ಹಸೆಮಣೆ ಏರಿದ ಟೀಮ್ ಇಂಡಿಯಾ ಸ್ಪಿನ್ನರ್ ಕುಲದೀಪ ಯಾದವ್: ಮಸ್ಸೂರಿಯಲ್ಲಿ ಅದ್ದೂರಿ ವಿವಾಹ

ಟೀಮ್ ಇಂಡಿಯಾದ ಸ್ಪಿನ್ನರ್ ಕುಲದೀಪ ಯಾದವ್ ಅವರು ಶನಿವಾರ (ಮಾರ್ಚ್ 14) ಉತ್ತರಾಖಂಡದ ಮಸ್ಸೂರಿಯಲ್ಲಿ ತಮ್ಮ ಬಾಲ್ಯದ ಗೆಳತಿ ವಂಶಿಕಾ ಸಿಂಗ್ ಅವರನ್ನು ವಿವಾಹವಾಗಿದ್ದಾರೆ. 2026ರ ಟಿ20 ವಿಶ್ವಕಪ್‌ನಲ್ಲಿ ಯಶಸ್ಸಿನ ಬೆನ್ನಲ್ಲೇ ಕುಲದೀಪ ಯಾದವ್ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಕಾನ್ಪುರದ ಲಾಲ್ ಬಂಗಲೆ ನಿವಾಸಿಯಾದ ಕುಲದೀಪ ಮತ್ತು ಶ್ಯಾಮ್ ನಗರದ ನಿವಾಸಿಯಾದ ವಂಶಿಕಾ ಬಾಲ್ಯದ ಸ್ನೇಹಿತರು. ಇಬ್ಬರ ಮನೆಗಳ ನಡುವೆ ಕೇವಲ 3 ಕಿ.ಮೀ ಅಂತರವಿದ್ದು, ಇವರ ಸ್ನೇಹ ಈಗ ದಾಂಪತ್ಯಕ್ಕೆ ತಿರುಗಿದೆ. ವಂಶಿಕಾ ಸಿಂಗ್ ಅವರು ಭಾರತೀಯ ಜೀವ ವಿಮಾ ನಿಗಮದಲ್ಲಿ (LIC) ಉನ್ನತ ಅಧಿಕಾರಿಯಾಗಿದ್ದು, ಮೆಲ್ಬೋರ್ನ್‌ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಕುಲದೀಪ ಅವರ ಅಂಡರ್-19 ಕ್ರಿಕೆಟ್ ದಿನಗಳಿಂದಲೂ ಇವರು ಜೊತೆಯಾಗಿದ್ದಾರೆ.

2025ರ ಜೂನ್ 4ರಂದು ಲಕ್ನೋದಲ್ಲಿ ಇವರ ನಿಶ್ಚಿತಾರ್ಥ ನಡೆದಿತ್ತು. ಮಸ್ಸೂರಿಯ ರೆಸಾರ್ಟ್‌ನಲ್ಲಿ ನಡೆದ ಈ ಅದ್ದೂರಿ ಸಮಾರಂಭದಲ್ಲಿ ಕ್ರಿಕೆಟ್ ಲೋಕದ ಗಣ್ಯರು ಭಾಗವಹಿಸಿದ್ದರು.
ಕುಲದೀಪ ಅವರ ಆಪ್ತ ಗೆಳೆಯ ಯುಜ್ವೇಂದ್ರ ಚಾಹಲ್,  ತಿಲಕ ವರ್ಮಾ,  ರಿಂಕು ಸಿಂಗ್, ಕೋಚ್ ಟಿ. ದಿಲೀಪ ಸೇರಿದಂತೆ ಹಲವು ಕ್ರಿಕೆಟಿಗರು ಈ ಸಂಭ್ರಮಕ್ಕೆ ಸಾಕ್ಷಿಯಾದರು

ಢೋಲ್, ವಾದ್ಯಗೋಷ್ಠಿಗಳ ನಡುವೆ ನಡೆದ ಮದುವೆಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ನವಜೋಡಿಗೆ ಶುಭ ಹಾರೈಸುತ್ತಿದ್ದಾರೆ.
ಮಾರ್ಚ್ 17ರಂದು ಲಕ್ನೋದ ‘ಹೋಟೆಲ್ ಸೆಂಟ್ರಮ್’ನಲ್ಲಿ ಅದ್ದೂರಿ ಔತಣಕೂಟ ನಡೆಯಲಿದೆ. ಈ ಸಮಾರಂಭದಲ್ಲಿ ಕ್ರಿಕೆಟ್ ತಾರೆಯರು, ರಾಜಕಾರಣಿಗಳು ಹಾಗೂ ಗಣ್ಯ ಉದ್ಯಮಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement