ಲಾಲು ಪ್ರಸಾದ ಮನೆಯಲ್ಲಿ ಒಡಕು ತೀವ್ರ : ರೋಹಿಣಿ ಬೆನ್ನಲ್ಲೇ ಪಾಟ್ನಾ ಮನೆ ತೊರೆದ ಮತ್ತೆ ಮೂವರು ಪುತ್ರಿಯರು…!

ರೋಹಿಣಿ ಆಚಾರ್ಯ ಅವರ ಆಘಾತಕಾರಿ ಬಹಿರಂಗ ಹೇಳಿಕೆ ಮತ್ತು ಕುಟುಂಬದ ಜೊತೆ ಸಂಬಂಧ ಕಡಿದುಕೊಳ್ಳುವ ನಿರ್ಧಾರದ ಒಂದು ದಿನದ ನಂತರ, ಲಾಲು ಪ್ರಸಾದ ಯಾದವ್ ಅವರ ಮನೆಯೊಳಗಿನ ಬಿಕ್ಕಟ್ಟು ಭಾನುವಾರ ಇನ್ನಷ್ಟು ತೀವ್ರಗೊಂಡಿದೆ.
ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥರಾದ ಲಾಲು ಪ್ರಸಾದ ಯಾದವ್‌ ಅವರ ಇತರ ಮೂವರು ಪುತ್ರಿಯರಾದ ರಾಜಲಕ್ಷ್ಮಿ, ರಾಗಿಣಿ ಮತ್ತು ಚಂದಾ ಅವರು ತಮ್ಮ ಮಕ್ಕಳೊಂದಿಗೆ ಲಾಲು ಕುಟುಂಬದ ಪಾಟ್ನಾ ನಿವಾಸವನ್ನು ತೊರೆದು ದೆಹಲಿಗೆ ಪ್ರಯಾಣಿಸಿದ್ದಾರೆ ಎಂದು ವರದಿಯಾಗಿದೆ. ಇದು ಬಿಹಾರದ ಅತ್ಯಂತ ಪ್ರಭಾವಿ ರಾಜಕೀಯ ಕುಟುಂಬದೊಳಗೆ ದೊಡ್ಡ ಬಿರುಕುಂಟಾಗಿರುವ ಸೂಚನೆಯಾಗಿದೆ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ತೀವ್ರ ಮುಖಭಂಗ ಅನುಭವಿಸಿದ ನಂತರ ಆರ್‌ಜೆಡಿ ಆಂತರಿಕ ಕಲಹದಿಂದ ನಲುಗಿದೆ. 75 ಸ್ಥಾನಗಳಿಂದ ಕೇವಲ 25 ಸ್ಥಾನಗಳಿಗೆ ಕುಸಿದಿರುವ ಪಕ್ಷದೊಳಗೆ ಒಂದು ವಾರದಿಂದ ರಾಜಕೀಯ ಮತ್ತು ವೈಯಕ್ತಿಕ ಸಂಘರ್ಷಗಳು ಹೆಚ್ಚುತ್ತಿವೆ.

‘ನನಗೆ ನಿಂದನೆ ಮಾಡಲಾಯಿತು’ ; ರೋಹಿಣಿ ಆರೋಪ
ಚುನಾವಣಾ ಸೋಲಿನ ಕೆಲವೇ ಗಂಟೆಗಳ ನಂತರ, ಲಾಲು ಪ್ರಸಾದ ಯಾದವ್‌ ಅವರ ಪುತ್ರಿ ಮತ್ತು ವೈದ್ಯೆಯಾಗಿರುವ ರೋಹಿಣಿ ಆಚಾರ್ಯ ಅವರು ರಾಜಕೀಯವನ್ನು ತ್ಯಜಿಸುವುದಾಗಿ ಹಾಗೂ ತಮ್ಮ ಕುಟುಂಬದ ಜೊತೆಗಿನ ಸಂಬಂಧ ಕಡಿದುಕೊಳ್ಳುವುದಾಗಿ ಘೋಷಿಸಿದಾಗ ಈ ಆಂತರಿಕ ಸಂಘರ್ಷ ಪ್ರಾರಂಭವಾಯಿತು.
ಭಾವನಾತ್ಮಕ ಪೋಸ್ಟ್‌ಗಳ ಸರಣಿಯಲ್ಲಿ, ತನಗೆ ಕೆಟ್ಟ ಶಬ್ದಗಳಿಂದ ನಿಂದನೆ ಮಾಡಲಾಗಿದೆ ಎಂದು ರೋಹಿಣಿ ಆರೋಪಿಸಿದ್ದಾರೆ. ತೇಜಸ್ವಿ ಯಾದವ್ ಅವರ ಇಬ್ಬರು ಆಪ್ತ ಸಹಾಯಕರಾದ ಆರ್‌ಜೆಡಿ ರಾಜ್ಯಸಭಾ ಸಂಸದ ಸಂಜಯ ಯಾದವ್ ಮತ್ತು ದೀರ್ಘಕಾಲದ ಸಹವರ್ತಿ ರಮೀಜ್‌ ಜೊತೆಗೆ ನಡೆದ ಸಂಘರ್ಷದ ಸಮಯದಲ್ಲಿ ಯಾರೋ ಒಬ್ಬರು ಚಪ್ಪಲಿಯಿಂದ ಹೊಡೆಯಲು ಪ್ರಯತ್ನಿಸಿದರು ಎಂದೂ ಅವರು ಹೇಳಿದ್ದಾರೆ.
ತಾನು “ಕುಟುಂಬದಿಂದ ದೂರವಾದೆ”, ತನ್ನ ತಂದೆ-ತಾಯಿಯನ್ನು “ಅಳಿಸುತ್ತಾ” ಬಿಟ್ಟು ಹೋದೆ ಎಂದು ಬರೆದಿರುವ ಅವರು, ಲಾಲು ಯಾದವ್ ಅವರಿಗೆ ಕಿಡ್ನಿ ದಾನ ಮಾಡಿದ ನಂತರ “ಕೋಟಿಗಟ್ಟಲೆ ಹಣ ತೆಗೆದುಕೊಂಡಿದ್ದೀಯಾ” ಎಂದು ಆರೋಪಿಸಲಾಗಿದೆ. ಇದು ತನಗೆ ಆದ ತೀವ್ರ ಅವಮಾನ ಎಂದೂ ಅವರು ಕರೆದಿದ್ದಾರೆ.

ಪ್ರಮುಖ ಸುದ್ದಿ :-   ಪಾಕ್ ಯುದ್ಧವಿಮಾನ ಹೊಡೆದುರುಳಿಸಿದ್ದ ಅಭಿನಂದನ್ ವಾಯುಪಡೆಯಿಂದ ನಿವೃತ್ತಿ: ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರ್ಪಡೆ ; ವರದಿ

ಮತ್ತೊಂದು ಪೋಸ್ಟ್‌ನಲ್ಲಿ, “ಸಂಜಯ ಯಾದವ್ ಮತ್ತು ರಮೇಶ್ ಅವರು ನನಗೆ ಹೀಗೆ ಮಾಡಲು ಹೇಳಿದರು, ಮತ್ತು ನಾನು ಎಲ್ಲಾ ದೂಷಣೆಗಳನ್ನು ಹೊರುತ್ತೇನೆ” ಎಂದು ರೋಹಿಣಿ ಹೇಳಿದ್ದಾರೆ. ಇದುವರೆಗೆ, ಯಾವುದೇ ಸಹಾಯಕರು ಇದಕ್ಕೆ ಪ್ರತಿಕ್ರಿಯಿಸಿಲ್ಲ. ಇದು ತೇಜಸ್ವಿ ಸುತ್ತಲಿನ ಆಂತರಿಕ ಅಧಿಕಾರದ ಹೋರಾಟದ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ. ಕಳೆದ ವರ್ಷ ಸರಣ್ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದ ರೋಹಿಣಿ ಅವರನ್ನು ಸಾಮಾನ್ಯವಾಗಿ ಕುಟುಂಬದ ಭಾವನಾತ್ಮಕ ಆಸರೆಯೆಂದು ಪರಿಗಣಿಸಲಾಗಿತ್ತು. ಅವರ ರಾಜಕೀಯ ಮತ್ತು ಕುಟುಂಬದಿಂದ ದಿಢೀರ್ ನಿರ್ಗಮನವು ಆರ್‌ಜೆಡಿಯ ಚುನಾವಣಾ ಹಿನ್ನಡೆಯ ಆಘಾತವನ್ನು ಮತ್ತಷ್ಟು ಹೆಚ್ಚಿಸಿದೆ.
ಇದರ ನಡುವೆ, ಲಾಲು ಪುತ್ರಿಯರಾದ ರಾಜಲಕ್ಷ್ಮಿ, ರಾಗಿಣಿ ಮತ್ತು ಚಂದಾ ಭಾನುವಾರ ಮುಂಜಾನೆ ಲಾಲು ಮತ್ತು ರಾಬ್ರಿ ದೇವಿ ಅವರ ನಿವಾಸವನ್ನು ತೊರೆದರು. ಕಳೆದ ಎರಡು ದಿನಗಳ ಘಟನೆಗಳಿಂದ ಅವರು ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ತೆಲಂಗಾಣ ಕಾಂಗ್ರೆಸ್‌ನಲ್ಲಿ ಬಿರುಗಾಳಿ : ಮಗಳ ಮಾತಿಗೆ ತಾಯಿಯ ಸಚಿವ ಸ್ಥಾನಕ್ಕೆ ಕುತ್ತು: ರೇವಂತ ರೆಡ್ಡಿ ಸಂಪುಟದಿಂದ ದಿಢೀರ್ ವಜಾ !

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement