ಮುಂಬೈ: ಮಹಾರಾಷ್ಟ್ರದ ಮುಂಬೈ ಕರಾವಳಿಯಲ್ಲಿ ನಡೆದ ಬೋಟ್ ಅಪಘಾತದಲ್ಲಿ 13 ಮಂದಿ ಸಾವಿಗೀಡಾಗಿದ್ದಾರೆ. ಮುಂಬೈಯ ಐಕಾನಿಕ್ ಗೇಟ್ವೇ ಆಫ್ ಇಂಡಿಯಾ (Iconic Gateway of India)ದಿಂದ ಎಲಿಫೆಂಟಾ ದ್ವೀಪಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ನೀಲ್ ಕಮಲ್ ಹೆಸರಿನ ಬೋಟ್ಗೆ ಸ್ಪೀಡ್ ಬೋಟ್ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.
ಸದ್ಯ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬೋಟ್ನಲ್ಲಿದ್ದ 13 ಮಂದಿ ಮೃತಪಟ್ಟಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಉಳಿದ 94 ಮಂದಿಯನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಿಬ್ಬಂದಿ ಸೇರಿದಂತೆ ಸುಮಾರು 110ಕ್ಕೂ ಹೆಚ್ಚು ಪ್ರವಾಸಿಗರನ್ನು ಹೊತ್ತ ದೋಣಿಯು ಐಕಾನಿಕ್ ಗೇಟ್ವೇ ಆಫ್ ಇಂಡಿಯಾದಿಂದ ಎಲಿಫೆಂಟಾ ದ್ವೀಪಕ್ಕೆ ತೆರಳುತ್ತಿದ್ದಾಗ ಬುಧವಾರ ಸಂಜೆ 5:15ರ ಸುಮಾರಿಗೆ ಈ ಘಟನೆ ನಡೆದಿದೆ. ನೌಕಾಪಡೆಯ ಸ್ಪೀಡ್ ಬೋಟ್ ನ ಎಂಜಿನ್ ಪರೀಕ್ಷೆ ವೇಳೆ ಈ ದುರ್ಘಟನೆ ಸಂಭವಿಸಿದೆ.
ಅಪಘಾತ ಸಂಭವಿಸುವ ಕೆಲವೇ ಕ್ಷಣಗಳ ಮುಂಚೆ ಸೆರೆಹಿಡಿದ ದೃಶ್ಯಗಳಲ್ಲಿ ನೌಕಾಪಡೆಯ ಸ್ಪೀಡ್ ಬೋಟ್ ಚಲಾಯಿಸಲಾಗುತ್ತಿತ್ತು. ಆದರೆ, ಅತಿವೇಗದ ಸ್ಪೀಡ್ ಬೋಟ್ ಯು-ಟರ್ನ್ ತೆಗೆದುಕೊಂಡು ಹಡಗಿನ ಸಮೀಪಕ್ಕೆ ಬಂದಾಗ ಪ್ರಯಾಣಿಕರಿದ್ದ ಬೋಟ್ಗೆ ಬಲವಾಗಿ ಡಿಕ್ಕಿ ಹೊಡೆದಿರುವುದು ಕಂಡುಬಂದಿದೆ.
ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರಿಕಾ ದೋಣಿಗಳ ಸಹಾಯದಿಂದ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ. 11 ನೌಕಾ ಪಡೆಯ ದೋಣಿಗಳು, ಕರಾವಳಿ ಪೊಲೀಸ್ನ 3 ದೋಣಿಗಳು ಮತ್ತು ಕೋಸ್ಟ್ ಗಾರ್ಡ್ನ 1 ದೋಣಿಯನ್ನು ರಕ್ಷಣಾ ಕಾರ್ಯಾಚರಣೆಗಾಗಿ ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ. 4 ಹೆಲಿಕಾಪ್ಟರ್ಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಪೊಲೀಸ್ ಸಿಬ್ಬಂದಿ, ಜವಾಹರಲಾಲ್ ನೆಹರೂ ಬಂದರು ಪ್ರಾಧಿಕಾರದ ಕಾರ್ಮಿಕರು ಮತ್ತು ಈ ಪ್ರದೇಶದ ಮೀನುಗಾರರೂ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲ ಯಂತ್ರೋಪಕರಣಗಳನ್ನು ಒದಗಿಸಲು ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದಾರೆ. ದುರಂತದಲ್ಲಿ ಮೃತಪಟ್ಟವರ ಕುಟಂಬಕ್ಕೆ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಘೋಷಿಸಿದ್ದಾರೆ.
“ಎಲಿಫೆಂಟಾ ಕಡೆಗೆ ಹೋಗುತ್ತಿದ್ದ ನೀಲ್ ಕಮಲ್ ದೋಣಿ ಅಪಘಾತಕ್ಕೀಡಾಗಿರುವ ಬಗ್ಗೆ ವರದಿಗಳು ಬಂದಿವೆ. ನೌಕಾಪಡೆ, ಕೋಸ್ಟ್ ಗಾರ್ಡ್, ಬಂದರು ಮತ್ತು ಪೊಲೀಸ್ ತಂಡಗಳ ದೋಣಿಗಳನ್ನು ರಕ್ಷಣಾ ಕಾರ್ಯಕ್ಕೆ ತಕ್ಷಣವೇ ಕಳುಹಿಸಲಾಗಿದೆ. ಅದೃಷ್ಟವಶಾತ್ ಹೆಚ್ಚಿನ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲ ಯಂತ್ರೋಪಕರಣಗಳನ್ನು ನಿಯೋಜಿಸಲು ಜಿಲ್ಲಾಡಳಿತಕ್ಕೆ ಆದೇಶ ನೀಡಲಾಗಿದೆʼʼ ಎಂದು ಸಿಎಂ ಫಡ್ನವೀಸ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ