಗ ಅವರಿಗೆ ಸುಪ್ರೀಂ ಕೋರ್ಟ್ ಸಾವಿನ ಹಕ್ಕನ್ನು (ದಯಾ ಮರಣ) ನಿರಾಕರಿಸಿತ್ತು. ಆಗ ನ್ಯಾಯಾಲಯವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ನೀಡಿತ್ತಾದರೂ, ಸಕ್ರಿಯ ಇಚ್ಛಾಮರಣಕ್ಕೆ ಅವಕಾಶ ನೀಡಿರಲಿಲ್ಲ. ಅರುಣಾ ಅವರು 2015 ರಲ್ಲಿ ನ್ಯುಮೋನಿಯಾದಿಂದ ಮೃತಪಟ್ಟಿದ್ದರು.

ಸುಪ್ರೀಂ ಕೋರ್ಟ್ ಭಾವುಕ ನುಡಿ
ಜಸ್ಟಿಸ್ ಜೆ.ಬಿ. ಪರ್ದಿವಾಲಾ ಮತ್ತು ಜಸ್ಟಿಸ್ ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು ಈ ಐತಿಹಾಸಿಕ ತೀರ್ಪು ನೀಡುವಾಗ ರಾಣಾ ಅವರ ಪೋಷಕರನ್ನು ಮುಕ್ತಕಂಠದಿಂದ ಶ್ಲಾಘಿಸಿದೆ. “ಒಬ್ಬರನ್ನು ಪ್ರೀತಿಸುವುದು ಎಂದರೆ ಕೇವಲ ಅವರ ಸುಖದ ಸಮಯದಲ್ಲಿ ಜೊತೆಗಿರುವುದಲ್ಲ, ಬದಲಾಗಿ ಅವರ ಅತ್ಯಂತ ಕರಾಳ ಮತ್ತು ದುಃಖದ ಕ್ಷಣಗಳಲ್ಲಿ ಅವರನ್ನು ಸಲಹುವುದು,” ಎಂದು ಕೋರ್ಟ್ ಹೇಳಿದೆ. ಈ ಪ್ರಕರಣದ ವಿಚಾರಣೆಯ ಉದ್ದಕ್ಕೂ ತಾವು “ತೀವ್ರ ದುಃಖ” ಅನುಭವಿಸಿದ್ದಾಗಿ ನ್ಯಾಯಾಧೀಶರು ಒಪ್ಪಿಕೊಂಡಿದ್ದಾರೆ.
“ಕಳೆದ 13 ವರ್ಷಗಳಿಂದ ಅರ್ಜಿದಾರರ ಬದುಕು ಕೇವಲ ನೋವು ಮತ್ತು ಸಂಕಟಗಳಿಂದಲೇ ತುಂಬಿದೆ. ತನ್ನ ವೇದನೆಯನ್ನು ಧ್ವನಿಯ ಮೂಲಕ ಹೊರಹಾಕಲು ಸಾಧ್ಯವಾಗದಿರುವುದು ಈ ಸಂಕಟವನ್ನು ಮತ್ತಷ್ಟು ಕ್ರೂರವಾಗಿಸಿದೆ ಎಂದು ಕೋರ್ಟ್‌ ಹೇಳಿದೆ.
“ರಾಣಾ ಅವರ ಪೋಷಕರು ಮತ್ತು ಒಡಹುಟ್ಟಿದವರು ಅಚಲ ಬೆಂಬಲವಾಗಿ ನಿಂತಿದ್ದಾರೆ. ಅವರನ್ನು ಆರೈಕೆ ಮಾಡಲು ಅವರು ಮಾಡಿದ ಪ್ರಯತ್ನಗಳು ಮತ್ತು ತೋರಿದ ಬದ್ಧತೆ ಅಪಾರ ಗೌರವಕ್ಕೆ ಅರ್ಹವಾಗಿದೆ ಎಂದು ಅದು ಹೇಳಿದೆ.
ಈ ನಿರ್ಧಾರವು ಕೇವಲ “ತರ್ಕ ಮತ್ತು ವಿವೇಚನೆಗೆ” ಒಳಪಟ್ಟಿಲ್ಲ, ಬದಲಾಗಿ ಇದು “ಪ್ರೀತಿ, ನಷ್ಟ, ವೈದ್ಯಕೀಯ ಶಾಸ್ತ್ರ ಮತ್ತು ಮರುಕ”ಗಳ ನಡುವಿನ ನಿರ್ಧಾರವಾಗಿದೆ ಎಂದು ಪೀಠ ಹೇಳಿದೆ. “ಇದು ಸಾವನ್ನು ಆರಿಸಿಕೊಳ್ಳುವ ನಿರ್ಧಾರವಲ್ಲ, ಬದಲಾಗಿ ಕೃತಕವಾಗಿ ಜೀವನವನ್ನು ದೀರ್ಘಗೊಳಿಸುವುದನ್ನು ನಿಲ್ಲಿಸುವ ನಿರ್ಧಾರವಷ್ಟೇ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಮುಖ ಸುದ್ದಿ :-   ʼವಂದೇ ಮಾತರಂ'ಗೆ ಅವಮಾನಿಸಿದರೆ ಜೈಲು ಶಿಕ್ಷೆ: ಸಂಸತ್ತಿನಲ್ಲಿ ಮಸೂದೆ ಮಂಡಿಸಲಿರುವ ಅಮಿತ್ ಶಾ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement