ಎಲ್ಲ ಮೊಬೈಲ್‌ಗಳಲ್ಲಿ ‘ಸಂಚಾರ ಸಾಥಿ’ ಆ್ಯಪ್ ಅಳವಡಿಕೆ ಕಡ್ಡಾಯ

ನವದೆಹಲಿ: ಭಾರತದ ದೂರಸಂಪರ್ಕ ಸಚಿವಾಲಯವು ಸ್ಮಾರ್ಟ್‌ಫೋನ್ ತಯಾರಕರಿಗೆ ‘ಸಂಚಾರ ಸಾಥಿ’ (Sanchar Saathi) ಎಂಬ ಕೇಂದ್ರ ಸರ್ಕಾರದ ಸೈಬರ್ ಭದ್ರತಾ ಅಪ್ಲಿಕೇಶನ್ ಅನ್ನು ಎಲ್ಲಾ ಸಾಧನಗಳಲ್ಲಿ ಮೊದಲೇ ಅಳವಡಿಸಲು ಸೂಚಿಸಿದೆ.
ದೂರಸಂಪರ್ಕ ಇಲಾಖೆ (DoT) ನವೆಂಬರ್ 28 ರಂದು ಈ ಕುರಿತು ನಿರ್ದೇಶನಗಳನ್ನು ಹೊರಡಿಸಿದೆ. ಇದರನ್ವಯ, ತಯಾರಕರಿಂದ ಮಾರಾಟವಾಗುವ ಎಲ್ಲಾ ಹೊಸ ಸಾಧನಗಳಲ್ಲಿ ‘ಸಂಚಾರ ಸಾಥಿ’ ಅಪ್ಲಿಕೇಶನ್ ಅನ್ನು ಮೊದಲೇ ಇನ್ಸ್ಟಾಲ್‌ ಮಾಡಿರಬೇಕು. ಈಗಾಗಲೇ ಮಾರಾಟವಾಗಿರುವ ಫೋನ್‌ಗಳಿಗೆ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಈ ಅಪ್ಲಿಕೇಶನ್ ಅನ್ನು ಒದಗಿಸಬೇಕು. ಸ್ಮಾರ್ಟ್‌ಫೋನ್ ತಯಾರಕರಿಗೆ ಈ ಆದೇಶವನ್ನು ಜಾರಿಗೊಳಿಸಲು 90 ದಿನಗಳ ಕಾಲಾವಕಾಶ ಮತ್ತು ವರದಿಯನ್ನು ಸಲ್ಲಿಸಲು 120 ದಿನಗಳ ಕಾಲಾವಕಾಶ ನೀಡಲಾಗಿದೆ.
ಈ ಆದೇಶವು ಆಪಲ್, ಸ್ಯಾಮ್‌ಸಂಗ್, ಶಿಯೋಮಿ, ಒಪ್ಪೋ, ವಿವೋ ಮುಂತಾದ ಪ್ರಮುಖ ಸ್ಮಾರ್ಟ್‌ಫೋನ್ ತಯಾರಕರ ಮೇಲೆ ಪರಿಣಾಮ ಬೀರಲಿದೆ. ದೂರಸಂಪರ್ಕ ಸಂಪನ್ಮೂಲಗಳ ದುರುಪಯೋಗದ ಬಗ್ಗೆ ಸುಲಭವಾಗಿ ವರದಿ ಮಾಡಲು ಅನುಕೂಲವಾಗಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

ಕೇಂದ್ರದ ಯೋಜನೆ ಏನು?
ದೂರಸಂಪರ್ಕ ಇಲಾಖೆಯು (DoT) ಮೊಬೈಲ್ ಹ್ಯಾಂಡ್‌ಸೆಟ್‌ಗಳ ತಯಾರಕರು ಮತ್ತು ಆಮದುದಾರರಿಗೆ ಭಾರತದಲ್ಲಿ ಬಳಕೆಗಾಗಿ ತಯಾರಿಸಲಾದ ಅಥವಾ ಆಮದು ಮಾಡಿಕೊಂಡಿರುವ ಎಲ್ಲ ಮೊಬೈಲ್ ಹ್ಯಾಂಡ್‌ಸೆಟ್‌ಗಳಲ್ಲಿ ‘ಸಂಚಾರ್ ಸಾಥಿ’ ಮೊಬೈಲ್ ಅಪ್ಲಿಕೇಶನ್ ಅನ್ನು ಮೊದಲೇ ಅಳವಡಿಕೆ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದೆ.
ಮೊದಲೇ ಇನ್ಸ್ಟಾಲ್‌ ಮಾಡಲಾದ ‘ಸಂಚಾರ ಸಾಥಿ’ ಅಪ್ಲಿಕೇಶನ್ ಅನ್ನು ಮೊದಲ ಬಳಕೆಯ ಸಮಯದಲ್ಲಿ ಅಥವಾ ಸಾಧನವನ್ನು ಹೊಂದಿಸುವ ಸಮಯದಲ್ಲಿ (Device Setup) ಅಂತಿಮ ಬಳಕೆದಾರರಿಗೆ ಸ್ಪಷ್ಟವಾಗಿ ಗೋಚರಿಸುವಂತೆ ಮತ್ತು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಹಾಗೂ ಅದರ ಕಾರ್ಯಗಳನ್ನು ನಿಷ್ಕ್ರಿಯಗೊಳಿಸಲು ಅಥವಾ ನಿರ್ಬಂಧಿಸಲು ಅವಕಾಶ ನೀಡಬಾರದು ಎಂದು ಹೇಳಿದೆ.
ಈಗಾಗಲೇ ತಯಾರಾಗಿ ಭಾರತದ ಮಾರಾಟ ಮಳಿಗೆಗಳಲ್ಲಿರುವ (Sales Channels) ಸಾಧನಗಳಿಗೆ, ತಯಾರಕರು ಮತ್ತು ಆಮದುದಾರರು ಸಾಫ್ಟ್‌ವೇರ್ ಅಪ್‌ಡೇಟ್‌ಗಳ ಮೂಲಕ ಈ ಅಪ್ಲಿಕೇಶನ್ ಅನ್ನು ಒದಗಿಸಲು ಪ್ರಯತ್ನಿಸಬೇಕು. “ಸೈಬರ್ ವಂಚನೆಗಳಿಗೆ ದೂರಸಂಪರ್ಕ ಸಂಪನ್ಮೂಲಗಳ ದುರುಪಯೋಗವನ್ನು ತಡೆಗಟ್ಟಲು ಮತ್ತು ದೂರಸಂಪರ್ಕ ಸೈಬರ್ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ದೂರಸಂಪರ್ಕ ಇಲಾಖೆ (DoT) ‘ಸಂಚಾರ ಸಾಥಿ’ ಉಪಕ್ರಮವನ್ನು ಕೈಗೊಂಡಿದೆ” ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚುತ್ತಿರುವ ಸೈಬರ್ ಅಪರಾಧ ಮತ್ತು ಹ್ಯಾಕಿಂಗ್‌ ನಂತಹ ಪ್ರಕರಣಗಳನ್ನು ನಿಭಾಯಿಸಲು, ಕಳುವಾದ ಫೋನ್‌ಗಳನ್ನು ವಂಚನೆಗೆ ಬಳಸುವುದನ್ನು ನಿರ್ಬಂಧಿಸಲು ಸರ್ಕಾರ ಕ್ರಮಕ್ಕೆ ಮುಂದಾಗಿದೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

‘ಸಂಚಾರ ಸಾಥಿ’ ಅಪ್ಲಿಕೇಶನ್….
‘ಸಂಚಾರ ಸಾಥಿ’ ಅಪ್ಲಿಕೇಶನ್ ಅನ್ನು ಜನವರಿ 17, 2025 ರಂದು ಪ್ರಾರಂಭಿಸಲಾಯಿತು ಮತ್ತು ಆಗಸ್ಟ್ 2025 ರ ಹೊತ್ತಿಗೆ ಇದು 50 ಲಕ್ಷ ಡೌನ್‌ಲೋಡ್‌ಗಳನ್ನು ದಾಟಿದೆ. ಪ್ರಕಟಣೆಯ ಪ್ರಕಾರ, ಈ ಅಪ್ಲಿಕೇಶನ್ ಅಕ್ಟೋಬರ್ ವರೆಗೆ ದೇಶಾದ್ಯಂತ 7 ಲಕ್ಷಕ್ಕೂ ಹೆಚ್ಚು ಕಳುವಾದ ಅಥವಾ ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಮರಳಿ ಪಡೆಯಲು ಸಹಾಯ ಮಾಡಿದೆ. ದೂರಸಂಪರ್ಕ ಇಲಾಖೆ (DoT) ಪರಿಚಯಿಸಿದ ಈ ಮೊಬೈಲ್ ಅಪ್ಲಿಕೇಶನ್, ಭದ್ರತಾ ವೈಶಿಷ್ಟ್ಯಗಳನ್ನು ಮತ್ತು ವಂಚನೆ ಮಾಹಿತಿಯನ್ನು ನೇರವಾಗಿ ಬಳಕೆದಾರರ ಸ್ಮಾರ್ಟ್‌ಫೋನ್‌ಗಳಿಗೆ ತರುತ್ತದೆ.
ಇದು ಫೋನ್‌ಗಳ IMEI (International Mobile Equipment Identity) ಆಧಾರದ ಮೇಲೆ ಭಾರತದಲ್ಲಿ ಎಲ್ಲಿ ಬೇಕಾದರೂ ಕಳೆದುಹೋದ ಅಥವಾ ಕಳುವಾದ ಮೊಬೈಲ್ ಫೋನ್‌ಗಳನ್ನು ಟ್ರ್ಯಾಕ್ ಮಾಡಲು ಮತ್ತು ನಿರ್ಬಂಧಿಸಲು ಅನುಮತಿಸುತ್ತದೆ.
ಅಲ್ಲದೆ, ಇದು ಕಳುವಾದ ಅಥವಾ ಕಳೆದುಹೋದ ಸಾಧನಗಳನ್ನು ಪತ್ತೆಹಚ್ಚಲು ಪೊಲೀಸ್ ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ, ನಕಲಿ ಫೋನ್‌ಗಳು ಬ್ಲ್ಯಾಕ್‌ ಮಾರ್ಕೆಟ್‌ಗೆ ಪ್ರವೇಶಿಸುವುದನ್ನು ತಡೆಯುತ್ತದೆ ಮತ್ತು ಸಾಧನ ಕ್ಲೋನಿಂಗ್ ಪ್ರಯತ್ನಗಳನ್ನು ನಿರ್ಬಂಧಿಸುತ್ತದೆ.
ಇದು ಬಳಕೆದಾರರಿಗೆ ಕರೆಗಳು, SMS, ಅಥವಾ WhatsApp ಮೂಲಕದ ಸಂಶಯಾಸ್ಪದ ವಂಚನೆ ಸಂವಹನಗಳ (ವಿಶೇಷವಾಗಿ KYC-ಅಪ್‌ಡೇಟ್ ವಂಚನೆಗಳು) ಬಗ್ಗೆ ರಿಪೋರ್ಟ್‌ ಮಾಡಲು ಅನುವು ಮಾಡಿಕೊಡುತ್ತದೆ.
ಈ ಅಪ್ಲಿಕೇಶನ್ ಪ್ರಸ್ತುತ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಲಭ್ಯವಿದ್ದು, ಬಳಕೆದಾರರಿಗೆ ಅದನ್ನು ತಮ್ಮ ಫೋನ್‌ಗಳಲ್ಲಿ ಅಳವಡಿಸುವ ಆಯ್ಕೆಯನ್ನು ಹೊಂದಿರುತ್ತಾರೆ.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement