ನವದೆಹಲಿ: ಐಐಟಿ, ಎನ್ಐಟಿ, ಐಐಐಟಿ ಇತ್ಯಾದಿಗಳಿಗೆ ಪ್ರವೇಶ ಪಡೆಯುವುದುಅನೇಕ ವಿದ್ಯಾರ್ಥಿಗಳ ಕನಸಾಗಿದೆ. ಹೀಗಾಗಿ ಉತ್ತಮ ಶಿಕ್ಷಣ ಮತ್ತು ಅತ್ಯುತ್ತಮ ಅಂಕ ಪಡೆಯಲು ಪೋಷಕರು ತಮ್ಮ ಮಕ್ಕಳ ಮೇಲೆ ಕೆಲವೊಮ್ಮೆ ನಿಬಂಧನೆಗಳನ್ನು ವಿಧಿಸುವುದೂ ಉಂಟು. ಇಂಥದ್ದೇ ವಿದ್ಯಮಾನದಲ್ಲಿ ದೆಹಲಿಯ ಹುಡುಗನ ಮುಂದೆ ಆತನ ತಂದೆ ವಿಭಿನ್ನವಾದ ಪ್ರಸ್ತಾಪವೊಂದನ್ನು ಮುಂದಿಟ್ಟಿದ್ದಾರೆ. ತಂದೆಯೊಬ್ಬರು ತಮ್ಮ ಮಗ ಐಐಟಿಗೆ ಪ್ರವೇಶ ಪಡೆದರೆ ತನ್ನ ಸಂಬಳದ 40% ರಷ್ಟನ್ನು ಆತನಿಗೆ ನೀಡುವುದಾಗಿ ಲಿಖಿತವಾಗಿ ಭರವಸೆ ನೀಡಿರುವ ಪೋಸ್ಟ್ ಒಂದು ವೈರಲ್ ಆಗಿದೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ.
ಇದನ್ನು ಹುಡುಗ ರೆಡ್ಡಿಟ್ ಎಂಬ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾನೆ. Upset_Design_8656 ಎಂಬ ರೆಡ್ಡಿಟ್ ಬಳಕೆದಾರನಾದ ಮಗ ತಂದೆಯ ಕೈ ಬರಹದ ಪತ್ರದ ಫೋಟೋವನ್ನು ರೆಡ್ಡಿಟ್ ನಲ್ಲಿ ಹಂಚಿಕೊಂಡಿದ್ದಾನೆ.
ಅದರ ಪ್ರಕಾರ, ತಂದೆ ತನ್ನ ಮಗ ಐಐಟಿ, ಎನ್ಐಟಿ, ಐಐಐಟಿ ಅಥವಾ ಬಿಟ್ಸ್ ಪಿಲಾನಿಯಂತಹ ಉನ್ನತ ದರ್ಜೆಯ ಸಂಸ್ಥೆಗೆ ಪ್ರವೇಶ ಪಡೆದರೆ ತಾನು ನಿವೃತ್ತಿಯಾಗುವವರೆಗೆ ಪ್ರತಿ ತಿಂಗಳು ತನ್ನ ಸಂಬಳದ ಶೇಕಡಾ 40 ರಷ್ಟನ್ನು ಮಗನಿಗೆ ನೀಡುವುದಾಗಿ ಎಂದು ಲಿಖಿತವಾಗಿ ಬರೆದು ವಾಗ್ದಾನ ಮಾಡಿದ್ದಾರೆ. ಆದರೆ ತಂದೆಯಿಂದ ಬಂದ ಈ ಆಫರ್ ನಲ್ಲಿ ಒಂದು ಟ್ವಿಸ್ಟ್ ಸಹ ಇದೆ. ಅದೇನೆಂದರೆ ಒಂದು ವೇಳೆ ಮಗ ಉನ್ನತ ದರ್ಜೆಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯದೆ ಎರಡು ಅಥವಾ ಮೂರನೇ ಹಂತದ ಕಾಲೇಜಿಗೆ ಪ್ರವೇಶ ಪಡೆದರೆ ಮಗ ನಿವೃತ್ತಿಯ ತನಕವೂ ತನ್ನ ಸಂಬಳದ 100 ಪ್ರತಿಶತವನ್ನು ತಂದೆಗೆ ನೀಡಬೇಕಾಗುತ್ತದೆ ಎಂಬ ಷರತ್ತೂ ಇದೆ.
ಈ ಪೋಸ್ಟ್ ರೆಡ್ಡಿಟ್ನಲ್ಲಿ ವೈರಲ್ ಆಗಿದ್ದು, ಒಬ್ಬ ಬಳಕೆದಾರೊಬ್ಬರು,”ಅಂಕಲ್ ಎಲ್ಐಸಿ ಏಜೆಂಟ್ ಇದ್ದಾರೆಯೇ..? ಯಾಕೆಂದರೆ ಇಂತಹ ಖತರ್ನಾಕ್ ಸ್ಕೀಮ್ ಅನ್ನು ತರುತ್ತಿದ್ದಾರೆ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬರು ಇದನ್ನು “ನಿವೃತ್ತಿ ಯೋಜನೆಗಳು 101” ಎಂದು ಕರೆದಿದ್ದಾರೆ. ಆದಾಗ್ಯೂ, ರೆಡ್ಡಿಟ್ ಬಳಕೆದಾರ ನಂತರ ಈ ಪತ್ರವು ಕೇವಲ ಮೋಜಿಗಾಗಿ ಮಾಡಿದ್ದು ಎಂದು ಹೇಳಿದ್ದಾರೆ, ಈ ರೀತಿ ಲಿಖಿತ ವಾಗ್ದಾನಗಳು ತನ್ನ ಕುಟುಂಬದಲ್ಲಿ ತಮಾಷೆಯಾಗಿ ನಡೆಯುತ್ತಿರುತ್ತದೆ ಎಂದು ವಿದ್ಯಾರ್ಥಿ ಹೇಳಿದ್ದಾನೆ. ಈ ಹಿಂದೆ, 10 ನೇ ತರಗತಿಯಲ್ಲಿ 90% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುವುದಾಗಿ ತನ್ನ ತಂದೆಗೆ ಲಿಖಿತ ಭರವಸೆ ನೀಡಿದ್ದೆ ಎಂದು ಹೇಳಿದ್ದಾನೆ. ಬೇಗ ಎದ್ದರೆ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ತಂದೆ ಭರವಸೆ ನೀಡಿದ್ದ ಮತ್ತೊಂದು ಘಟನೆಯನ್ನು ನೆನಪಿಸಿಕೊಂಡಿದ್ದಾನೆ. ಮಗನು ಹೇಳುವಂತೆ, ನನ್ನ ತಂದೆ ಎಲ್ಲವನ್ನೂ ಲಿಖಿತವಾಗಿಯೇ ಬಯಸುತ್ತಾರೆ ಎಂದು ವಿದ್ಯಾರ್ಥಿ ಹೇಳಿದ್ದಾನೆ.
ನಿಮ್ಮ ಕಾಮೆಂಟ್ ಬರೆಯಿರಿ