ದುಬೈ:ದುಬೈ ಏರ್ ಶೋ(Dubai Air Show)ದಲ್ಲಿ ಪ್ರದರ್ಶನ ನೀಡುತ್ತಿದ್ದಾಗ ಟೇಜಸ್ ಯುದ್ಧ ವಿಮಾನ ಅಪಘಾತದಲ್ಲಿ ಹುತಾತ್ಮರಾದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ನಮಾಂಶ ಸ್ಯಾಲ್ ಅವರಿಗೆ ಗೌರವ ಸಲ್ಲಿಸಲು ‘ರಷ್ಯನ್ ನೈಟ್ಸ್’ (Russian Knights) ಏರೋಬ್ಯಾಟಿಕ್ಸ್ ತಂಡವು ‘ಮಿಸ್ಸಿಂಗ್ ಮ್ಯಾನ್’ (Missing Man) ವಾಯು ಪ್ರದರ್ಶನವನ್ನು ನೀಡಿ ಗೌರವ ಸಲ್ಲಿಸಿದೆ.
ಕಳೆದ ಶುಕ್ರವಾರ, ಟೇಜಸ್ ಯುದ್ಧ ವಿಮಾನವು ಕಡಿಮೆ ಎತ್ತರದಲ್ಲಿ ‘ನೆಗೆಟಿವ್ ಜಿ’ ತಿರುವು ತೆಗೆದುಕೊಳ್ಳುವಾಗ ಪತನಗೊಂಡು ಪೈಲಟ್ ಸ್ಯಾಲ್ ಮೃತಪಟ್ಟಿದ್ದರು.
ರಷ್ಯಾದ ಸಾಮಾಜಿಕ ಮಾಧ್ಯಮ ವೇದಿಕೆ ವಿಕೆ (VK) ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ರಷ್ಯನ್ ನೈಟ್ಸ್ ತಂಡವು ತೇಜಸ್ ಅಪಘಾತವನ್ನು “ವಿವರಿಸಲು ಅಸಾಧ್ಯ” ಎಂದು ಕರೆದಿದ್ದು, ವಿಮಾನ ಪ್ರದರ್ಶನದ ಕೊನೆಯ ದಿನದ ತಮ್ಮ ವೈಮಾನಿಕ ಪ್ರದರ್ಶನವು “ಕೊನೆಯ ಹಾರಾಟದಿಂದ ಮರಳದ ಸಹೋದರನ ಸ್ಮರಣಾರ್ಥ”ವಾಗಿತ್ತು ಎಂದು ಹೇಳಿದೆ.
ಅಮೆರಿಕಾದ ಪೈಲಟ್‌ನಿಂದ ಗೌರವ
ಅಮೆರಿಕಾದ ಏರೋಬ್ಯಾಟಿಕ್ ಪೈಲಟ್ ಟೇಲರ್ “ಫೆಮಾ” ಹೈಸ್ಟರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಸ್ಯಾಲ್ ಅವರಿಗೆ ಗೌರವ ಸೂಚಕವಾಗಿ ಏರ್ ಶೋನ ಎರಡನೇ ದಿನದಂದು ತಮ್ಮ ಅಂತಿಮ ಪ್ರದರ್ಶನದಿಂದ ಹೊರಗುಳಿದಿರುವುದಾಗಿ ತಿಳಿಸಿದ್ದಾರೆ.
“ಎರಡು ವರ್ಷಗಳ ಕಾಲ ಈ ಕೆಲಸ ಮಾಡಿದ ನಂತರ, ಇದು ನಮ್ಮ ತಂಡಕ್ಕೆ ಮೊದಲು. ಇದು ನಮ್ಮ ಸೀಸನ್‌ನ ಅಂತಿಮ ಪ್ರದರ್ಶನಕ್ಕೆ ಮೊದಲು ಸಂಭವಿಸಿತು. ನಾವು ಒಟ್ಟಾಗಿ ಮತ್ತು ವೈಯಕ್ತಿಕವಾಗಿ ದೂರದಿಂದಲೇ ದುರಂತದ ನಂತರದ ಘಟನೆಗಳನ್ನು ಮೌನವಾಗಿ ನೋಡುತ್ತಿದ್ದೆವು. ವಿಮಾನ ನಿಲ್ದಾಣದಲ್ಲಿ ಖಾಲಿ ನಿಲುಗಡೆಯ ಸ್ಥಳದ ಪಕ್ಕದಲ್ಲಿ ನಿಂತಿರುವ ಭಾರತೀಯ ನಿರ್ವಹಣಾ ಸಿಬ್ಬಂದಿ, ನೆಲದ ಮೇಲೆ ಬಿದ್ದಿರುವ ವಿಮಾನದ ಏಣಿ, ಪೈಲಟ್‌ನ ವಸ್ತುಗಳು ಇನ್ನೂ ಅವರ ಬಾಡಿಗೆ ಕಾರಿನಲ್ಲಿಯೇ ಇರುವುದು, ಇವೆಲ್ಲವನ್ನೂ ನೋಡುತ್ತಿದ್ದೆವು. ನಮ್ಮಲ್ಲಿ ಪ್ರತಿಯೊಬ್ಬರೂ ಕೇವಲ ಒಂದು ಕ್ಷಣದಲ್ಲಿ ಬಂದ ಅವರ ಹೊಸ ವಾಸ್ತವತೆಯ ಬಗ್ಗೆ ಯೋಚಿಸಿದ್ದೆವು ಎಂದು ಅವರು ಹೇಳಿದ್ದಾರೆ.
ಅಪಘಾತದ ನಂತರವೂ ಸ್ಥಳದಲ್ಲಿ “ಪ್ರದರ್ಶನ ಮುಂದುವರೆಯಲೇಬೇಕು” ಎಂಬ ಸಾಮಾನ್ಯತೆಯ ಭಾವನೆ ಇದ್ದಿದ್ದು ತೀವ್ರ ನೋವುಂಟು ಮಾಡಿತು ಎಂದು ಹೈಸ್ಟರ್ ಹೇಳಿದ್ದಾರೆ.
ಪೂರ್ಣ ಮಿಲಿಟರಿ ಗೌರವದೊಂದಿಗೆ ಅಂತ್ಯಕ್ರಿಯೆ
ಹುತಾತ್ಮ ವಿಂಗ್ ಕಮಾಂಡರ್ ಸ್ಯಾಲ್ ಅವರ ಪಾರ್ಥಿವ ಶರೀರವನ್ನು ತಮಿಳುನಾಡಿನ ಸುಲೂರ್ ವಾಯುಪಡೆ ನೆಲೆಯಲ್ಲಿ ಪೂರ್ಣ ಮಿಲಿಟರಿ ಗೌರವಗಳೊಂದಿಗೆ ಸ್ವೀಕರಿಸಲಾಯಿತು. ಭಾನುವಾರ ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯಲ್ಲಿರುವ ಅವರ ಪೂರ್ವಿಕರ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಭಾರತೀಯ ವಾಯುಪಡೆ (IAF) ನೀಡಿರುವ ಹೇಳಿಕೆಯಲ್ಲಿ, ವಿಂಗ್ ಕಮಾಂಡರ್ ಸ್ಯಾಲ್ ಅವರು “ಸಮರ್ಪಣಾ ಮನೋಭಾವದ ಫೈಟರ್ ಪೈಲಟ್” ಆಗಿದ್ದರು. ಅವರು ಅಚಲ ಬದ್ಧತೆ, ಅಸಾಧಾರಣ ಕೌಶಲ್ಯ ಮತ್ತು ಅಚಲವಾದ ಕರ್ತವ್ಯ ಪ್ರಜ್ಞೆಯೊಂದಿಗೆ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ವೃತ್ತಿಪರರು ಎಂದು ಬಣ್ಣಿಸಿದೆ.
ಶುಕ್ರವಾರದ ಅಪಘಾತವು, ದೇಶೀಯವಾಗಿ ನಿರ್ಮಿಸಲಾದ ಲಘು ಯುದ್ಧ ವಿಮಾನ (LCA) ತೇಜಸ್ ಒಳಗೊಂಡ ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಸಂಭವಿಸಿದ ಎರಡನೇ ಅಪಘಾತವಾಗಿದೆ. ಮಾರ್ಚ್ 12, 2024 ರಂದು, ತೇಜಸ್ ವಿಮಾನವು ಪೋಖ್ರಾನ್ ಮರುಭೂಮಿಯಲ್ಲಿ ನಡೆದ ತ್ರಿ-ಸೇವೆಗಳ ಮಿಲಿಟರಿ ಕಸರತ್ತು ‘ಭಾರತ ಶಕ್ತಿ’ ಪ್ರದಶರ್ನದಿಂದ ಹಿಂತಿರುಗುತ್ತಿದ್ದಾಗ ಜೈಸಲ್ಮೇರ್‌ನ ವಸತಿ ಕಾಲೋನಿ ಬಳಿ ಪತನಗೊಂಡಿತ್ತು. 2001 ರಲ್ಲಿ ಹಾರಾಟ ಆರಂಭಿಸಿದ ನಂತರ ಸ್ವದೇಶಿ ನಿರ್ಮಿತ ಜೆಟ್ ಒಳಗೊಂಡ ಮೊದಲ ಅಪಘಾತ ಇದಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ