ಬೆಂಗಳೂರು : ಬೆಂಗಳೂರಿನಲ್ಲಿ ಐಎಎಫ್ ಅಧಿಕಾರಿ ಮೇಲೆ ಕನ್ನಡಿಗ ಹಲ್ಲೆ ಮಾಡಿದ್ದ ಎಂದು ಆರೋಪಿಸಲಾದ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ಬೈಕ್ ಸವಾರನ ಮೇಲೆ ವಿಂಗ್ ಕಮಾಂಡರ್ ಮಾರಣಾಂತಿಕ ಹಲ್ಲೆ ಮಾಡಿರುವ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಬೈಕ್ ಸವಾರನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದು ಆದರೆ ಭಾಷೆ ವಿಚಾರಕ್ಕೆ ತಮ್ಮಮೇಲೆ ಹಲ್ಲೆ ನಡೆದಿದೆ ಎಂಬ ಆರೋಪಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂಬುದು ಈಗ ಹೊರಬಿದ್ದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬರುತ್ತದೆ.
ಭಾರತೀಯ ವಾಯುಪಡೆಯ (IAF) ಅಧಿಕಾರಿ ಶಿಲಾದಿತ್ಯ ಬೋಸ್ ತಮ್ಮ ಪತ್ನಿಯೊಂದಿಗೆ ಸೋಮವಾರ ಬೆಳಿಗ್ಗೆ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿತ್ತು. ಸ್ಕ್ವಾಡ್ರನ್ ಲೀಡರ್ ಪತ್ನಿ ಮಧುಮಿತಾ ದತ್ತಾ ಅವರು ನೀಡಿದ ದೂರಿನ ಆಧಾರದ ಮೇಲೆ, ಅಪರಿಚಿತ ವ್ಯಕ್ತಿಗಳ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದರ ಬೆನ್ನಲ್ಲೇ ಕಾರ್ಯಾಚರಣೆ ಕೈಗೊಂಡಿದ್ದ ಬೈಯಪ್ಪನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಡಿ. ದೇವರಾಜ ತಿಳಿಸಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು ನಡುವೆ ರಸ್ತೆಯಲ್ಲಿ ನಮ್ಮ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಆರೋಪಿಸಿದ್ದರು. ಗಾಯಗೊಂಡು ರಕ್ತ ಸುರಿಯುತ್ತಿರುವ ವೀಡಿಯೊ ಮಾಡಿ ಅದರಲ್ಲಿ ಘಟನೆ ಕುರಿತು ವಿವರಿಸಿದ್ದರು. ಅಲ್ಲದೆ ಆ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ವೀಡಿಯೊದಲ್ಲಿ ನಾವು ಸಿವಿ ರಾಮನ್ ನಗರ ಹಂತ 1ರಲ್ಲಿ ಇರುವ ಡಿಆರ್‌ಡಿಒನಲ್ಲಿ ವಾಸಿಸುತ್ತಿದ್ದೇವೆ. ಇಂದು ಬೆಳಿಗ್ಗೆ, ನನ್ನ ಹೆಂಡತಿ ನನ್ನನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ಯುತ್ತಿದ್ದಾಗ ಹಿಂದಿನಿಂದ ಬಂದ ಬೈಕ್ ನಮ್ಮ ಕಾರನ್ನು ಅಡ್ಡಗಟ್ಟಿತ್ತು. ನಾನು ಡ್ಯಾಶ್ ಕ್ಯಾಮ್ ದೃಶ್ಯಾವಳಿಯನ್ನು ಸಹ ಹಂಚಿಕೊಳ್ಳುತ್ತೇನೆ. ಸವಾರರಲ್ಲಿ ಒಬ್ಬರು ಕನ್ನಡದಲ್ಲಿ ನನ್ನನ್ನು ನಿಂದಿಸಲು ಪ್ರಾರಂಭಿಸಿದರು. ನನ್ನ ಕಾರಿನ ಮೇಲೆ ಡಿಆರ್‌ಡಿಒ ಸ್ಟಿಕ್ಕರ್ ನೋಡಿ, ‘ನೀವು ಡಿಆರ್‌ಡಿಒ ಜನರು’ ಎಂದು ಹೇಳಿದರು. ನಂತರ ಕನ್ನಡದಲ್ಲಿ ನಿಂದನೆಗಳು ಮುಂದುವರೆದವು. ನಂತರ ಆತ ನನ್ನ ಹೆಂಡತಿಯನ್ನು ನಿಂದಿಸಿದನು. ನನಗೆ ಅದನ್ನು ಸಹಿಸಲಾಗಲಿಲ್ಲ ಎಂದು ಅವರು ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ.
ನಾನು ಕಾರಿನಿಂದ ಇಳಿದ ತಕ್ಷಣ, ಅವನು ತನ್ನ ಬೈಕ್ ಕೀ ಇಂದ ನನ್ನ ಹಣೆಗೆ ಹೊಡೆದಿದ್ದಾನೆ. ನಾನು ಅಲ್ಲಿಯೇ ನಿಂತು ಕೂಗುತ್ತಾ ಜನರು ಸೇನೆ ಅಥವಾ ರಕ್ಷಣಾ ಪಡೆಗಳ ಯಾರನ್ನಾದರೂ ಹೀಗೆ ನಡೆಸಿಕೊಳ್ಳುತ್ತಾರೆಯೇ ಎಂದು ಕೇಳಿದೆ. ಈ ವೇಳೆ ಹೆಚ್ಚಿನ ಜನ ಸೇರಿದ್ದು ನಮ್ಮನ್ನೇ ನಿಂದಿಸಲು ಪ್ರಾರಂಭಿಸಿದರು. ಇನ್ನು ಅಷ್ಟಕ್ಕೆ ಸುಮ್ಮನಾಗದ ಆ ವ್ಯಕ್ತಿ ಕಲ್ಲನ್ನು ಎತ್ತಿಕೊಂಡು ನನ್ನ ಕಾರಿಗೆ ಹಾನಿ ಮಾಡಲು ಪ್ರಯತ್ನಿಸಿದ್ದಾನೆ. ನಾನು ಅವನನ್ನು ತಡೆಯಲು ಪ್ರಯತ್ನಿಸಿದಾಗ, ಅವನು ಮತ್ತೆ ನನಗೆ ಹೊಡೆದನು. ನನ್ನ ಮುಖದಿಂದ ರಕ್ತ ಸೋರುತ್ತಿರುವುದನ್ನು ನೋಡಬಹುದು. ಇದೇ ನಡೆದಿದ್ದು, ಅದೃಷ್ಟವಶಾತ್, ನನ್ನ ಹೆಂಡತಿ ನನ್ನನ್ನು ಅಲ್ಲಿಂದ ಕರೆದುಕೊಂಡು ಹೋದಳು ಎಂದು ವೀಡಿಯೊದಲ್ಲಿ ಹೇಳಿದ್ದಾರೆ.
ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಅಲ್ಲಿ ನಮಗೆ ತಕ್ಷಣದ ಸಹಾಯ ಸಿಗಲಿಲ್ಲ. ಕರ್ನಾಟಕ ಯಾಕೆ ಹೀಗಾಯಿತು. ನಾನು ಈ ಸ್ಥಿತಿಯನ್ನು ಕೇಳಿದ್ದೆ, ಆದರೆ ಇಂದಿನ ಘಟನೆಯ ನಂತರ,ನಾನು ಆಘಾತಕ್ಕೊಳಗಾಗಿದ್ದೇನೆ. ದೇವರು ನಮಗೆ ಸಹಾಯ ಮಾಡಲಿ. ಪ್ರತೀಕಾರ ತೀರಿಸಿಕೊಳ್ಳದಿರಲು ದೇವರು ನನಗೆ ಶಕ್ತಿಯನ್ನು ನೀಡಲಿ. ಆದರೆ ಕಾನೂನು ಮತ್ತು ಸುವ್ಯವಸ್ಥೆ ವಿಫಲವಾದರೆ, ನಾನು ಪ್ರತೀಕಾರ ತೀರಿಸಿಕೊಳ್ಳುತ್ತೇನೆ ಎಂದು ಬೋಸ್ ವೀಡಿಯೊದಲ್ಲಿ ಆರೋಪಿಸಿದ್ದಾರೆ.
ನಂತರ ಪೋಸ್ಟ್ ಮಾಡಿದ ಎರಡನೇ ವೀಡಿಯೊದಲ್ಲಿ, ಬೋಸ್ ತನ್ನ ಅನಾರೋಗ್ಯ ಪೀಡಿತ ತಂದೆಯನ್ನು ಭೇಟಿ ಮಾಡಲು ಕೋಲ್ಕತ್ತಾಗೆ ಹೋಗುತ್ತಿದ್ದೆ ಎಂದು ಬಹಿರಂಗಪಡಿಸಿದ್ದಾರೆ. ಹಲ್ಲೆಯನ್ನು “ಆಘಾತಕಾರಿ” ಘಟನೆ ಎಂದು ಹೇಳಿಕೊಂಡಿದ್ದಾರೆ.
ಆದರೆ ಹೊಸ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಹಲ್ಲೆ ಮಾಡಿದ್ದು ಕಂಡುಬರುತ್ತದೆ, ಅಧಿಕಾರಿ ತನ್ನ ಕೈಯಿಂದ ಸವಾರನ ಕುತ್ತಿಗೆಯನ್ನು ಗಟ್ಟಿಯಾಗಿ ಅಮುಕಿ ಹಿಡಿದುಕೊಂಡು ಬೈಕ್ ಸವಾರನನ್ನು ನೆಲಕ್ಕೆ ಬೀಳಿಸುವುದನ್ನು ವೀಡಿಯೊದಲ್ಲಿ ಕಾಣಬಹುದು. ನಂತರ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದಂತೆ ಕಂಡುಬಂದಿದೆ.
ಸಿಸಿಟಿವಿ ದೃಶ್ಯಾವಳಿಗಳು ಇದು ರಸ್ತೆ ಜಗಳದ ಸ್ಪಷ್ಟ ಪ್ರಕರಣವಾಗಿದ್ದು, ಇದಕ್ಕೂ ಭಾಷೆಗೆ ಯಾವುದೇ ಸಂಬಂಧವಿಲ್ಲ ಎಂದು ತೋರಿಸುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ವಿಕಾಸ್ ಅಜಾಗರೂಕತೆಯಿಂದ ವಾಹನ ಚಲಾಯಿಸಿದಾಗ ವಾಗ್ವಾದ ಪ್ರಾರಂಭವಾಯಿತು, ಇದಕ್ಕೆ ಮಹಿಳಾ ಅಧಿಕಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಂತರ ಇದು ವಾಗ್ವಾದಕ್ಕೆ ತಿರುಗಿತು, ನಂತರ ಅಧಿಕಾರಿ ಮತ್ತು ಬೈಕ್ ಸವಾರನ ನಡುವೆ ತೀವ್ರ ವಾಗ್ವಾದ ಮತ್ತು ಹೊಡೆದಾಟಕ್ಕೆ ಕಾರಣವಾಯಿತು. ಇಬ್ಬರೂ ಬೀದಿಯಲ್ಲಿ ಕುಸ್ತಿಪಟುಗಳಂತೆ ಹೋರಾಡಿದ್ದಾರೆ” ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ