ಬೆಂಗಳೂರು: ರಾಜಕೀಯ ತಿರುವು ಪಡೆದು ಚರ್ಚೆಗೆ ಗ್ರಾಸವಾಗಿದ್ದ ಬೆಂಗಳೂರಿನ ನಗರ್ತಪೇಟೆಯ ಮೊಬೈಲ್ ಮಳಿಗೆ ಮಾಲೀಕನ ಮೇಲೆ ನಡೆಸಿದ್ದ ಹಲ್ಲೆ ಪ್ರಕರಣದಲ್ಲಿ ಈಗ ಹಲ್ಲೆಗೊಳಗಾಗಿದ್ದ ಮುಖೇಶ ಎಂಬವರ ವಿರುದ್ಧವೂ ಹಲಸೂರು ಗೇಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಗರ್ತಪೇಟೆಯ ಮೊಬೈಲ್ ಮಳಿಗೆ ಮಾಲೀಕ ಮುಖೇಶ ಧ್ವನಿವರ್ಧಕ ಶಬ್ದ ಕಡಿಮೆ ಮಾಡದ್ದಕ್ಕೆ ಆಕ್ಷೇಪಿಸಿ ನಾಲ್ವರು ಆತನ ಅಂಗಡಿಗೆ ನುಗ್ಗಿ ಮೇಲೆ ಹಲ್ಲೆ ನಡೆಸಿದ್ದರು. ಇದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿತ್ತು. ಘಟನೆ ಬಳಿಕ ಮುಖೇಶ ಅವರು, ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆನಡೆದಿದೆ ಎಂದು ಆರೋಪಿಸಿದ್ದರು. ಈ ಘಟನೆ ವಿವಾದ ಸ್ವರೂಪ ಪಡೆದು ಬಿಜೆಪಿ ಸಂಸದರು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇಡೀ ದಿನ ಧರಣಿ ನಡೆಸಿದ್ದರು. ಇದು ನಂತರ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಣ ವಾಗ್ಯುದ್ಧಕ್ಕೂ ಕಾರಣವಾಗಿತ್ತು.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಹಲ್ಲೆ ನಡೆಸಿದ್ದ ಆರೋಪಿಗಳಾದ ಸುಲೇಮಾನ್, ಶಹನವಾಜ್, ರೋಹಿತ್, ತರುಣ್ ಎಂಬವರನ್ನು ಬಂಧಿಸಿದ್ದರು.
ಆದರೆ ಆರೋಪಿ ಸುಲೇಮಾನ್ ತಾಯಿ ಇತ್ತೀಚೆಗೆ ಮುಖೇಶ ವಿರುದ್ಧವೂ ದೂರು ನೀಡಿದ್ದರು. ರಂಜಾನ್ ಪ್ರಾರ್ಥನೆ ಸಮಯದಲ್ಲಿ ಜೋರಾಗಿ ಧ್ವನಿವರ್ಧಕದಲ್ಲಿ ಹಾಡು ಹಾಕಿದ್ದ ಮುಖೇಶನನ್ನು ಭೇಟಿ ಮಾಡಿದ್ದ ಪುತ್ರ ಸುಲೇಮಾನ್ ಹಾಗೂ ಆತನ ಸ್ನೇಹಿತರು ಶಬ್ದ ಕಡಿಮೆ ಮಾಡುವಂತೆ ಮನವಿ ಮಾಡಿದ್ದರು. ಜನರಿಗೆ ಪ್ರಾರ್ಥನೆ ಸಲ್ಲಿಸಲು ತೊಂದರೆಯಾಗುತ್ತದೆ ಎಂದು ಹೇಳಿದ್ದರು. ಆದರೆ, ಆಗ ಮುಖೇಶ ಅವರ ಮೇಲೆಯೇ ಹಲ್ಲೆ ನಡೆಸಿದ್ದು, ಆತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದರು.
ಈ ದೂರಿನ ಅನ್ವಯ ಎನ್ಸಿಆರ್ ದಾಖಲಿಸಿದ ನಂತರ ಅದನ್ನು ನ್ಯಾಯಾಲಯಕ್ಕೆ ಕಳುಹಿಸಲಾಗಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಈಗ ಮುಖೇಶ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ