ಕ್ರಿಕೆಟರ್‌ ಸ್ಮೃತಿ ಮಂಧಾನ ತಂದೆ ಅಸ್ವಸ್ಥ ; ಸ್ಮೃತಿ ಮಂಧನಾ- ಪಲಾಶ ಮುಚ್ಚಲ್ ಮದುವೆ ಮುಂದೂಡಿಕೆ

ಸಾಂಗ್ಲಿ (ಮಹಾರಾಷ್ಟ್ರ): ಬಹು ನಿರೀಕ್ಷಿತವಾಗಿದ್ದ ಭಾರತೀಯ ಕ್ರಿಕೆಟರ್ ಸ್ಮೃತಿ ಮಂಧನಾ ಮತ್ತು ಸಂಗೀತ ಸಂಯೋಜಕ ಪಲಾಶ ಮುಚ್ಚಲ್ ಅವರ ವಿವಾಹ ಸಮಾರಂಭವು ಕೌಟುಂಬಿಕ ತುರ್ತು ಪರಿಸ್ಥಿತಿಯಿಂದಾಗಿ ದಿಢೀರ್ ಮುಂದೂಡಲ್ಪಟ್ಟಿದೆ.
ಮದುವೆಯ ಸಿದ್ಧತೆಗಳು ಸಾಂಗ್ಲಿಯ ಸಮ್ಡೋಲ್‌ನಲ್ಲಿರುವ ಮಂಧನಾ ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿದ್ದಾಗ, ಸ್ಮೃತಿ ಮಂಧನಾ ಅವರ ತಂದೆ ಶ್ರೀನಿವಾಸ ಮಂಧನಾ ಅವರಿಗೆ ಹೃದದ ತೊಂದರೆ ಕಾಣಿಸಿಕೊಂಡಿದೆ ಎಂದು ಸ್ಮೃತಿ ಅವರ ವ್ಯವಹಾರ ವ್ಯವಸ್ಥಾಪಕ ತುಹಿನ್ ಮಿಶ್ರಾ ದೃಢಪಡಿಸಿದ್ದಾರೆ.
ಶ್ರೀನಿವಾಸ ಮಂಧನಾ ಅವರನ್ನು ತಕ್ಷಣವೇ ಸಾಂಗ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಮೃತಿ ಮಂಧನಾ ಮತ್ತು ಅವರ ಕುಟುಂಬದವರು ತಕ್ಷಣ ಆಸ್ಪತ್ರೆಗೆ ಧಾವಿಸಿದ್ದಾರೆ ಎಂದು ಕುಟುಂಬದ ಆಪ್ತ ಮೂಲಗಳು ದೃಢಪಡಿಸಿವೆ.

ಆರೋಗ್ಯ ಸ್ಥಿತಿ ಸ್ಥಿರ
ಸದ್ಯಕ್ಕೆ, ಶ್ರೀನಿವಾಸ ಮಂಧನಾ ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಅವರನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ ಎಂದು ಕುಟುಂಬ ಹೇಳಿದೆ. ಮದುವೆಯ ಆಯೋಜಕರು ಭಾನುವಾರ ನಡೆಯಬೇಕಿದ್ದ ಸಮಾರಂಭವನ್ನು ರದ್ದುಗೊಳಿಸಲಾಗಿದೆ ಎಂದು ಮಾಧ್ಯಮಗಳಿಗೆ ಅಧಿಕೃತವಾಗಿ ತಿಳಿಸಿದ್ದಾರೆ. ವಿವಾಹದ ಮುಂದಿನ ದಿನಾಂಕ ಯಾವಾಗ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
“ಭಾನುವಾರ ಬೆಳಗ್ಗೆ ಉಪಹಾರ ಸೇವಿಸುತ್ತಿದ್ದಾಗ ಸ್ಮೃತಿ ಮಂಧನಾ ಅವರ ತಂದೆ ಶ್ರೀನಿವಾಸ ಮಂಧನಾ ಅವರಿಗೆ ಅನಾರೋಗ್ಯ ಉಂಟಾಯಿತು. ಸ್ವಲ್ಪ ಸಮಯ ಕಾಯ್ದೆವು. ಬಹುಶಃ ಸಹಜ ಅನಾರೋಗ್ಯ ಇರಬಹುದು, ಅವರು ಚೇತರಿಸಿಕೊಳ್ಳುತ್ತಾರೆ ಎಂದು ಭಾವಿಸಿದ್ದೆವು. ಆದರೆ ಅವರ ಸ್ಥಿತಿ ಹದಗೆಡುತ್ತಿತ್ತು. ಆದ್ದರಿಂದ ಯಾವುದೇ ಅಪಾಯ ಬೇಡ ಎಂದು ಆಂಬ್ಯುಲೆನ್ಸ್ ಕರೆಸಿ ಅವರನ್ನು ಆಸ್ಪತ್ರೆಗೆ ಕರೆದೊಯ್ದೆವು. ಈಗ ಅವರು ನಿಗಾದಲ್ಲಿದ್ದಾರೆ,” ಎಂದು ಸ್ಮೃತಿ ಅವರ ವ್ಯವಸ್ಥಾಪಕರು ತಿಳಿಸಿದ್ದಾರೆ.

“ಸ್ಮೃತಿ ಅವರ ತಂದೆ ಸಂಪೂರ್ಣ ಗುಣಮುಖರಾಗುವವರೆಗೂ, ನಡೆಯಬೇಕಿದ್ದ ಮದುವೆಯನ್ನು ಅನಿರ್ದಿಷ್ಟವಾಗಿ ಮುಂದೂಡಲು ಅವರು ನಿರ್ಧರಿಸಿದ್ದಾರೆ. ಈಗ ಅವರು ನಿಗಾದಲ್ಲಿದ್ದಾರೆ ಮತ್ತು ಆಸ್ಪತ್ರೆಯಲ್ಲಿಯೇ ಇರಬೇಕೆಂದು ವೈದ್ಯರು ಹೇಳಿದ್ದಾರೆ. ನಾವು ಕೂಡ ಆಘಾತದಲ್ಲಿದ್ದೇವೆ, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ,” ಎಂದು ಅವರು ಹೇಳಿದ್ದಾರೆ.
ಸ್ಮೃತಿ ಮತ್ತು ಪಲಾಶ ಅವರು ನವೆಂಬರ್ 23 ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದರು. ಮಹಿಳಾ ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡದ ಅನೇಕ ಸದಸ್ಯರು ಮದುವೆಯ ಸಂಭ್ರಮದಲ್ಲಿ ಸ್ಮೃತಿ ಅವರೊಂದಿಗೆ ಇದ್ದರು.

ಪ್ರಮುಖ ಸುದ್ದಿ :-   ತೆಲಂಗಾಣ ಕಾಂಗ್ರೆಸ್‌ನಲ್ಲಿ ಬಿರುಗಾಳಿ : ಮಗಳ ಮಾತಿಗೆ ತಾಯಿಯ ಸಚಿವ ಸ್ಥಾನಕ್ಕೆ ಕುತ್ತು: ರೇವಂತ ರೆಡ್ಡಿ ಸಂಪುಟದಿಂದ ದಿಢೀರ್ ವಜಾ !

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement