“ನೀವೇ ಅನುಮತಿ ನೀಡಿದ್ದೀರಿ, ಈಗ ಗುಂಡು ಹಾರಿಸುತ್ತಿದ್ದೀರಿ?”: ಇರಾನ್ ದಾಳಿ ವೇಳೆ ಭಾರತೀಯ ಹಡಗಿನ ಸಂಭಾಷಣೆಯ ಆಡಿಯೋ ಬಹಿರಂಗ !

ನವದೆಹಲಿ/ದುಬೈ: ಜಗತ್ತಿನ ಒಟ್ಟು ತೈಲ ಮತ್ತು ಅನಿಲ ಪೂರೈಕೆಯ ಐದನೇ ಒಂದು ಭಾಗದಷ್ಟು ಸಂಚಾರ ನಡೆಸುವ ಹೋರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಮುಂದುವರಿದಿದೆ. ಶನಿವಾರ ಇರಾನ್‌ನ ಸಣ್ಣ ಯುದ್ಧನೌಕೆಗಳು (Gunboats) ಭಾರತದ ಧ್ವಜ ಹೊಂದಿದ್ದ ಎರಡು ತೈಲ ಟ್ಯಾಂಕರ್‌ಗಳ ಮೇಲೆ ಗುಂಡಿನ ದಾಳಿ ನಡೆಸಿವೆ. ಈ ಘಟನೆಯ ಬೆನ್ನಲ್ಲೇ ಭಾರತೀಯ ಹಡಗುಗಳು ಅಲ್ಲಿಂದ ಹಿಂದೆ ಸರಿದಿವೆ. ಅದೃಷ್ಟವಶಾತ್, ಯಾವುದೇ ಹಡಗುಗಳಿಗೆ ಹಾನಿಯಾದ ವರದಿಯಾಗಿಲ್ಲ.
ದಾಳಿಗೊಳಗಾದ ‘ಸನ್ಮಾರ್ ಹೆರಾಲ್ಡ್’ (Sanmar Herald) ಹಡಗಿನ ಸಿಬ್ಬಂದಿಯೊಬ್ಬರು ಇರಾನ್ ನೌಕಾಪಡೆಯೊಂದಿಗೆ ನಡೆಸಿದ ಸಂಭಾಷಣೆಯ ಆಡಿಯೋ ಈಗ ಹೊರಬಿದ್ದಿದೆ.
“ಸೆಪಾ ನೌಕಾಪಡೆ (Sepah Navy)… ನಾವು ಸನ್ಮಾರ್ ಹೆರಾಲ್ಡ್ ಮೋಟಾರ್ ಟ್ಯಾಂಕರ್. ನೀವೇ ನಮಗೆ ಹೋಗಲು ಅನುಮತಿ ನೀಡಿದ್ದೀರಿ. ನಿಮ್ಮ ಪಟ್ಟಿಯಲ್ಲಿ ನಮ್ಮ ಹೆಸರು ಎರಡನೆಯದಾಗಿದೆ. ಆದರೆ ಈಗ ನೀವು ನಮ್ಮ ಮೇಲೆ ಗುಂಡು ಹಾರಿಸುತ್ತಿದ್ದೀರಿ. ನಮಗೆ ವಾಪಸ್ ಹೋಗಲು ಬಿಡಿ,” ಎಂದು ಸಿಬ್ಬಂದಿ ಆತಂಕದಿಂದ ಹೇಳುತ್ತಿರುವುದು ಕೇಳಿಬಂದಿದೆ.
ಅಮೆರಿಕದ ಎನ್‌ಬಿಸಿ (NBC) ವರದಿಯ ಪ್ರಕಾರ, ಈ ಹಡಗು ಜಲಸಂಧಿಯ ಸುರಕ್ಷಿತ ಪ್ರದೇಶವಾದ ‘ಗ್ರೀನ್ ಏರಿಯಾ’ದಲ್ಲಿದ್ದರೂ ದಾಳಿ ನಡೆದಿದೆ.  ದಾಳಿಗೊಳಗಾದ ಮತ್ತೊಂದು ಹಡಗನ್ನು ‘ಜಗ್ ಅರ್ನವ್’ (Jag Arnav) ಎಂದು ಗುರುತಿಸಲಾಗಿದೆ.
ಇರಾನ್ ರಾಯಭಾರಿಗೆ ಭಾರತದ ಸಮನ್ಸ್
ಈ ಗಂಭೀರ ಘಟನೆಯನ್ನು ಖಂಡಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA), ನವದೆಹಲಿಯಲ್ಲಿರುವ ಇರಾನ್ ರಾಯಭಾರಿಗೆ ಸಮನ್ಸ್ ನೀಡಿದೆ. ವಿದೇಶಾಂಗ ಕಾರ್ಯದರ್ಶಿಗಳು ಭಾರತೀಯ ಹಡಗುಗಳ ಮತ್ತು ನಾವಿಕರ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಭಾರತಕ್ಕೆ ಬರುವ ಹಡಗುಗಳಿಗೆ ಇರಾನ್ ಸುಗಮ ದಾರಿ ಮಾಡಿಕೊಟ್ಟಿದ್ದನ್ನು ನೆನಪಿಸಿದ ಭಾರತ, ಇಂದಿನ ಘಟನೆಯ ಬಗ್ಗೆ ಇರಾನ್ ಸರ್ಕಾರಕ್ಕೆ ಕಟ್ಟುನಿಟ್ಟಿನ ಸಂದೇಶ ರವಾನಿಸುವಂತೆ ರಾಯಭಾರಿಗೆ ಸೂಚಿಸಿದೆ.
ನಿರ್ಧಾರ ಬದಲಿಸಿದ ಇರಾನ್: 
ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ವಾತಾವರಣದಿಂದಾಗಿ ಈ ಪ್ರದೇಶದಲ್ಲಿ ಭಾರೀ ಗೊಂದಲ ನಿರ್ಮಾಣವಾಗಿದೆ.
ಮೊದಲು ಜಲಸಂಧಿಯನ್ನು ಮುಕ್ತಗೊಳಿಸುವುದಾಗಿ ಹೇಳಿದ್ದ ಇರಾನ್, ಈಗ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಅಮೆರಿಕದ ದಿಗ್ಬಂಧನವು ಕದನ ವಿರಾಮದ ಉಲ್ಲಂಘನೆ ಎಂದು ಇರಾನ್ ಆರೋಪಿಸಿದೆ.
“ಹೋರ್ಮುಜ್ ಜಲಸಂಧಿಯ ನಿಯಂತ್ರಣ ಈಗ ಸಂಪೂರ್ಣವಾಗಿ ಸಶಸ್ತ್ರ ಪಡೆಗಳ ಕೈಯಲ್ಲಿದೆ. ಯಾರಾದರೂ ಇಲ್ಲಿಗೆ ಪ್ರವೇಶಿಸಿದರೆ ಅವರನ್ನು ಶತ್ರುಗಳ ಸಹಚರರು ಎಂದು ಪರಿಗಣಿಸಿ ದಾಳಿ ನಡೆಸಲಾಗುವುದು,” ಎಂದು ಇರಾನ್ ಗಾರ್ಡ್ಸ್ ಎಚ್ಚರಿಸಿದ್ದಾರೆ.
ಕಳೆದ ವಾರವಷ್ಟೇ ಭಾರತಕ್ಕೆ ಇರಾನ್ ರಾಯಭಾರಿ ನೀಡಿದ್ದ ಭರವಸೆಯಲ್ಲಿ, ಭಾರತೀಯ ಹಡಗುಗಳಿಗೆ ಮುಕ್ತ ಅವಕಾಶ ನೀಡುವುದಾಗಿ ಹೇಳಿದ್ದರು. ಆದರೆ ಭಾರತದ ಧ್ವಜ ಹೊಂದಿರುವ ಎರಡು ಹಡಗುಗಳ ಮೇಲೆ ದಾಳಿ ನಡೆದಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement