4 ಗಂಟೆ ಆಕಾಶದಲ್ಲೇ ಸುತ್ತಾಡಿದ ಹೈದರಾಬಾದ್-‌ ಹುಬ್ಬಳ್ಳಿ ವಿಮಾನ ; ಪ್ರಯಾಣಿಕರ ಆಕ್ರಂದನ, ಪ್ರಾರ್ಥನೆ….

ಬೆಂಗಳೂರು: ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ ವಿಮಾನವೊಂದು ಹವಾಮಾನ ವೈಪರೀತ್ಯಕ್ಕೆ ಸಿಲುಕಿ, ಸುಮಾರು ನಾಲ್ಕು ಗಂಟೆಗಳ ಕಾಲ ಆಕಾಶದಲ್ಲೇ ಸುದೀರ್ಘ ಹಾರಾಟ ನಡೆಸಿದ ಆತಂಕಕಾರಿ ಘಟನೆ ನಡೆದಿದೆ. ವಿಮಾನವು ತೀವ್ರವಾಗಿ ಅಲುಗಾಡತೊಡಗಿದಾಗ ಪ್ರಯಾಣಿಕರು ಪ್ರಾಣಭಯದಿಂದ ಕೂಗಿಕೊಂಡ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಫ್ಲೈ-91 (Fly91) ಸಂಸ್ಥೆಗೆ ಸೇರಿದ IC3401 ವಿಮಾನವು ಭಾನುವಾರ (ಏ.19) ಮಧ್ಯಾಹ್ನ 3 ಗಂಟೆಗೆ ಹೈದರಾಬಾದ್‌ನಿಂದ ಹೊರಟಿತ್ತು. ನಿಗದಿಯಂತೆ ಸಂಜೆ 4:30ಕ್ಕೆ ಇದು ಹುಬ್ಬಳ್ಳಿಯಲ್ಲಿ ಇಳಿಯಬೇಕಿತ್ತು. ಆದರೆ ವಿಮಾನವು ಹುಬ್ಬಳ್ಳಿಯ ಸಮೀಪಕ್ಕೆ ಬರುತ್ತಿದ್ದಂತೆ ಹವಾಮಾನ ಏರುಪೇರಾದ ಕಾರಣ, ಪೈಲಟ್‌ಗಳಿಗೆ ರನ್‌ವೇ ಮೇಲೆ ವಿಮಾನ ಇಳಿಸಲು ಸಾಧ್ಯವಾಗಲಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಲ್ಯಾಂಡಿಂಗ್‌ ಪ್ರಕ್ರಿಯೆಯನ್ನು ಅರ್ಧಕ್ಕೆ ಕೈಬಿಡಲಾಯಿತು.

ಆಕಾಶದಲ್ಲೇ ಪ್ರಾರ್ಥನೆ, ಕಣ್ಣೀರು
ವಿಮಾನ ನಿಲ್ದಾಣದ ಸುತ್ತಮುತ್ತ ಹವಾಮಾನ ಸರಿಯಿಲ್ಲದ ಕಾರಣ, ವಿಮಾನವು ದಾವಣಗೆರೆ, ಶಿವಮೊಗ್ಗ ಹಾಗೂ ಮುಂಡಗೋಡು ವ್ಯಾಪ್ತಿಯಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಆಕಾಶದಲ್ಲೇ ವೃತ್ತಾಕಾರವಾಗಿ ಸುತ್ತಬೇಕಾಯಿತು. ಈ ವೇಳೆ ವಿಮಾನವು ತೀವ್ರವಾಗಿ ಅಲುಗಾಡುತ್ತಿತ್ತು. ವಿಮಾನದ ಒಳಗಿದ್ದ ಮಹಿಳೆಯೊಬ್ಬರು ಕೈಮುಗಿದು ಅಳುತ್ತಾ ದೇವರಲ್ಲಿ ಪ್ರಾರ್ಥಿಸುತ್ತಿರುವ ವಿಡಿಯೋ ಹೊರಬಂದಿದೆ.
ಮತ್ತೊಂದೆಡೆ ಪ್ರಯಾಣಿಕರು “ಓ ದೇವರೇ… ಯಾಕೆ ಹೀಗಾಗುತ್ತಿದೆ?” ಎಂದು ಆತಂಕದಿಂದ ಕಿರುಚುತ್ತಿದ್ದರೆ, ಇನ್ನು ಕೆಲವರು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದರು. “ನಮ್ಮನ್ನು ಕೂಡಲೇ ಬೆಂಗಳೂರು ಅಥವಾ ಬೆಳಗಾವಿಗೆ ಕರೆದುಕೊಂಡು ಹೋಗಿ” ಎಂದು ಪ್ರಯಾಣಿಕರು ಪೈಲಟ್ ಬಳಿ ಅಂಗಲಾಚಿದರು. ಅಂತಿಮವಾಗಿ, ಸಂಜೆ 7:30ರ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆದ ಬಳಿಕ ಎಲ್ಲರೂ ನಿಟ್ಟುಸಿರು ಬಿಟ್ಟರು.

ವಿಮಾನಯಾನ ಸಂಸ್ಥೆಯ ಸ್ಪಷ್ಟನೆ
ಈ ಕುರಿತು ಪ್ರತಿಕ್ರಿಯಿಸಿರುವ ಫ್ಲೈ-91 ಸಂಸ್ಥೆ, “ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷವಿರಲಿಲ್ಲ. ಹವಾಮಾನ ವೈಪರೀತ್ಯದ ಕಾರಣ ಶಿಷ್ಟಾಚಾರದಂತೆ ವಿಮಾನವನ್ನು ಬೆಂಗಳೂರಿಗೆ ಡೈವರ್ಟ್ ಮಾಡಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಇದರಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ” ಎಂದು ತಿಳಿಸಿದೆ.
ವಿಮಾನದಲ್ಲಿದ್ದ ಪ್ರಯಾಣಿಕರ ಸಂಬಂಧಿಕರು ಏರ್‌ಲೈನ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ವಿಮಾನವು ಗಂಟೆಗಟ್ಟಲೆ ಗಾಳಿಯಲ್ಲೇ ಇದ್ದರೂ ನಮಗೆ ಯಾವುದೇ ಸರಿಯಾದ ಮಾಹಿತಿ ನೀಡಿಲ್ಲ. ಸಂವಹನದ ಕೊರತೆಯಿಂದಾಗಿ ನಾವು ಕೆಳಗೆ ಆತಂಕ ಅನುಭವಿಸಬೇಕಾಯಿತು” ಎಂದು ಅವರು ದೂರಿದ್ದಾರೆ.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement