ಬ್ಯಾಂಕಿಂಗ್ ಭದ್ರತೆಗೆ ‘ಕ್ಲೋಡ್ ಮಿಥೋಸ್’ ಎಐ ಭೀತಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತುರ್ತು ಎಚ್ಚರಿಕೆ

ನವದೆಹಲಿ: ಆಂಥ್ರೋಪಿಕ್ (Anthropic) ಕಂಪನಿಯ ಅತ್ಯಾಧುನಿಕ ಎಐ ಮಡೆಲ್‌ ‘ಕ್ಲೋಡ್ ಮಿಥೋಸ್’ (Claude Mythos) ನಿಂದ ಉಂಟಾಗಬಹುದಾದ ಸೈಬರ್ ಭದ್ರತಾ ಅಪಾಯಗಳ ಕುರಿತು ಚರ್ಚಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ವಿವಿಧ ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿದರು. ಸೈಬರ್ ಸೆಕ್ಯೂರಿಟಿ ಕ್ಷೇತ್ರದಲ್ಲಿ ಇದುವರೆಗೆ ಲಭ್ಯವಿರುವ ಅತ್ಯಂತ ಶಕ್ತಿಶಾಲಿ ಎಐ ಮಾಡೆಲ್‌ ಎಂದು ‘ಮಿಥೋಸ್’ ಅನ್ನು ಗುರುತಿಸಲಾಗಿದೆ.
ಹಣಕಾಸು ಸಚಿವಾಲಯವು ತನ್ನ ಅಧಿಕೃತ ‘X’ ಖಾತೆಯಲ್ಲಿ ಸಭೆಯ ವಿವರಗಳನ್ನು ಹಂಚಿಕೊಂಡಿದ್ದು, ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕ್ಲೋಡ್ ಮಿಥೋಸ್‌ನಿಂದ ಎದುರಾಗಬಹುದಾದ ಸಂಭಾವ್ಯ ಪರಿಣಾಮಗಳ ಬಗ್ಗೆ ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿಸಿದೆ. ಮಿಥೋಸ್‌ನಿಂದ ಎದುರಾಗುವ ಬೆದರಿಕೆಯು “ಅಭೂತಪೂರ್ವವಾಗಿದ್ದು, ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳ ನಡುವೆ ಹೆಚ್ಚಿನ ಜಾಗರೂಕತೆ, ಸಿದ್ಧತೆ ಮತ್ತು ಉತ್ತಮ ಸಮನ್ವಯದ ಅಗತ್ಯವಿದೆ” ಎಂದು ಅವರು ಒತ್ತಿ ಹೇಳಿದ್ದಾರೆ. ಈ ಮಹತ್ವದ ಸಭೆಯಲ್ಲಿ ಐಟಿ ಸಚಿವ ಅಶ್ವಿನಿ ವೈಷ್ಣವ್ ಕೂಡ ಉಪಸ್ಥಿತರಿದ್ದರು.
ಏನಿದು ‘ಕ್ಲೋಡ್ ಮಿಥೋಸ್’? ಆತಂಕಕ್ಕೆ ಕಾರಣವೇನು?
‘ಕ್ಲೋಡ್ ಮಿಥೋಸ್’ ಆಂಥ್ರೋಪಿಕ್ ಕಂಪನಿಯ ಅತ್ಯಂತ ಶಕ್ತಿಶಾಲಿ ಕೃತಕ ಬುದ್ಧಿಮತ್ತೆ (AI)  ಮಾಡೆಲ್‌ ಆಗಿದೆ. ಇದು ಸೈಬರ್ ಭದ್ರತೆಯಲ್ಲಿ ಎಷ್ಟೊಂದು ಪ್ರವೀಣವಾಗಿದೆ ಎಂದರೆ, ಇದನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಕಂಪನಿಯೇ ಹೇಳಿಕೊಂಡಿದೆ.
ಮಾನವ ತಜ್ಞರ ಗಮನಕ್ಕೆ ಬಾರದ ಸಾವಿರಾರು ಸೈಬರ್ ಭದ್ರತಾ ಲೋಪಗಳನ್ನು ಮಿಥೋಸ್ ಪತ್ತೆಹಚ್ಚಿದೆ. ಪ್ರಮುಖ ಆಪರೇಟಿಂಗ್ ಸಿಸ್ಟಮ್‌ಗಳು ಮತ್ತು ವೆಬ್ ಬ್ರೌಸರ್‌ಗಳಲ್ಲಿನ 27 ವರ್ಷ ಹಳೆಯ ದೋಷಗಳನ್ನು ಸಹ ಇದು ಪತ್ತೆ ಮಾಡಿದೆ.
ಹ್ಯಾಕಿಂಗ್ ಆಯುಧವಾಗುವ ಭೀತಿ: 
ಇದನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ಸಾಮಾನ್ಯ ವ್ಯಕ್ತಿಯ ಕೈಗೆ ಅತ್ಯಾಧುನಿಕ ಹ್ಯಾಕಿಂಗ್ ತಂತ್ರಜ್ಞಾನವನ್ನು ನೀಡಿದಂತೆ ಎಂದು ಆಂಥ್ರೋಪಿಕ್ ಅಭಿಪ್ರಾಯಪಟ್ಟಿದೆ. ಅಂದರೆ, ಇದುವರೆಗೆ ಯಾರಿಗೂ ತಿಳಿಯದ ಭದ್ರತಾ ಲೋಪಗಳನ್ನು ಇದು ದುರುಪಯೋಗಪಡಿಸಿಕೊಳ್ಳಬಲ್ಲದು.
ಸದ್ಯ ಅಮೆಜಾನ್, ಮೈಕ್ರೋಸಾಫ್ಟ್ ಮತ್ತು ಗೂಗಲ್ ಸೇರಿದಂತೆ ಕೇವಲ 40 ಆಯ್ದ ಕಂಪನಿಗಳಿಗೆ ಮಾತ್ರ ಇದಕ್ಕೆ ಪ್ರವೇಶ ನೀಡಲಾಗಿದೆ. ಆದರೆ ಇತ್ತೀಚಿನ ವರದಿಗಳ ಪ್ರಕಾರ, ಅನಧಿಕೃತ ಗುಂಪುಗಳು ಈ ಮಾದರಿಯನ್ನು ಬಳಸಲು ಪ್ರವೇಶ ಪಡೆದಿದ್ದು, ಇದು ದೊಡ್ಡ ಆತಂಕಕ್ಕೆ ಕಾರಣವಾಗಿದೆ.
ಜಾಗತಿಕ ಮಟ್ಟದಲ್ಲಿ ಅಮೆರಿಕ ಸರ್ಕಾರ ಕೂಡ ಈ ಬಗ್ಗೆ ನಿಗಾ ಇಟ್ಟಿದ್ದು, ವಾಲ್ ಸ್ಟ್ರೀಟ್ ಬ್ಯಾಂಕುಗಳೊಂದಿಗೆ ಮಾತುಕತೆ ನಡೆಸಿದೆ. ಶ್ವೇತಭವನವು ತನ್ನ ಏಜೆನ್ಸಿಗಳ ಸೈಬರ್ ಭದ್ರತೆಯನ್ನು ಬಲಪಡಿಸಲು ಇದೇ ಮಿಥೋಸ್ ಅನ್ನು ಬಳಸಲು ಯೋಜಿಸುತ್ತಿದೆ.
https://x.com/FinMinIndia/status/2047345379667235043
ಸರ್ಕಾರದ ಮುಂದಿನ ಕ್ರಮಗಳೇನು?
ಕ್ಲೋಡ್ ಮಿಥೋಸ್‌ನಂತಹ ಶಕ್ತಿಶಾಲಿ ಎಐ ಮಾದರಿಯನ್ನು ಬಳಸಿಕೊಂಡು ಕಿಡಿಗೇಡಿಗಳು ಯಾವುದೇ ಸಂಸ್ಥೆ ಅಥವಾ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹ್ಯಾಕ್ ಮಾಡಬಹುದು ಎಂಬ ಭೀತಿ ಇದೆ. ಇದನ್ನು ಎದುರಿಸಲು ಭಾರತ ಸರ್ಕಾರವು ವಿಶೇಷ ‘ಫ್ರೇಮ್‌ವರ್ಕ್’ ಸಿದ್ಧಪಡಿಸಲು ಯೋಜಿಸುತ್ತಿದೆ.
ಬ್ಯಾಂಕುಗಳು ತಮ್ಮ ಐಟಿ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಗ್ರಾಹಕರ ದತ್ತಾಂಶವನ್ನು ರಕ್ಷಿಸಲು ತಕ್ಷಣದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೀತಾರಾಮನ್ ಸೂಚಿಸಿದ್ದಾರೆ.
ಬ್ಯಾಂಕುಗಳು, CERT-In (ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್) ಮತ್ತು ಇತರ ಏಜೆನ್ಸಿಗಳ ನಡುವೆ ಬೆದರಿಕೆಗಳ ಬಗ್ಗೆ ತಕ್ಷಣವೇ ಮಾಹಿತಿ ಹಂಚಿಕೊಳ್ಳಲು ಬಲವಾದ ವ್ಯವಸ್ಥೆಯನ್ನು ರೂಪಿಸಲು ಸಲಹೆ ನೀಡಲಾಗಿದೆ.
ಸಂಭಾವ್ಯ ಸೈಬರ್ ದಾಳಿಗಳಿಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಲು ಸಮನ್ವಯ ಸಾಂಸ್ಥಿಕ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುವಂತೆ ಭಾರತೀಯ ಬ್ಯಾಂಕುಗಳ ಸಂಘಕ್ಕೆ (IBA) ಸೂಚಿಸಲಾಗಿದೆ.
 .

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement