ಕಟ್ಟಡ ನೆಲಸಮ ಕಾರ್ಯಾಚರಣೆ ತಡೆಯಲು ಸಾಧ್ಯವಿಲ್ಲ, ಆದರೆ ಅದು ಕಾನೂನಿನ ಪ್ರಕಾರವೇ ನಡೆಯಬೇಕು: ಉತ್ತರ ಪ್ರದೇಶ ಸರ್ಕಾರದ ಬುಲ್ಡೋಜರ್ ಕ್ರಮದ ಬಗ್ಗೆ ಸುಪ್ರೀಂಕೋರ್ಟ್‌

ನವದೆಹಲಿ: ಪ್ರವಾದಿ ಮುಹಮ್ಮದ್‌ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಅಮಾನತುಗೊಂಡ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದವರ ಕಟ್ಟಡಗಳನ್ನು ಅಕ್ರಮ ತೆರವು ಕಾರ್ಯಾಚರಣೆಯಡಿ ಧ್ವಂಸಗೊಳಿಸಿದ್ದನ್ನು ಪ್ರಶ್ನಿಸಿ ಜಮೀಯತ್‌ ಉಲಮಾ-ಎ-ಹಿಂದ್‌ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಗುರುವಾರ ಉತ್ತರ ಪ್ರದೇಶ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ.
ಯಾವುದೇ ಮಧ್ಯಂತರ ಆದೇಶ ನೀಡದ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿಕ್ರಮ್ ನಾಥ್ ಅವರಿದ್ದ ಪೀಠ ಮುಂದಿನ ವಿಚಾರಣೆಯವರೆಗೆ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿತು.
ಬುಲ್ಡೋಜರ್‌ಗಳನ್ನು ಬಳಸಿ ಕೆಡವಿದ್ದಕ್ಕೆ ಉತ್ತರ ಪ್ರದೇಶ ಸರ್ಕಾರದಿಂದ ಮೂರು ದಿನಗಳಲ್ಲಿ ಅಫಿಡವಿಟ್ ನೀಡುವಂತೆ ಸುಪ್ರೀಂ ಕೋರ್ಟ್ ಕೋರಿದೆ.

ಕಟ್ಟಡ ನೆಲಸಮ ಮಾಡುವುದನ್ನು ತಡೆಯಲಾಗದು. ಆದರೆ ಅಂತಹ ನೆಲಸಮ ಕಾರ್ಯಾಚರಣೆ ಕಾನೂನಿನ ಪ್ರಕಾರ ನಡೆದಿರಬೇಕು ಎಂದು ನ್ಯಾಯಾಲಯ ಹೇಳಿತು. “ನಾವು ನೆಲಸಮ ಕಾರ್ಯಾಚರಣೆಯನ್ನು ತಡೆಹಿಡಿಯಲು ಸಾಧ್ಯವಿಲ್ಲ ಆದರೆ ಕಾನೂನಿನ ಪ್ರಕಾರವೇ ಅದು ನಡೆಯಲಿ ಎಂದು ಹೇಳಬಹುದು” ಎಂದು ನ್ಯಾಯಾಲಯ ಹೇಳಿತು.
ಪ್ರತಿವಾದಿಗಳಿಗೆ ಆಕ್ಷೇಪಣೆ ಸಲ್ಲಿಸಲು ಸಮಯ ನೀಡಲಾಗಿದೆ. ಈ ಮಧ್ಯೆ ನಾವು ಅವರ (ಪ್ರತಿಭಟನೆಯಲ್ಲಿ ತೊಡಗಿದವರ) ಸುರಕ್ಷತೆ ಖಚಿತಪಡಿಸಿಕೊಳ್ಳಬೇಕು. ಅವರು ಕೂಡ ಸಮಾಜದ ಒಂದು ಭಾಗ ಎಂಬ ಬಗ್ಗೆ ಸ್ಪಷ್ಟತೆ ಇರಲಿ. ಯಾರಿಗಾದರೂ ಕುಂದುಕೊರತೆ ಎದುರಾದಾಗ ಅದನ್ನು ಪರಿಹರಿಸಿಕೊಳ್ಳಲು ಅವರಿಗೆ ಹಕ್ಕಿದೆ” ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿತು.

ಪ್ರಮುಖ ಸುದ್ದಿ :-   ಭಾರತದ ಆಕಾಶದಲ್ಲಿಲ್ಲ ಮಳೆ ತರುವ ಮೋಡಗಳು ; ಆತಂಕಕಾರಿ ವಾಸ್ತವ ಬಿಂಬಿಸಿದ 3 ಉಪಗ್ರಹಗಳ ಚಿತ್ರಗಳು ; ಇದಕ್ಕೆ ಕಾರಣಗಳೇನು?

ʼತೆರವು ಕಾರ್ಯಾಚರಣೆ ವೇಳೆ ಉತ್ತರಪ್ರದೇಶಕ್ಕೆ ಸಂಬಂಧಿಸಿದ ವಿವಿಧ ಕಾನೂನುಗಳನ್ನು ಉಲ್ಲಂಘಿಸಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ಆರಂಭಿಸಿರುವ ತೆರವು ಕಾರ್ಯಾಚರಣೆಯನ್ನು ಮುಂದುವರೆಸುವಂತೆ ಅಧಿಕಾರಿಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿಗಳು ನಿರ್ದೇಶನ ನೀಡಿರುವುದು ಗಮನಿಸಬೇಕಾದ ಸಂಗತಿʼ ಎಂದು ಜಮೀಯತ್ ಉಲಮಾ ಎ ಹಿಂದ್‌ ನ್ಯಾಯಾಲಯದ ಮೊರೆ ಹೋಗಿತ್ತು.
ಸರ್ಕಾರವು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಅದರ ಸದಸ್ಯರ ಆಸ್ತಿಗಳನ್ನು ಬುಲ್ಡೋಜರ್ ಮಾಡುತ್ತಿದೆ ಎಂದು ಆರೋಪಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಕೆಡಹುವ ಮುನ್ನ ತಮಗೆ ಯಾವುದೇ ನೋಟಿಸ್ ನೀಡಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿ ಸಿ ಯು ಸಿಂಗ್‌, ಉತ್ತರ ಪ್ರದೇಶ ಸರ್ಕಾರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮತ್ತು ಹಿರಿಯ ನ್ಯಾಯವಾದಿ ಹರೀಶ್‌ ಸಾಳ್ವೆ ವಾದ ಮಂಡಿಸಿದರು.
ಮುಂದಿನ ವಿಚಾರಣೆಯ ದಿನಾಂಕದೊಳಗೆ ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ತಮ್ಮ ನಿಲುವುಗಳನ್ನು ಅಫಿಡವಿಟ್‌ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement