ಮುಂಬೈ: ವಿಮಾನ ನಿಲ್ದಾಣದಿಂದ ಕೇವಲ 400 ಮೀಟರ್ ದೂರದಲ್ಲಿರುವ ಹೋಟೆಲ್ಗೆ ಕರೆದೊಯ್ಯಲು ಅಮೆರಿಕದ ಪ್ರಜೆಯೊಬ್ಬರಿಂದ ಬರೋಬ್ಬರಿ 18,000 ರೂಪಾಯಿ ($200) ವಸೂಲಿ ಮಾಡಿದ್ದ ಟ್ಯಾಕ್ಸಿ ಚಾಲಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಜನವರಿ 12 ರಂದು ಈ ಘಟನೆ ನಡೆದಿದ್ದು, ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್-2ಕ್ಕೆ ಬಂದಿಳಿದ ಅಮೆರಿಕದ ಮಹಿಳೆಯೊಬ್ಬರು ಹತ್ತಿರದ ‘ಹಿಲ್ಟನ್ ಹೋಟೆಲ್’ಗೆ ಹೋಗಲು ಟ್ಯಾಕ್ಸಿ ಏರಿದ್ದರು. ಆಕೆಯ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡ ಚಾಲಕ ದೇಶರಾಜ ಯಾದವ್ (50) ಮತ್ತು ಆತನ ಸಹಚರ, ಹೋಟೆಲ್ ಪಕ್ಕದಲ್ಲೇ ಇದ್ದರೂ ಆಕೆಯನ್ನು 20 ನಿಮಿಷಗಳ ಕಾಲ ಸುತ್ತಾಡಿಸಿದ್ದಾರೆ. ನಂತರ ಹೋಟೆಲ್ ತಲುಪಿಸಿ ಆಕೆಯಿಂದ 18,000 ರೂಪಾಯಿ ಬಾಡಿಗೆ ಪಡೆದುಕೊಂಡಿದ್ದಾರೆ…!
ಘಟನೆಯ ಕುರಿತು ಸಂತ್ರಸ್ತ ಮಹಿಳೆ ಜನವರಿ 26 ರಂದು ‘X’ (ಟ್ವಿಟರ್) ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. “ಕೇವಲ 400 ಮೀಟರ್ ದೂರಕ್ಕೆ 200 ಡಾಲರ್ ಹಣ ಪಡೆದಿದ್ದಾರೆ” ಎಂದು ಟ್ಯಾಕ್ಸಿ ನಂಬರ್ ಸಮೇತ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಟ್ಯಾಕ್ಸಿ ಮಾಫಿಯಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
“ಇದು ಮಹಾರಾಷ್ಟ್ರ ಮತ್ತು ಭಾರತದ ಪ್ರವಾಸೋದ್ಯಮಕ್ಕೆ ಕಪ್ಪು ಚುಕ್ಕೆ. ಇಂತಹ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ” ಎಂದು ನೆಟ್ಟಿಗರು ಆಗ್ರಹಿಸಿದ್ದರು.
ಪೊಲೀಸರ ಸ್ವಯಂಪ್ರೇರಿತ ಕ್ರಮ
ಸಾಮಾಜಿಕ ಜಾಲತಾಣದಲ್ಲಿ ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಸಹಾರ್ ಪೊಲೀಸರು ಜನವರಿ 27 ರಂದು ಸ್ವಯಂಪ್ರೇರಿತವಾಗಿ (Suo Motu) ಎಫ್ಐಆರ್ ದಾಖಲಿಸಿಕೊಂಡರು. ತನಿಖೆ ನಡೆಸಿದ ಪೊಲೀಸರು ಈಗ ಆರೋಪಿ ಚಾಲಕ ದೇಶರಾಜ ಯಾದವನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ವಿದೇಶಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆಯುವ ಇಂತಹ ವಂಚನೆಗಳು ದೇಶದ ಗೌರವಕ್ಕೆ ಧಕ್ಕೆ ತರುತ್ತವೆ ಎಂಬ ಕಾರಣಕ್ಕೆ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ