ಮೃತ ತಂದೆ- ಪ್ರಜ್ಞಾಹೀನ ತಾಯಿಯ ಕಾಯುತ್ತ ಇಡೀ ರಾತ್ರಿ ಕಾಡಿನಲ್ಲಿ ಕಳೆದ ಐದು ವರ್ಷದ ಪುಟಾಣಿ…!

ದೇವಗಢ (ಒಡಿಶಾ): ಕೌಟುಂಬಿಕ ಕಲಹವೊಂದು ಸುಂದರ ಸಂಸಾರವನ್ನು ಹೇಗೆ ಛಿದ್ರಗೊಳಿಸಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಕ್ಷಣಿಕ ಕೋಪಕ್ಕೆ ಬಲಿಯಾದ ದಂಪತಿ ಕಾಡಿನ ನಡುವೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಐದು ವರ್ಷದ ಪುಟ್ಟ ಮಗ ಇಡೀ ರಾತ್ರಿ ಅಪ್ಪ-ಅಮ್ಮನ ಪಕ್ಕದಲ್ಲೇ ಕುಳಿತು, ಅವರು ಏಳಬಹುದು ಎಂದು ಕಾಯುತ್ತಾ ದಟ್ಟ ಕಾಡಿನ ಕತ್ತಲಲ್ಲಿ ಕಳೆದಿದ್ದಾನೆ. ಮರಿದಿನ ಬೆಳಿಗ್ಗೆ ನಡೆದುಕೊಂಡು ರಸ್ತೆಗೆ ಬಂದ ಬಾಲಕ ದಾರಿ ಹೋಕರ ಬಳಿ ಸಹಾಯ ಕೇಳಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಒಡಿಶಾದ ದೇವಗಢ ಜಿಲ್ಲೆಯ ಜಿಯಾನಂತಪಾಲಿ ಗ್ರಾಮದ ದುಷ್ಮಂತ್ ಮಾಝಿ ಮತ್ತು ಅವರ ಪತ್ನಿ ರಿಂಕಿ ಮಾಝಿ ಈ ದುರಂತ ಅಂತ್ಯ ಕಂಡ ದಂಪತಿ. ಶನಿವಾರ ಸಂಜೆ ತಮ್ಮ ಪುಟ್ಟ ಮಗನೊಂದಿಗೆ ಬೈಕ್‌ನಲ್ಲಿ ರಿಂಕಿಯ ತವರು ಮನೆಯಿಂದ ಮರಳುತ್ತಿದ್ದಾಗ ದಂಪತಿ ನಡುವೆ ಜಗಳ ಶುರುವಾಗಿದ್ದು, ದಾರಿಯ ಮಧ್ಯೆ ವಾದ-ವಿವಾದ ತಾರಕಕ್ಕೇರಿ, ದಲಕ್ ಗ್ರಾಮದ ಬಳಿ ನಿರ್ಜನ ಕಾಡಿನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿ ಒಳಗೆ ಹೋಗಿದ್ದಾರೆ.ಮನನೊಂದ ದಂಪತಿ ಅಲ್ಲೇ ವಿಷಕಾರಿ ಕೀಟನಾಶಕ ಸೇವಿಸಿದ್ದಾರೆ. ವಿಷದ ತೀವ್ರತೆಗೆ ತಂದೆ ದುಷ್ಮಂತ್ ಸ್ಥಳದಲ್ಲೇ ಸಾವನ್ನಪ್ಪಿದರೆ, ತಾಯಿ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ತೃಣಮೂಲ ಬಂಡಾಯ ಸಂಸದರನ್ನು ಯಾಕೆ ಆಹ್ವಾನಿಸಿದ್ದೀರಿ ? : ಸರ್ವಪಕ್ಷ ಸಭೆಗೆ ಕೆಲಕಾಲ ಬಹಿಷ್ಕರಿಸಿದ ವಿಪಕ್ಷಗಳು

ತಂದೆ-ತಾಯಿ ಯಾಕೆ ಏಳುತ್ತಿಲ್ಲ ಎಂಬುದು ತಿಳಿಯದ ಆ ಐದು ವರ್ಷದ ಬಾಲಕ, ಇಡೀ ರಾತ್ರಿ ಮೃತ ತಂದೆ ಮತ್ತು ಪ್ರಜ್ಞಾಹೀನ ತಾಯಿಯ ಪಕ್ಕದಲ್ಲೇ ಭಯದಿಂದ ನಡುಗುತ್ತಾ ಕುಳಿತಿದ್ದಾನೆ. ಕಾಡಿನ ಗಾಢ ಕತ್ತಲು, ಒಂಟಿತನ ಮತ್ತು ಹಸಿವಿನ ನಡುವೆಯೂ ಆ ಮಗು ತನ್ನ ಪೋಷಕರನ್ನು ಬಿಟ್ಟು ಕದಲಿಲ್ಲ.
ಭಾನುವಾರ ಬೆಳಿಗ್ಗೆ ಹೇಗೋ ಧೈರ್ಯ ಮಾಡಿ ಕಾಡಿನಿಂದ ರಸ್ತೆಗೆ ಬಂದ ಬಾಲಕ, ದಾರಿಯಲ್ಲಿ ಹೋಗುತ್ತಿದ್ದವರನ್ನು ತಡೆದು ಅಳುತ್ತಾ ತನ್ನ ಪೋಷಕರಿಗೆ ಏನೋ ಆಗಿದೆ ಎಂದು ತಿಳಿಸಿದ್ದಾನೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಕುಟುಂಬವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿಹೋಗಿತ್ತು; ದುಷ್ಮಂತ್ ಮತ್ತು ರಿಂಕಿ ಇಬ್ಬರೂ ಕೊನೆಯುಸಿರೆಳೆದಿದ್ದರು.
ಮಗು ಕೂಡ ವಿಷವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಿರಬಹುದು ಎಂಬ ಅನುಮಾನದ ಮೇಲೆ ಬಾಲಕನಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಂಪತಿ ನಡುವಿನ ದೀರ್ಘಕಾಲದ ಕಲಹವೇ ಈ ಸಾವಿಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement