ಮುಂಬೈ: ಬಾಲಿವುಡ್ ನಟಿ ಸೆಲೀನಾ ಜೇಟ್ಲಿ ಅವರು ತಮ್ಮ ಪತಿ ಪೀಟರ್ ಹಾಗ್ (Peter Haag) ವಿರುದ್ಧ ಕೌಟುಂಬಿಕ ಹಿಂಸಾಚಾರದ ಪ್ರಕರಣ (Domestic Violence Case) ದಾಖಲಿಸಿ ಭಾರಿ ಮೊತ್ತದ ಪರಿಹಾರ ಕೇಳಿದ್ದಾರೆ. ಮುಂಬೈನ ನ್ಯಾಯಾಲಯದ ಮೊರೆ ಹೋಗಿರುವ ಸೆಲೀನಾ ಅವರು ಪತಿಯಿಂದ ₹ 50 ಕೋಟಿ ಪರಿಹಾರವನ್ನು ಕೋರಿದ್ದಾರೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಸೆಲೀನಾ ಅವರು ಪೀಟರ್ ಹಾಗ್ ವಿರುದ್ಧ ಕ್ರೌರ್ಯ, ದೈಹಿಕ ಹಿಂಸೆ ಸೇರಿದಂತೆ “ನಿರಂತರವಾಗಿ ದೌರ್ಜನ್ಯದ ಕೃತ್ಯಗಳನ್ನು” ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
₹ 50 ಕೋಟಿ ಪರಿಹಾರದ ಜೊತೆಗೆ, ಹಾಗ್ ಅವರು ಮಾಸಿಕ ₹ 10 ಲಕ್ಷ ನಿರ್ವಹಣಾ ವೆಚ್ಚ (Maintenance) ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ, ಪೀಟರ್ ಅವರು ಇಬ್ಬರ ನಡುವಿನ ಸಾಮಾನ್ಯ ಆಸ್ತಿಗಳನ್ನು ಪರಭಾರೆ ಮಾಡುವುದನ್ನು ತಡೆಯಬೇಕು, ತಮ್ಮ ಆಭರಣಗಳು ಮತ್ತು ಇತರ ವಸ್ತುಗಳನ್ನು ಹಿಂದಿರುಗಿಸಬೇಕು ಮತ್ತು ತಾನು ವಾಸಿಸುವ ಮನೆ ಪ್ರವೇಶಿಸದಂತೆ ತಡೆಯಬೇಕು ಎಂದೂ ಕೋರಿದ್ದಾರೆ.
2011 ರಲ್ಲಿ ಆಸ್ಟ್ರಿಯಾದಲ್ಲಿ ವಿವಾಹವಾದ ಸೆಲೀನಾ ಮತ್ತು ಹಾಗ್ ದಂಪತಿಗೆ ಮೂವರು ಮಕ್ಕಳಿದ್ದಾರೆ. ಮದುವೆಯ ನಂತರ ಹಾಗ್ ಅವರು ತಮಗೆ ಕೆಲಸ ಮಾಡದಂತೆ ತಡೆದರು ಮತ್ತು ಆರ್ಥಿಕ ಸ್ವಾತಂತ್ರ್ಯ ಹಾಗೂ ಗೌರವವನ್ನು ಕಸಿದುಕೊಂಡರು ಎಂದು ಸೆಲೀನಾ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಸೆಲೀನಾ ಜೇಟ್ಲಿ ಮತ್ತು ಪೀಟರ್ ಹಾಗ್ 2011 ರಲ್ಲಿ ಆಸ್ಟ್ರಿಯಾದಲ್ಲಿ ವಿವಾಹವಾದರು. ಈ ದಂಪತಿಗೆ ಮಾರ್ಚ್ 2012 ರಲ್ಲಿ ಅವಳಿ ಗಂಡು ಮಕ್ಕಳು ಜನಿಸಿದರು, 2017 ರಲ್ಲಿ, ದಂಪತಿಗೆ ಮತ್ತೆ ಅವಳಿ ಗಂಡು ಮಕ್ಕಳು ಜನಿಸಿದರು. ಆದರೆ ಶಿಶುಗಳಲ್ಲಿ ಒಂದು ಶಿಶುವು ಹೈಪೋಪ್ಲಾಸ್ಟಿಕ್ ಹೃದಯ ಸ್ಥಿತಿಯಿಂದಾಗಿ ಬದುಕುಳಿಯಲಿಲ್ಲ ಎಂದು ಹೇಳಲಾಗಿದೆ.
ಬಾಲಿವುಡ್‌ನಲ್ಲಿ ನೋ ಎಂಟ್ರಿ, ಗೋಲ್‌ಮಾಲ್ ರಿಟರ್ನ್ಸ್, ಥ್ಯಾಂಕ್ ಯೂ, ಅಪ್ನಾ ಸಪ್ನಾ ಮನಿ ಮನಿ ಮತ್ತು ಮನಿ ಹೈ ತೋ ಹನಿ ಹೈ ಮುಂತಾದ ಸಿನಿಮಾಗಳಲ್ಲಿ ನಟನೆಯಿಂದ ಫೇಮಸ್ ಆಗಿದ್ದ ಸೆಲಿನಾ ಜೇಟ್ಲಿ ಇತ್ತೀಚಿನ ವರ್ಷಗಳಿಂದ ಸಿನಿಮಾದಿಂದ ದೂರವೇ ಉಳಿದಿದ್ದರು. ಈಗ ತಮ್ಮ ವೈಯಕ್ತಿಕ ಜೀವನದ ಕಲಹದಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ