‘ಸಿಎಂ ಬದಲಾವಣೆ’ ಚರ್ಚೆ ಮತ್ತೆ ಮುನ್ನೆಲೆಗೆ : ಡಿಕೆ ಶಿವಕುಮಾರ ಬಣದ ಶಾಸಕರು ದಿಢೀರ್ ದೆಹಲಿಗೆ…!

ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಬಣಕ್ಕೆ ಸೇರಿದ ಕೆಲವು ಕಾಂಗ್ರೆಸ್ ಶಾಸಕರು ದೆಹಲಿಗೆ ದೌಡಾಯಿಸಿದ್ದಾರೆ ಎಂದು ವರದಿಯಾಗಿದೆ. ಕರ್ನಾಟಕದಲ್ಲಿ ಬಹುಕಾಲದಿಂದ ಕೇಳಿಬರುತ್ತಿರುವ ಮುಖ್ಯಮಂತ್ರಿ ಹುದ್ದೆಯ ಅಧಿಕಾರ ಹಂಚಿಕೆ ಸೂತ್ರವನ್ನು ಜಾರಿಗೆ ತರಲು ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೆಚ್ಚಿಸಲು ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಸರ್ಕಾರವು ಗುರುವಾರ (ನವೆಂಬರ್‌  20)ದಂದು 2.5 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ನಾಯಕತ್ವ ಬದಲಾವಣೆಯ ಚರ್ಚೆಯು ಮತ್ತೆ ತೀವ್ರಗೊಂಡಿದೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ ಅವರಿಗೆ ನಿಕಟವರ್ತಿಗಳು ಎಂದು ಪರಿಗಣಿಸಲ್ಪಟ್ಟಿರುವ ಈ ಶಾಸಕರು, ಪಕ್ಷದ ಉನ್ನತ ನಾಯಕರನ್ನು ಭೇಟಿ ಮಾಡಲು ಗುರುವಾರ ಮಧ್ಯಾಹ್ನ ದೆಹಲಿಗೆ ಪ್ರಯಾಣಿಸಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಮಧ್ಯಾವಧಿಯನ್ನು ತಲುಪಿರುವ ಕಾರಣ, ಅಧಿಕಾರ ಹಂಚಿಕೆ ಒಪ್ಪಂದವನ್ನು ಗೌರವಿಸಬೇಕು ಎಂದು ಡಿ.ಕೆ.ಶಿವಕುಮಾರ. ಬಣವು ಹೇಳುತ್ತಿದೆ.

ಈ ಶಾಸಕರ ಗುಂಪು ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ತಮ್ಮ ಬೇಡಿಕೆಯನ್ನು ಔಪಚಾರಿಕವಾಗಿ ಮಂಡಿಸಲಿದ್ದಾರೆ. ಹಾಗೂ ಶುಕ್ರವಾರ (ನವೆಂಬರ್‌ 21) ಬೆಳಿಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಅವರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವು ಶಾಸಕರು ಗುರುವಾರ ತೆರಳಿದರೆ, ಇನ್ನೂ ಕೆಲವು ಶಾಸಕರು ಶುಕ್ರವಾರ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ.
ಡಿ.ಕೆ. ಶಿವಕುಮಾರ ಅವರ ಸಹೋದರ ಮತ್ತು ಬೆಂಗಳೂರು ಗ್ರಾಮಾಂತರದ ಮಾಜಿ ಸಂಸದರಾದ ಡಿ.ಕೆ. ಸುರೇಶ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ” ಕೊಟ್ಟ ಮಾತನ್ನು ತಪ್ಪುವವರಲ್ಲ, ತಮ್ಮ ಮಾತನ್ನು ಉಳಿಸಿಕೊಳ್ಳುತ್ತಾರೆ” ಎಂದು ಹೇಳಿದ್ದಾರೆ. ಇದು ಅಧಿಕಾರ ಹಂಚಿಕೆ ಒಪ್ಪಂದವನ್ನು ಜಾರಿಗೆ ತರುವ ಸುಳಿವಿರಬಹುದೇ ಎಂದು ಚರ್ಚಿಸಲಾಗುತ್ತಿದೆ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

2023ರ ಮೇ 20ರಂದು ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಶಿವಕುಮಾರ ನಡುವೆ ತೀವ್ರ ಪೈಪೋಟಿ ಇತ್ತು. ಅಂತಿಮವಾಗಿ ಕಾಂಗ್ರೆಸ್ ಪಕ್ಷವು ಶಿವಕುಮಾರ ಅವರನ್ನು ಉಪಮುಖ್ಯಮಂತ್ರಿ ಆಗುವಂತೆ ಮನವೊಲಿಸಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ನೀಡಿತು.
ಆ ಸಮಯದಲ್ಲಿ, ಇಬ್ಬರೂ ನಾಯಕರು “ಪರ್ಯಾಯ ಮುಖ್ಯಮಂತ್ರಿ ಸೂತ್ರ”ಕ್ಕೆ ಒಪ್ಪಿಗೆ ನೀಡಿದ್ದು, ಇದರ ಅಡಿಯಲ್ಲಿ ಎರಡೂವರೆ ವರ್ಷಗಳ ನಂತರ ಶಿವಕುಮಾರ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕೆಲವು ವರದಿಗಳು ಸೂಚಿಸಿದ್ದವು. ಆದರೆ, ಕಾಂಗ್ರೆಸ್ ಹೈಕಮಾಂಡ್‌ ಸೂತ್ರದ ಬಗ್ಗೆ ಎಂದಿಗೂ ಔಪಚಾರಿಕವಾಗಿ ದೃಢಪಡಿಸಿಲ್ಲ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement