ಕಾರವಾರ: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಚಿರತೆ ಸಾವಿಗೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಮದಳ್ಳಿ ಜಡಿಗದ್ದಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಶುಕ್ರವಾರ ತಡರಾತ್ರಿ ಈ ದುರ್ಘಟನೆ ಸಂಭವಿಸಿದೆ ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ರೈಲಿಗೆ ಡಿಕ್ಕಿಯಾಗಿ ಚಿರತೆ ಮೃತಪಟ್ಟಿರಬಹುದು ಎಂದು ಹೇಳಲಾಗಿದೆ.
ಸುಮಾರು 8 ವರ್ಷದ ಗಂಡು ಚಿರತೆ ಹಲವು ದಿನಗಳಿಂದ ತೋಡೂರು ಜಡಿಗದ್ದಾ ಅರಣ್ಯದಂಚಿನ ಪ್ರದೇಶದಲ್ಲಿ ಪದೇ ಪದೇ ಕಾಣಿಸಿಕೊಂಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಶನಿವಾರ ಬೆಳಗ್ಗೆ ಚಿರತೆಯ ಶವವನ್ನು ನೋಡಿದ ಸ್ಥಳೀಯರು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಆಗಮಿಸಿದ ಅರಣ್ಯಾಧಿಕಾರಿಗಳು, ಪೊಲೀಸ್ ಮತ್ತು ಗ್ರಾಮ ಪಂಚಾಯತ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
ಪಶು ವೈದ್ಯಾಧಿಕಾರಿ ಡಾ. ಓಂ ಪ್ರಕಾಶ ನೇತೃತ್ವದಲ್ಲಿ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಂತರ ನ್ಯಾಯಾಧೀಶರ ಅನುಮತಿ ಪಡೆದು ಅರಣ್ಯ ಇಲಾಖೆ ವತಿಯಿಂದ ಅಂತ್ಯಕ್ರಿಯೆ ನಡೆಸಲಾಯಿತು.


ನಿಮ್ಮ ಕಾಮೆಂಟ್ ಬರೆಯಿರಿ