ನಿಷೇಧಿಸಿದ್ರೂ ಪಾಕಿಸ್ತಾನದಲ್ಲಿ ‘ಧುರಂಧರ್’ ಹವಾ: 12 ದಿನದಲ್ಲಿ 20 ಲಕ್ಷಕ್ಕೂ ಹೆಚ್ಚು ಸಲ ಅಕ್ರಮವಾಗಿ ಡೌನ್‌ಲೋಡ್‌…!

ನವದೆಹಲಿ: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ‘ಧುರಂಧರ್’ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಪಾಕಿಸ್ತಾನ ಮತ್ತು ಕೆಲವು ಗಲ್ಫ್ ರಾಷ್ಟ್ರಗಳು ಈ ಚಿತ್ರವನ್ನು ನಿಷೇಧಿಸಿದ್ದರೂ ಸಹ, ಚಿತ್ರದ ಜನಪ್ರಿಯತೆ ಕುಗ್ಗಿಲ್ಲ. ಬದಲಾಗಿ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ(ISI)ಗೆ ಈ ಸಿನಿಮಾ ಈಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
1999ರ ಕಂದಹಾರ್ ವಿಮಾನ ಅಪಹರಣ, 26/11 ಮುಂಬೈ ದಾಳಿ ಮತ್ತು ಲಿಯಾರಿ ಗ್ಯಾಂಗ್ ವಾರ್ ವಿಷಯಗಳನ್ನು ಒಳಗೊಂಡಿರುವ ಈ ಚಿತ್ರವನ್ನು ತಡೆಯಲು ಪಾಕಿಸ್ತಾನ ಸರ್ಕಾರ ಹರಸಾಹಸ ಪಡುತ್ತಿದೆ. ಆದರೆ, ಇಂಟರ್ನೆಟ್ ಲೋಕದಲ್ಲಿ ಐಎಸ್‌ಐ (ISI) ತಡೆಯಲುಪ್ರಯತ್ನಿಸುತ್ತಿರುವುದು ಸಂಪೂರ್ಣವಾಗಿ ವಿಫಲವಾಗಿದೆ. ಯಾಕೆಂದರೆ ನಿಷೇಧವಿದ್ದರೂ ಈ ಸಿನೆಮಾವನ್ನು ಕಳೆದ ಕೇವಲ ಎರಡು ವಾರಗಳಲ್ಲಿ ಪಾಕಿಸ್ತಾನದಲ್ಲಿ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಬಾರಿ ಚಿತ್ರವನ್ನು ಅಕ್ರಮವಾಗಿ ಡೌನ್‌ಲೋಡ್ ಮಾಡಲಾಗಿದೆ. ಈ ಮೂಲಕ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಪೈರಸಿಗೆ ಒಳಗಾದ ಚಿತ್ರಗಳ ಪಟ್ಟಿಯಲ್ಲಿ ‘2.0’ ಮತ್ತು ‘ರಯೀಸ್’ ಚಿತ್ರಗಳನ್ನು ಇದು ಹಿಂದಿಕ್ಕಿದೆ.

ಮನೋವೈಜ್ಞಾನಿಕ ಗೆಲುವು ಸಾಧಿಸಿದ ಭಾರತ
ಪಾಕಿಸ್ತಾನವು ಭಯೋತ್ಪಾದನೆಯ ತಾಣ ಎಂಬ ಸಂದೇಶವನ್ನು ಈ ಚಿತ್ರವು ಜಗತ್ತಿಗೆ ಸಾರಿದೆ. ಚಿತ್ರದ ಮೇಲಿನ ನಿಷೇಧದಿಂದ ನಿರ್ಮಾಪಕರಿಗೆ ಸುಮಾರು 50-60 ಕೋಟಿ ರೂ. ನಷ್ಟವಾಗಿರಬಹುದು, ಆದರೆ ಭಾರತವು ತನ್ನ ಕಟು ಸತ್ಯದ ಸಂದೇಶವನ್ನು ಪಾಕಿಸ್ತಾನದ ಮನೆಮನಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಇದು ಭಾರತಕ್ಕೆ ಸಂದ ಪ್ರಮುಖ ‘ಮನೋವೈಜ್ಞಾನಿಕ ಜಯ’ ಎಂದು ವಿಶ್ಲೇಷಿಸಲಾಗುತ್ತಿದೆ.
ಲಿಯಾರಿ ಚಿತ್ರಣಕ್ಕೆ ಪಾಕ್ ಆಕ್ಷೇಪ: ‘ಮೇರಾ ಲಿಯಾರಿ’ ಸಿನಿಮಾ ಘೋಷಣೆ
ಚಿತ್ರದಲ್ಲಿ ಕರಾಚಿಯ ಲಿಯಾರಿ ಪ್ರದೇಶವನ್ನು ತೋರಿಸಿರುವ ರೀತಿಗೆ ಪಾಕಿಸ್ತಾನ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಲಿಯಾರಿಯ “ಒಳ್ಳೆಯ ಮುಖ”ವನ್ನು ತೋರಿಸಲು ಪಾಕಿಸ್ತಾನವು ‘ಮೇರಾ ಲಿಯಾರಿ’ ಎಂಬ ಚಿತ್ರವನ್ನು ತುರ್ತಾಗಿ ಬಿಡುಗಡೆ ಮಾಡಲು ಮುಂದಾಗಿದೆ. ಸಿಂಧ್ ಪ್ರಾಂತ್ಯದ ಸಚಿವ ಶರ್ಜೀಲ್ ಇನಾಮ್ ಮೆಮನ್ ಅವರು ಈ ಬಗ್ಗೆ ‘X’ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ಭಾರತವು ಲಿಯಾರಿಯನ್ನು ಹಿಂಸಾತ್ಮಕವಾಗಿ ಚಿತ್ರಿಸಿ ಅಪಪ್ರಚಾರ ಮಾಡುತ್ತಿದೆ ಎಂದು ದೂರಿದ್ದಾರೆ.
“ಲಿಯಾರಿ ಅಂದರೆ ಹಿಂಸೆಯಲ್ಲ, ಅದು ಸಂಸ್ಕೃತಿ ಮತ್ತು ಪ್ರತಿಭೆಯ ತಾಣ. ಮುಂದಿನ ತಿಂಗಳು ‘ಮೇರಾ ಲಿಯಾರಿ’ ಸಿನಿಮಾ ಬಿಡುಗಡೆಯಾಗಲಿದೆ. ಎಂದು ಶರ್ಜೀಲ್ ಇನಾಮ್ ಮೆಮನ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ಡಾರ್ಕ್ ವೆಬ್ ಮತ್ತು ವಿಪಿಎನ್ ಮೂಲಕ ವೀಕ್ಷಣೆ
ಪಾಕಿಸ್ತಾನದ ನಾಗರಿಕರು ಟೆಲಿಗ್ರಾಮ್, ಟೊರೆಂಟ್ ಮತ್ತು ವಿಪಿಎನ್ (VPN) ಬಳಸಿ ಈ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. ಶ್ರೀಲಂಕಾ, ನೇಪಾಳ ಮತ್ತು ಮಲೇಷ್ಯಾ ಸರ್ವರ್‌ಗಳನ್ನು ಬಳಸಿ ಪೈರಸಿ ಲಿಂಕ್‌ಗಳನ್ನು ಹಂಚಲಾಗುತ್ತಿದೆ. ಚಿತ್ರದ ಬಗ್ಗೆ ದಿನೇ ದಿನೇ ಕುತೂಹಲ ಹೆಚ್ಚುತ್ತಿರುವ ಮತ್ತು ಅದನ್ನು ಅಕ್ರಮವಾಗಿ ಡೌನ್‌ಲೋಡ್ ಮಾಡಲಾಗುತ್ತಿರುವ ರೀತಿಯನ್ನು ನೋಡಿದರೆ ಐಎಸ್‌ಐ ತನ್ನ ಕಾರ್ಯಗಳಲ್ಲಿ ವಿಫಲವಾಗಿದೆ ಎಂದು ತೋರಿಸುತ್ತದೆ ಎಂದು ತಜ್ಞರು ಗಮನಸೆಳೆದಿದ್ದಾರೆ. ಡೌನ್‌ಲೋಡ್‌ಗಳ ಸಂಖ್ಯೆಯಲ್ಲಿನ ಈ ಏರಿಕೆ ಪಾಕಿಸ್ತಾನದ ಜನರು ಚಿತ್ರದ ಬಗ್ಗೆ ಹೊಂದಿರುವ ಕುತೂಹಲವನ್ನು ಸೂಚಿಸುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಪಾಕಿಸ್ತಾನದ ಕೆಲವರು ಚಿತ್ರದ ನಿರೂಪಣೆಯನ್ನು ಒಪ್ಪದಿದ್ದರೂ, ಅನೇಕರು ಚಿತ್ರದಲ್ಲಿನ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಪಾಕಿಸ್ತಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ರೀಲ್‌ಗಳು ಮತ್ತು ಮೀಮ್‌ಗಳನ್ನು ರಚಿಸುತ್ತಿರುವುದು ಬೆಳಕಿಗೆ ಬಂದಿದೆ.

ನ್ಯಾಯಾಲಯದ ಮೆಟ್ಟಿಲೇರಿದ ಪಿಪಿಪಿ (PPP)
ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಚಿತ್ರಗಳನ್ನು ಸಿನಿಮಾದಲ್ಲಿ ಬಳಸಿದ್ದಕ್ಕಾಗಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP) ಕರಾಚಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಆರಂಭಿಸಿದೆ. ಚಿತ್ರದ ನಟರು ಮತ್ತು ತಾಂತ್ರಿಕ ತಂಡದ ವಿರುದ್ಧ ಎಫ್‌ಐಆರ್ ದಾಖಲಿಸಲು ಮನವಿ ಮಾಡಿದೆ. ಧುರಂಧರ್ ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ಚಿತ್ರದ ತಾರಾಬಳಗದಲ್ಲಿ ರಣವೀರ್ ಸಿಂಗ್ ಅವರು ಐಎಸ್‌ಐ ಬೆಂಬಲಿತ ಭಯೋತ್ಪಾದಕ ಜಾಲಗಳನ್ನು ನಾಶಮಾಡಲು ಪಾಕಿಸ್ತಾನದ ಲಿಯಾರಿಯಲ್ಲಿ ನುಸುಳುವ ಭಾರತೀಯ ಗೂಢಚಾರ ಹಮ್ಜಾ ಪಾತ್ರವನ್ನು ನಿರ್ವಹಿಸಿದ್ದಾರೆ. ಇವರಲ್ಲದೆ ಪ್ರಮುಖ ತಾರಾಗಣದಲ್ಲಿ ಅಕ್ಷಯ ಖನ್ನಾ, ಸಂಜಯ ದತ್, ಆರ್. ಮಾಧವನ್, ಅರ್ಜುನ ರಾಂಪಾಲ ಮತ್ತು ರಾಕೇಶ ಬೇಡಿ ಇದ್ದಾರೆ.
ಒಟ್ಟಾರೆಯಾಗಿ, ಪಾಕಿಸ್ತಾನವು ಎಷ್ಟೇ ನಿರ್ಬಂಧ ಹೇರಿದರೂ ‘ಧುರಂಧರ್’ ಚಿತ್ರದ ಹವಾ ಮಾತ್ರ ಕಡಿಮೆಯಾಗುತ್ತಿಲ್ಲ.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement