
ಬೆಳಗಾವಿ: ಹಣಕಾಸಿನ ವಿಚಾರಕ್ಕಾಗಿ ನಡೆದ ಜಗಳದಲ್ಲಿ ಒಬ್ಬ ಸೈನಿಕ ಇನ್ನೊಬ್ಬ ಸೈನಿಕನಿಗೆ ಗುಂಡು ಹಾರಿಸಿದ ಘಟನೆ ಜಿಲ್ಲೆಯ ಗೋಕಾಕ ತಾಲ್ಲೂಕಿನ ರಾಜನಕಟ್ಟೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ರಾಜನಕಟ್ಟೆ ಗ್ರಾಮದವರಾದ ಯೋಧ ನಂಜುಂಡಿ ಬೂದಿಹಾಳ (32) ಗುಂಡು ಹಾರಿಸಿದ ಆರೋಪಿ. ಇದೇ ಊರಿನ ಬಸಪ್ಪ ಮೈಲಪ್ಪ ಬಂಬರ್ಗಾ (32) ಎಂಬವರು ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಬಸಪ್ಪ ಅವರ ಹೊಟ್ಟೆಗೆ ಗುಂಡು ತಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಂಜುಂಡಿ ಹಾಗೂ ಬಸಪ್ಪ ಮಧ್ಯೆ ನಡೆದ ಈ ಘಟನೆಗೆ ಹಣಕಾಸಿನ ವ್ಯವಹಾರ ಕಾರಣ ಎಂದು ಮೇಲ್ನೊಟಕ್ಕೆ ತಿಳಿದುಬಂದಿದೆ. ಮಂಗಳವಾರ ಸಂಜೆ ಇವರಿಬ್ಬರ ನಡುವೆ ಹಣಕಾಸಿನ ವಿಚಾರಕ್ಕೆ ಜಗಳ ನಡೆದು ವಿಕೋಪಕ್ಕೆ ಹೋಗಿ ಒಬ್ಬ ಯೋಧ ಮತ್ತೊಬ್ಬ ಯೋಧನ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಹೇಳಲಾಗಿದೆ. ಇಬ್ಬರು ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದು ಇಬ್ಬರೂ ಗೋಕಾಕ ತಾಲೂಕಿನ ರಾಜನಕಟ್ಟಿ ಗ್ರಾಮದವರು ಎನ್ನಲಾಗಿದೆ. ಅಂಕಲಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ