ಆಪಲ್ ಸಂಸ್ಥೆಯಲ್ಲಿ ನಾಯಕತ್ವ ಬದಲಾವಣೆ: ಕೆಳಗಿಳಿದ ಟಿಮ್ ಕುಕ್ ; ನೂತನ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ

ತಂತ್ರಜ್ಞಾನ ಲೋಕದ ದೈತ್ಯ ಸಂಸ್ಥೆ ‘ಆಪಲ್’ (Apple) ತನ್ನ ನಾಯಕತ್ವದಲ್ಲಿ ಐತಿಹಾಸಿಕ ಬದಲಾವಣೆಯನ್ನು ಪ್ರಕಟಿಸಿದೆ. ಕಳೆದ 15 ವರ್ಷಗಳಿಂದ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಟಿಮ್ ಕುಕ್ ಅವರು ಸಿಇಒ (CEO) ಸ್ಥಾನದಿಂದ ಕೆಳಗಿಳಿಯುತ್ತಿದ್ದು, ಅವರ ಜಾಗಕ್ಕೆ ಆಪಲ್‌ನ ಹಿರಿಯ ಅಧಿಕಾರಿ ಜಾನ್ ಟೆರ್ನಸ್ (John Ternus) ಅವರು ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(CEO)ಯಾಗಿ ಆಯ್ಕೆಯಾಗಿದ್ದಾರೆ.
ಸೆಪ್ಟೆಂಬರ್ 1 ರಿಂದ ಜಾನ್ ಟೆರ್ನಸ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಸಿಇಒ ಆಗಿರುವ ಟಿಮ್ ಕುಕ್ ಅವರು ‘ಎಕ್ಸಿಕ್ಯೂಟಿವ್ ಚೇರ್ಮನ್’ (Executive Chairman) ಆಗಿ ಕಾರ್ಯನಿರ್ವಹಿಸಲಿದ್ದಾರೆ.
2011ರಲ್ಲಿ ಸಂಸ್ಥೆಯ ಸಹ-ಸ್ಥಾಪಕ ಸ್ಟೀವ್ ಜಾಬ್ಸ್ ಅವರ ನಿಧನದ ಮುನ್ನ ಅಧಿಕಾರ ವಹಿಸಿಕೊಂಡಿದ್ದ ಟಿಮ್‌ ಕುಕ್, ಕಳೆದ 15 ವರ್ಷಗಳಲ್ಲಿ ಆಪಲ್‌ನ ಮಾರುಕಟ್ಟೆ ಮೌಲ್ಯವನ್ನು ಬರೋಬ್ಬರಿ $3.6 ಟ್ರಿಲಿಯನ್ ಹೆಚ್ಚಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರ ಅವಧಿಯಲ್ಲಿ ಕಂಪನಿಯ ಷೇರು ಮೌಲ್ಯ ಸರಿಸುಮಾರು 20 ಪಟ್ಟು ವೃದ್ಧಿಸಿದೆ.
ಯಾರು ಈ ಜಾನ್ ಟೆರ್ನಸ್?
50 ವರ್ಷದ ಜಾನ್ ಟೆರ್ನಸ್ ಅವರು ಕಳೆದ 25 ವರ್ಷಗಳಿಂದ ಆಪಲ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2001ರಲ್ಲಿ ಸಂಸ್ಥೆಯನ್ನು ಸೇರಿದ ಇವರು, ಆಪಲ್‌ನ ಪ್ರಮುಖ ಉತ್ಪನ್ನಗಳಾದ ಮ್ಯಾಕ್ (Mac), ಐಪ್ಯಾಡ್ (iPad) ಮತ್ತು ಏರ್‌ಪಾಡ್ಸ್ (AirPods) ಅಭಿವೃದ್ಧಿಯಲ್ಲಿ ತೆರೆಯ ಮರೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಾರ್ಡ್‌ವೇರ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿ ಮ್ಯಾಕ್ ಮಾರಾಟವನ್ನು ಪುನಶ್ಚೇತನಗೊಳಿಸಿದ ಹಾಗೂ ಪ್ರೀಮಿಯಂ ‘ಪ್ರೊ’ ಮಾದರಿಗಳನ್ನು ಪರಿಚಯಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಕೃತಕ ಬುದ್ಧಿಮತ್ತೆ (AI) ಮತ್ತು ಸೆಮಿಕಂಡಕ್ಟರ್ ತಂತ್ರಜ್ಞಾನದಲ್ಲಿ ಪೈಪೋಟಿ ಹೆಚ್ಚುತ್ತಿರುವ ಸಮಯದಲ್ಲಿ ಟೆರ್ನಸ್ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.
 ಐಫೋನ್ ಸೇರಿದಂತೆ ಆಪಲ್‌ನ ಇಕೋಸಿಸ್ಟಮ್‌ನಲ್ಲಿ ಎಐ ತಂತ್ರಜ್ಞಾನವನ್ನು ಮತ್ತಷ್ಟು ಆಳವಾಗಿ ಸಂಯೋಜಿಸುವ ಜವಾಬ್ದಾರಿ ಇವರ ಮೇಲಿದೆ. ಈ ವರ್ಷದ ಆರಂಭದಲ್ಲಿ ಸಿರಿ (Siri) ಗಾಗಿ ಗೂಗಲ್‌ನ ‘ಜೆಮಿನಿ’ ಎಐ ಮಾದರಿಯನ್ನು ಬಳಸಲು ಆಪಲ್ ಒಪ್ಪಂದ ಮಾಡಿಕೊಂಡಿರುವುದು ಗಮನಾರ್ಹ.
ಮಾರುಕಟ್ಟೆಯಲ್ಲಿ ಮಡಚಬಹುದಾದ ಸಾಧನಗಳು (Foldable devices), ಸ್ಮಾರ್ಟ್ ಗ್ಲಾಸ್‌ಗಳು ಮತ್ತು ಎಐ ಚಾಲಿತ ವೇರಬಲ್ಸ್‌ಗಳನ್ನು ಪರಿಚಯಿಸುವ ಮೂಲಕ ಆಪಲ್ ಅನ್ನು ಮುಂದಿನ ತಲೆಮಾರಿನ ತಂತ್ರಜ್ಞಾನದಲ್ಲಿ ಮುಂಚೂಣಿಗೆ ತರುವ ನಿರೀಕ್ಷೆ ಇವರ ಮೇಲಿದೆ.
ಇತರ ಪ್ರಮುಖ ನೇಮಕಾತಿಗಳು:
ನಾಯಕತ್ವ ಬದಲಾವಣೆಯ ಭಾಗವಾಗಿ ಇನ್ನು ಕೆಲವು ಮಹತ್ವದ ನೇಮಕಾತಿಗಳನ್ನು ಮಾಡಲಾಗಿದೆ. ಜಾನಿ ಸ್ರೂಜಿ ಅವರನ್ನು ‘ಚೀಫ್ ಹಾರ್ಡ್‌ವೇರ್ ಆಫೀಸರ್’ ಆಗಿ ನೇಮಿಸಲಾಗಿದೆ. ಅಲ್ಲದೆ, ಈ ಹಿಂದೆ ಟೆರ್ನಸ್ ಅವರು ಮುನ್ನಡೆಸುತ್ತಿದ್ದ ಹಾರ್ಡ್‌ವೇರ್ ಎಂಜಿನಿಯರಿಂಗ್ ವಿಭಾಗದ ಜವಾಬ್ದಾರಿಯನ್ನು ಟಾಮ್ ಮೆರಿಬ್ ವಹಿಸಿಕೊಳ್ಳಲಿದ್ದಾರೆ.
ಟಿಮ್ ಕುಕ್ ಅವರ ‘ಸಪ್ಲೈ ಚೈನ್’ ಮತ್ತು ಕಾರ್ಯಾಚರಣೆಯ ಪರಿಣತಿಯ ಯುಗದಿಂದ, ಈಗ ಆಪಲ್ ಜಾನ್ ಟೆರ್ನಸ್ ಅವರ ಅಡಿಯಲ್ಲಿ ‘ಉತ್ಪನ್ನ ಕೇಂದ್ರಿತ’ (Product-focused) ಸಿದ್ಧಾಂತದತ್ತ ಮುನ್ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಎಐ ತಂತ್ರಜ್ಞಾನದ ಈ ವೇಗದ ಯುಗದಲ್ಲಿ ಆಪಲ್ ತನ್ನ ಪ್ರಾಬಲ್ಯವನ್ನು ಹೇಗೆ ಉಳಿಸಿಕೊಳ್ಳಲಿದೆ ಎಂಬುದು ಕುತೂಹಲಕಾರಿಯಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement