ಜಾಮೀನಿನ ಬಳಿಕ ಪೋಕ್ಸೋ ಆರೋಪಿಯಿಂದ ಭೀಕರ ಪ್ರತೀಕಾರ : ಪತ್ನಿ, ಮಕ್ಕಳು, ಅತ್ಯಾಚಾರ ಸಂತ್ರಸ್ತೆ-ಆಕೆಯ ಕುಟುಂಬದ ಹತ್ಯೆ

ಹೈದರಾಬಾದ್‌ : ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯಲ್ಲಿ, ಅತ್ಯಾಚಾರ ಆರೋಪ ಎದುರಿಸುತ್ತಿದ್ದ 35 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆಗೈದು, ಬಳಿಕ ತನ್ನ ವಿರುದ್ಧ ಪೋಕ್ಸೋ (POCSO) ಪ್ರಕರಣ ದಾಖಲಿಸಿದ್ದ 17 ವರ್ಷದ ಅಪ್ರಾಪ್ತ ಹುಡುಗಿ ಹಾಗೂ ಆಕೆಯ ತಾಯಿ ಮತ್ತು ಅಜ್ಜಿಯನ್ನೂ ಹತ್ಯೆಗೈದಿರುವ ಘಟನೆ ನಡೆದಿದೆ.
ಆರೋಪಿ ರಾಜಕುಮಾರ ಎಂಬಾತ ಶುಕ್ರವಾರ-ಶನಿವಾರ ಮಧ್ಯರಾತ್ರಿ ವೇಳೆಗೆ ಶಾಬಾದ್‌ನಲ್ಲಿರುವ ತನ್ನ ನಿವಾಸದಲ್ಲಿ ಮೊದಲಿಗೆ 30 ವರ್ಷದ ಪತ್ನಿ ಪಾರ್ವತಿ ಸರಿತಾ ಹಾಗೂ ನಾಲ್ಕು ವರ್ಷದ ಮಗ ಮತ್ತು 18 ತಿಂಗಳ ಮತ್ತೊಬ್ಬ ಮಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಬಳಿಕ ಅಲ್ಲಿಂದ ಸುಮಾರು ಆರು ಕಿಲೋಮೀಟರ್ ದೂರದ ಮತ್ತೊಂದು ಗ್ರಾಮಕ್ಕೆ ತೆರಳಿದ ರಾಜಕುಮಾರ, ತನ್ನ ವಿರುದ್ಧ ಮೇ 16ರಂದು ಪೋಕ್ಸೊ (POCSO) ಅಡಿಯಲ್ಲಿ ದೂರು ದಾಖಲಿಸಿದ್ದ 17 ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ್ದಾನೆ. ಅಲ್ಲದೆ, ಬಾಲಕಿಯ ತಾಯಿ ಮತ್ತು ತಾಯಿಯ ತಾಯಿಯನ್ನೂ (ಅಜ್ಜಿ) ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ಈ ಭೀಕರ ಕೃತ್ಯಗಳ ಬಳಿಕ ರಾಜಕುಮಾರ ತನ್ನ ತಂದೆಗೆ ಕರೆ ಮಾಡಿ ತಾನು ಈ ಕೊಲೆಗಳನ್ನು ಮಾಡಿರುವುದಾಗಿ ತಿಳಿಸಿ, ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಕುರಿತು ಪ್ರತಿಕ್ರಿಯಿಸಿದ ಫ್ಯೂಚರ್ ಸಿಟಿ ಪೊಲೀಸ್ ಆಯುಕ್ತರು, “ಪ್ರಾಥಮಿಕ ತನಿಖೆಯ ಪ್ರಕಾರ ಆರೋಪಿ ರಾತ್ರಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಈ ಕೊಲೆಗಳನ್ನು ಎಸಗಿದ್ದಾನೆ. ಕೊಲೆಗಳ ನಂತರ ತನ್ನ ತಂದೆಗೆ ಕರೆ ಮಾಡಿ ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಾನೆ” ಎಂದು ತಿಳಿಸಿದ್ದಾರೆ.
“ಆರೋಪಿ ಸದ್ಯ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಕೆಲವು ಪ್ರಮುಖ ಸುಳಿವುಗಳು ಲಭ್ಯವಾಗಿವೆ. ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು” ಎಂದು ಅವರು ಹೇಳಿದ್ದಾರೆ.
ರಾಜಕುಮಾರಮತ್ತು ಪಾರ್ವತಿ ಅವರು 2018ರಲ್ಲಿ ಪ್ರೇಮ ವಿವಾಹವಾಗಿದ್ದರು. ಮದುವೆಯ ನಂತರ ಕೆಲಕಾಲ ಗ್ರಾಮದಿಂದ ಹೊರಗೆ ವಾಸಿಸಿದ್ದ ದಂಪತಿ, ಬಳಿಕ ಶಾಬಾದ್ ಹಾಗೂ ದೇವಲಗೂಡದಲ್ಲಿ ತಾವು ಹೊಂದಿದ್ದ ಮನೆಗಳಲ್ಲಿ ನೆಲೆಸಿದ್ದರು.
ದಂಪತಿಗೆ ಮೂರು ಮಕ್ಕಳು ಜನಿಸಿದ್ದರು. ಮೊದಲ ಮಗಳು ಶಿಶು ಅವಸ್ಥೆಯಲ್ಲಿಯೇ ಮೃತಪಟ್ಟಿದ್ದು, ನಂತರ ಇಬ್ಬರು ಗಂಡು ಮಕ್ಕಳು ಜನಿಸಿದ್ದರು.
ಮೇ 16ರಂದು 17 ವರ್ಷದ ಬಾಲಕಿ ರಾಜಕುಮಾರ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು. ಬಳಿಕ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿ, ಕೊಲೆಗಳು ನಡೆಯುವ ಕೆಲವೇ ಹಿಂದೆಯಷ್ಟೇ ಮನೆಗೆ ಮರಳಿದ್ದ ಎನ್ನಲಾಗಿದೆ.
ಕುಟುಂಬದ ಸದಸ್ಯರ ಪ್ರಕಾರ, ಘಟನೆಗೆ ಮುನ್ನ ಯಾವುದೇ ಗಂಭೀರ ಕುಟುಂಬ ಕಲಹಗಳಿರಲಿಲ್ಲ. ಘಟನೆ ನಡೆದ ಹಿಂದಿನ ಸಂಜೆ ಕೂಡ ಪಾರ್ವತಿ ತನ್ನ ಸಂಬಂಧಿಕರೊಂದಿಗೆ ಎಂದಿನಂತೆ ಸಹಜವಾಗಿ ಮಾತನಾಡಿದ್ದಳು ಎಂದು ಅವರು ತಿಳಿಸಿದ್ದಾರೆ.
ಘಟನಾ ಸ್ಥಳಗಳಿಗೆ ವಿಧಿವಿಜ್ಞಾನ (ಫೊರೆನ್ಸಿಕ್) ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪೊಲೀಸರು ಸದ್ಯ ಘಟನೆಗಳ ಸಂಪೂರ್ಣ ಕ್ರಮವನ್ನು ಮರುಜೋಡಿಸಿ, ಈ ಸಾಮೂಹಿಕ ಹತ್ಯೆಯ ಹಿಂದಿನ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement